ಕಸ್ತೂರಿ ರಂಗನ್ ವರದಿ ಬೇಡವಾದರೆ ಬಿಜೆಪಿ ತಡೆಯಲಿ: ರಮಾನಾಥ ರೈ ಸವಾಲು

ಮಂಗಳೂರು, ಜು.31: ಕಸ್ತೂರಿ ರಂಗನ್ ವರದಿ ಜಾರಿಯ ವಿಚಾರದಲ್ಲಿ ಬಿಜೆಪಿ ನಾಯಕರು ಕಾಂಗ್ರೆಸ್ ಸರಕಾರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಬಿಟ್ಟು, ಕೇಂದ್ರ ಸರಕಾರದ ಮೂಲಕ ಅದನ್ನು ಜಾರಿಗೊಳಿಸುವುದನ್ನು ತಡೆಹಿಡಿಯಲಿ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಸವಾಲು ಹಾಕಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಸ್ತೂರಿ ರಂಗನ್ ವರದಿ ಜಾರಿ ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ. ಇದು ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಲಾಗಿರುವ ದೇಶದ 10 ರಾಜ್ಯಗಳಿಗೆ ಸಂಬಂಧಿಸಿದ್ದಾಗಿದ್ದು, ಅದನ್ನು ತಡೆಯುವ ಅಧಿಕಾರ ಕೇಂದ್ರ ಸರಕಾರಕ್ಕಿದೆ. ಕೇಂದ್ರದಲ್ಲಿ ಅವರದ್ದೇ ಸರಕಾರ ಇರುವುದರಿಂದ ವರದಿ ಜಾರಿಯಾಗುವುದು ಬೇಡ ಎಂದಿದ್ದರೆ ಅದನ್ನು ತಡೆಯಲಿ ಎಂದರು.
ಕಸ್ತೂರಿ ರಂಗನ್ ವಿಚಾರಕ್ಕೆ ಸಂಬಂಧಿಸಿ ನಾನು ಪರಿಸರ ಸಚಿವನಾಗಿದ್ದಾಗಲೇ ಐದಾರು ಬಾರಿ ಕೇಂದ್ರ ಸರಕಾರ ಕರಡು ಅಧಿಸೂಚನೆಗೆ ತಿದ್ದುಪಡಿಗಾಗಿ ಅಭಿಪ್ರಾಯ ಕೋರಿತ್ತು. ಆ ಸಂದರ್ಭ ತಜ್ಞರ ಸಲಹೆ ನೀಡಲಾಗಿದೆ. ಅದಲ್ಲದೆ, ಜನವಸತಿ ಬಗ್ಗೆ ಚರ್ಚೆ ನಡೆಯುವ ಸಂದರ್ಭ ಜನರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ವರದಿ ಜಾರಿಗೊಳಿಸುವುದು ಬೇಡ ಎಂಬುದಾಗಿಯೂ ನನ್ನ ಅವಧಿಯಲ್ಲೇ ಪತ್ರ ಬರೆಯಲಾಗಿದೆ. ಇದು ಕೇವಲ ಒಂದು ರಾಜ್ಯಕ್ಕೆ ಸಂಬಂಧಪಟ್ಟ ವಿಷಯ ಅಲ್ಲ. ಇದನ್ನು ರಾಜ್ಯ ಸರಕಾರ ನಿರ್ಧಾರ ಮಾಡುವುದೂ ಅಲ್ಲ. ರದ್ದು ಮಾಡಬೇಕಾದರೆ ಕಳೆದ 9 ವರ್ಷಗಳಿಂದ ಕೇಂದ್ರದಲ್ಲಿ ಬಿಜೆಪಿ ಸರಕಾರವಿದೆ. ರಾಜ್ಯದಲ್ಲಿಯೂ ಕಳೆದ ಅವಧಿಯಲ್ಲಿ ಬಿಜೆಪಿ ಸರಕಾರ ಇತ್ತು. ಆ ಸಂದರ್ಭದಲ್ಲಿಯೇ ರದ್ದುಪಡಿಸುವ ಕಾರ್ಯ ನಡೆಯಬಹುದಿತ್ತು. ಆದರೆ ಇದೀಗ ರಾಜಕೀಯ ಮಾಡಲೆಂದೇ ಈ ವಿಷಯದಲ್ಲಿ ರಾಜ್ಯದ ಕಾಂಗ್ರೆಸ್ ಸರಕಾರವನ್ನು ಬಿಜೆಪಿ ನಾಯಕರು ಪ್ರಸ್ತಾಪಿಸುತ್ತಿರುವುದು ಹಾಸ್ಯಾಸ್ಪದ ಎಂದರು.
ಪರಿಸರ ಸೂಕ್ಷ್ಮ ಪ್ರದೇಶಗಳ ರಕ್ಷಣೆಗಾಗಿನ ಗಾಡ್ಗೀಳ್ ವರದಿ ಕಠಿಣವಾಗಿತ್ತು ಎಂಬ ನೆಲೆಯಲ್ಲಿ ಕಸ್ತೂರಿ ರಂಗನ್ ನೇತೃತ್ವದಲ್ಲಿ ವರದಿ ತಯಾರಿಸಲಾಗಿತ್ತು. ಆದರೆ ಜನರ ಭಾವನೆಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಅಂದಿನ ಅಪರ ಮುಖ್ಯ ಕಾರ್ಯದರ್ಶಿಯಾಗಿದ್ದ ಸಿ. ರವಿ ಕುಮಾರ್ ಅಧಿಕೃತವಾಗಿ ವರದಿ ಬೇಡ ಎಂದು ವರದಿ ಸಲ್ಲಿಸಿದ್ದರು. ಅದು ಬೇಡ ಎಂದಾದರೆ ಅದನ್ನು ನಿಲ್ಲಿಸುವ ಅಧಿಕಾರ ಇರುವುದು ಕೇಂದ್ರ ಸರಕಾರಕ್ಕೆ ಎಂದವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಶಾಲೆಟ್ ಪಿಂಟೋ, ಮುಖಂಡರಾದ ಆರ್.ಕೆ. ಪೃಥ್ವಿರಾಜ್, ಜೋಕಿಂ ಡಿಸೋಜ, ಜಯಶೀಲ ಅಡ್ಯಂತಾಯ, ಸಬೀರ್ ಎಸ್., ಶುಭೋದಯ ಆಳ್ವ, ಬಾಷಾ ಗುರುಪುರ, ಸುರೇಶ್ ಪಂಜಿಕಲ್ ಉಪಸ್ಥಿತರಿದ್ದರು.