ಬೆಳ್ತಂಗಡಿ ತಾಲೂಕಿನಲ್ಲಿ ಭಾರೀ ಮಳೆ: ತುಂಬಿ ಹರಿಯುತ್ತಿರುವ ನದಿಗಳು; ಪ್ರವಾಹ ಭೀತಿ

ಬೆಳ್ತಂಗಡಿ : ನಿರೀಕ್ಷೆಯಂತೆ ತಾಲೂಕಿನಾದ್ಯಂತ ಬೆಳಗ್ಗಿನಿಂದಲೇ ಭಾರೀ ಮಳೆಯಾಗುತ್ತಿದ್ದು, ಧರ್ಮಸ್ಥಳದಲ್ಲಿ ನೇತ್ರಾವತಿ ಸೇರಿದಂತೆ ತಾಲೂಕಿನಲ್ಲಿ ಹರಿಯುವ ಬಹುತೇಕ ನದಿಗಳು ತುಂಬಿ ಹರಿಯುತ್ತಿವೆ. ಇನ್ನೊಂದೆಡೆ, ನದಿ ತೀರದ ನಿವಾಸಿಗಳಲ್ಲಿ ನೆರೆ ಭೀತಿಯೂ ಕಾಡುತ್ತಿದೆ.
ಕೆಲವೆಡೆ ಭಾರೀ ಗಾಳಿ ಬೀಸುತ್ತಿರುವ ಕಾರಣ, ಬೃಹತ್ ಮರಗಳಿರುವ ಅರಣ್ಯದಂಚಿನ ಪ್ರದೇಶದ ನಿವಾಸಿಗಳಲ್ಲಿ ಮರಗಳ ಬಗ್ಗೆಯೂ ಆತಂಕವಿದೆ. ಬೆಳ್ತಂಗಡಿ-ಕಿಲ್ಲೂರು ರಸ್ತೆಯ ಪುತ್ರಬೈಲು ಬಳಿ ಸ್ಥಳೀಯ ನದಿಯ ನೀರಿನ ನೆರೆ ಪರಿಣಾಮ ರಸ್ತೆಗೆ ನೀರು ತುಂಬಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ನೆರಿಯಾ ಸಿಯೋನ್ ಆಶ್ರಮದ ತಡೆಗೋಡೆ ಕುಸಿದು ನಷ್ಟ ಉಂಟಾಗಿದೆ. ಬಹುತೇಕ ಕಿಂಡಿ ಅಣೆಕಟ್ಟುಗಳ ಮೇಲೆ ನೀರು ಉಕ್ಕಿ ಹರಿಯುತ್ತಿದ್ದು, ಹಲವೆಡೆ ಸಂಪರ್ಕಗಳು ಕಡಿತಗೊಂಡಿವೆ.
ತಾಲೂಕಿನ ಕೆಲವೆಡೆ ಮುಖ್ಯ ರಸ್ತೆ ಪ್ರದೇಶದ ಹಳ್ಳ-ಕೊಳ್ಳ, ಚರಂಡಿಗಳು ತುಂಬಿ ಹರಿಯುತ್ತಿದ್ದು, ನಾವೂರು ಪೇಟೆಯಲ್ಲಿ ಅಂಗಡಿಗಳಿಗೆ ನೀರು ನುಗ್ಗಿದೆ.
ಮುಂಡಾಜೆ ಸುತ್ತಮುತ್ತ ಭಾರೀ ಮಳೆ ಸುರಿಯುತ್ತಿದ್ದು, ನದಿ, ತೋಡುಗಳು ತುಂಬಿ ಹರಿದು ಗದ್ದೆ, ತೋಟಗಳಿಗೆ ನೀರು ನುಗ್ಗಿದ್ದು, ಕೆಲ ಮನೆಗಳಿಗೂ ನೀರು ನುಗ್ಗಿದೆ. ತೋಟಗಳು ಜಲಾವೃತವಾಗಿದ್ದು, ಕೃಷಿಕರು ಕೃಷಿ ಹಾನಿ ಭೀತಿಯಲ್ಲಿದ್ದಾರೆ.
ಮುಂಡಾಜೆ-ಧರ್ಮಸ್ಥಳ ರಸ್ತೆಯಲ್ಲಿ ಭೂಕುಸಿತವಾಗಿದ್ದು, ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಉಜಿರೆ-ಧರ್ಮಸ್ಥಳ ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ನುಗ್ಗಿದ್ದು, ನದಿಯಂತೆ ಹರಿಯುತ್ತಿದೆ.
ತಾಲೂಕಿನ ವಿವಿಧೆಡೆಗಳಲ್ಲಿ ಮಳೆಯಿಂದ ಹಾನಿಗಳಾಗಿರುವ ಬಗ್ಗೆ ಮಾಹಿತಿಗಳಿದ್ದು, ಮಳೆ ನಿರಂತರವಾಗಿ ಮುಂದುವರಿಯುತ್ತಿರುವುದು ಜನರಲ್ಲಿ ಆತಂಕ ಮೂಡಿಸಲು ಕಾರಣವಾಗಿದೆ.
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.






