ಕರ್ನಾಟಕ ಉಲೆಮಾ ಕೋಆರ್ಡಿನೇಶನ್ ಸಮಿತಿಯಲ್ಲಿ ನಾನಿಲ್ಲ : ದ.ಕ. ಜಿಲ್ಲಾ ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್ ಸ್ಪಷ್ಟನೆ

ಮಂಗಳೂರು: ಕರ್ನಾಟಕ ಉಲೆಮಾ ಕೋಆರ್ಡಿನೇಶನ್ ಸಮಿತಿಯಲ್ಲಿ ನನ್ನನ್ನು ನಿರ್ದೇಶಕ ಎಂದು ಉಲ್ಲೇಖಿಸಲಾಗಿದೆ. ಆದರೆ ನಾನು ಆ ಸಮಿತಿಯಲ್ಲಿಲ್ಲ ಮತ್ತು ಸಮಿತಿಯ ನಿರ್ದೇಶಕನೂ ಅಲ್ಲ. ಆ ಸಮಿತಿಗೂ ನನಗೂ ಸಂಬಂಧವೇ ಇಲ್ಲ ಎಂದು ದ.ಕ. ಜಿಲ್ಲಾ ಖಾಝಿ ಅಲ್ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ತ್ವಾಖಾ ಅಹ್ಮದ್ ಮುಸ್ಲಿಯಾರ್, ವಕ್ಫ್ ತಿದ್ದುಪಡಿ ಕಾಯ್ದೆಯ ವಿರುದ್ಧ ನಡೆಸುವ ಪ್ರತಿಭಟನೆಗೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ಇದೆ. ತಾವು ಬನ್ನಿ ಎಂದು ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಆಹ್ವಾನಿಸಿದಾಗ ನಾನು ಹೋಗಿದ್ದೆ. ಆ ಬಳಿಕ ನನಗೆ ಕಮಿಟಿ ರಚನೆಯ ಬಗ್ಗೆ ತಿಳಿದು ಬಂತು. ನಂತರ ನಡೆದ ಪ್ರತಿಭಟನೆಯಲ್ಲೂ ಭಾಗವಹಿಸಿದ್ದೆನು. ಆದರೆ ಕಮಿಟಿಯ ವಿಸ್ತರಣೆ ಬಗ್ಗೆ ನನಗೆ ಮಾಹಿತಿ ಇರಲಿಲ್ಲ. ಇದೀಗ ನನ್ನನ್ನು ಕಮಿಟಿಯ ನಿರ್ದೇಶಕ ಎಂದು ಉಲ್ಲೇಖಿಸಲಾಗಿದೆ. ಇದು ನನ್ನ ಗಮನಕ್ಕೆ ಬಾರದೆ ಮಾಡಿದ್ದಾಗಿದೆ. ಹಾಗಾಗಿ ನಾನು ಇದರಲ್ಲಿ ಯಾವುದೇ ಜವಾಬ್ದಾರಿ ವಹಿಸಿಕೊಂಡಿಲ್ಲ ಎಂದು ಖಾಝಿ ಅಲ್ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ತಿಳಿಸಿದ್ದಾರೆ.
ವಕ್ಫ್ ತಿದ್ದುಪಡಿ ಕಾಯ್ದೆಯ ವಿರುದ್ಧದ ಹೋರಾಟ ತೀವ್ರಗೊಳಿಸುವ ಸಲುವಾಗಿ ಕರ್ನಾಟಕ ಉಲೆಮಾ ಕೋಆರ್ಡಿನೇಶನ್ ಸಮಿತಿಯನ್ನು ರಚಿಸಲಾಗಿತ್ತು. ಈ ಸಮಿತಿಯಲ್ಲಿ ಸಯ್ಯಿದ್ ಇಸ್ಮಾಯಿಲ್ ಹಾದಿ ತಂಞಳ್, ಕೆ.ಪಿ. ಹುಸೈನ್ ಸಅದಿ ಕೆಸಿ ರೋಡ್, ಬಿ.ಕೆ. ಅಬ್ದುಲ್ ಖಾದರ್ ಅಲ್‌ಖಾಸಿಮಿ ಬಂಬ್ರಾಣ, ಡಾ. ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ, ಎನ್.ಕೆ. ಮುಹಮ್ಮದ್ ಶಾಫಿ ಸಅದಿ ಬೆಂಗಳೂರು, ಕೆ.ಎಂ. ಉಸ್ಮಾನುಲ್ ಫೈಝಿ ತೋಡಾರ್ ಮತ್ತಿತರರಿದ್ದಾರೆ.
ಸಮಿತಿ ರಚನೆಯ ಬಳಿಕ ಅಡ್ಯಾರ್ ಕಣ್ಣೂರಿನಲ್ಲಿ ಬೃಹತ್ ಪ್ರತಿಭಟನೆ ಆಯೋಜಿಸಿತ್ತು. ಇತ್ತೀಚೆಗೆ ಕೊಳತ್ತಮಜಲಿನ ಅಬ್ದುಲ್ ರಹ್ಮಾನ್ ಕೊಲೆ ಮತ್ತು ಕುಡುಪು ಗುಂಪು ಹಲ್ಲೆಯಿಂದ ಮೃತಪಟ್ಟ ವಯನಾಡಿನ ಅಶ್ರಫ್ ಪ್ರಕರಣದ ಬಗ್ಗೆಯೂ ಈ ಸಮಿತಿಯು ಸಂಬಂಧಪಟ್ಟವರ ನಿಯೋಗದ ಮುಂದೆ ಚರ್ಚೆ ನಡೆಸಿ ನ್ಯಾಯಕ್ಕಾಗಿ ಆಗ್ರಹಿಸಿತ್ತು.







