ವಿದೇಶಿ ಉದ್ಯೋಗಕ್ಕೆ ಸಂದರ್ಶನ: ಮಂಗಳೂರಿನಲ್ಲಿ ಎರಡು ಅನಧಿಕೃತ ಸಂಸ್ಥೆಗಳ ಪತ್ತೆ
ಪಿಒಇ ಅವನೀಶ್ ಶುಕ್ಲಾ ಮಾಹಿತಿ

ಅವನೀಶ್ ಶುಕ್ಲಾ
ಮಂಗಳೂರು, ಮೇ 17 : ವಿದೇಶಗಳಲ್ಲಿ ಉದ್ಯೋಗದ ನೀಡುವ ಸೋಗಿನಲ್ಲಿ ಅನಧಿಕೃತವಾಗಿ ಸಂದರ್ಶನ ನಡೆಸಿ ಆಕಾಂಕ್ಷಿಗಳನ್ನು ವಂಚಿಸುವ ಎರಡು ಏಜೆನ್ಸಿಗಳು ಮಂಗಳೂರಿನಲ್ಲಿ ಪತ್ತೆಯಾಗಿವೆ.
ಬೆಂಗಳೂರಿನ ಪ್ರೊಟೆಕ್ಟರ್ ಆಫ್ ಎಮಿಗ್ರoಟ್ಸ್ (ಪಿಒಇ) ಅವನೀಶ್ ಶುಕ್ಲಾ ಶನಿವಾರ ಮಂಗಳೂರಿಗೆ ಭೇಟಿ ನೀಡಿ, ವಿದೇಶಿ ಉದ್ಯೋಗ ನಿಯೋಜನೆಗಳಿಗಾಗಿ ಅನಧಿಕೃತ ಸಂದರ್ಶನಗಳನ್ನು ನಡೆಸುತ್ತಿರುವ ಪ್ರಕರಣವನ್ನು ಪತ್ತೆ ಹಚ್ಚಿದ್ದಾರೆ.
ಇದೇ ವೇಳೆ ’ವಾರ್ತಾ ಭಾರತಿ’ ಜೊತೆ ಮಾತನಾಡಿದ ಶುಕ್ಲಾ ಅವರು ಮಂಗಳೂರಿನಲ್ಲಿ ಎರಡು ಪ್ರತ್ಯೇಕ ಅಕ್ರಮ ನೇಮಕಾತಿ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ದೃಢಪಡಿಸಿದರು.
ನಗರದ ಬೆಂದೂರ್ವೆಲ್ ನಲ್ಲಿ ನೇಮಕಾತಿ ನಡೆಯಲಿದೆ ಎಂಬ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಅವರು ಮಂಗಳೂರಿಗೆ ಆಗಮಿಸಿದ್ದರು. ಅವರು ಬರುವ ಹೊತ್ತಿಗೆ, ಆಯೋಜಿಸಲಾಗಿದ್ದ ಸಂದರ್ಶನಗಳು ಮುಂದೂಡಲ್ಪಟ್ಟಿದ್ದವು. ಆದರೆ, ತನಿಖೆಯ ಸಮಯದಲ್ಲಿ ಝಡ್-ಝೋನ್ ಕನ್ಸಲ್ಟೆನ್ಸಿ ಎಂದು ಗುರುತಿಸಲಾದ ಸಂಸ್ಥೆಯು ವಲಸೆ ಕಾಯ್ದೆ, 1983ರ ಅಡಿಯಲ್ಲಿ ಅಗತ್ಯವಿರುವ ಕಡ್ಡಾಯ ಪರವಾನಗಿ ಪಡೆಯದೆ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿದುಬಂದಿದೆ.
ಝಡ್-ಝೋನ್ ಕನ್ಸಲ್ಟೆನ್ಸಿ ವಿರುದ್ಧ ಈಗಾಗಲೇ ಪೊಲೀಸ್ ಪ್ರಕರಣ ದಾಖಲಾಗಿದೆ. ವಿದೇಶಾಂಗ ಸಚಿವಾಲಯದ ಅನುಮತಿಯಿಲ್ಲದೆ ಈ ಸಂಸ್ಥೆಯು ವಿದೇಶಗಳಲ್ಲಿ ಉದ್ಯೋಗಗಳಿಗೆ ವ್ಯಕ್ತಿಗಳನ್ನು ನೇಮಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಪಿಒಇ ದೃಢಪಡಿಸಿದ್ದಾರೆ.
ಕಳೆದ ಆರು ತಿಂಗಳಿನಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯವಾಗಿರುವ ಪಂಪ್ವೆಲ್ನ ಇನ್ನೊಂದು ಸಂಸ್ಥೆಯೂ ಇದೇ ರೀತಿಯ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದಾಗ ಸಿಕ್ಕಿಬಿದ್ದಿದೆ ಎಂದು ಶುಕ್ಲಾ ಬಹಿರಂಗಪಡಿಸಿದ್ದಾರೆ. ಆ ಸಂಸ್ಥೆ ಯುರೋಪ್, ಇಸ್ರೇಲ್, ಮಾರಿಷಸ್ ಮತ್ತು ಗಲ್ಫ್ ದೇಶಗಳಲ್ಲಿ ಉದ್ಯೋಗಗಳ ಜಾಹೀರಾತು ನೀಡುತ್ತಿತ್ತು ಎಂದು ಶುಕ್ಲಾ ಮಾಹಿತಿ ನೀಡಿದ್ದಾರೆ.
ಮಂಗಳೂರು ಪೊಲೀಸರೊಂದಿಗೆ ದಾಳಿ ನಡೆಸಿದ ಪಿಒಇ ಅಧಿಕಾರಿಗಳು ಅರ್ಜಿ ನಮೂನೆಗಳು ಮತ್ತು ಅಭ್ಯರ್ಥಿಗಳ ಬಯೋ-ಡೇಟಾ ಸೇರಿದಂತೆ ವಿವಿಧ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಏಜೆನ್ಸಿಯ Instagram ಮತ್ತು ಇತರ ಸಾಮಾಜಿಕ ಮಾಧ್ಯಮ ಖಾತೆಗಳು ವಿದೇಶಗಳಲ್ಲಿ ಉದ್ಯೋಗಾವಕಾಶದ ಜಾಹೀರಾತುಗಳಿಂದ ತುಂಬಿ ತುಳುಕುತ್ತಿದ್ದವು. ಈ ಸಂಸ್ಥೆಯ ವಿರುದ್ಧವೂ ಎಫ್ಐಆರ್ ದಾಖಲಾಗಿದೆ. ಕಳೆದ ಆರು ತಿಂಗಳಲ್ಲಿ ಕರ್ನಾಟಕದಲ್ಲಿ ವಲಸೆ ಕಾಯ್ದೆಯಡಿ ದಾಖಲಾಗಿರುವ ಮೂರನೇ ಪ್ರಕರಣ ಇದಾಗಿದೆ.
ಇದಕ್ಕೂ ಮೊದಲು ಬೆಂದೂರಿನ ಹೈಯರ್ ಗ್ಲೋ ಎಲಿಗಂಟ್ ಓವರ್ಸೀಸ್ ಪ್ಲೇಸ್ಮೆಂಟ್ ಎಂಬ ಮತ್ತೊಂದು ಏಜೆನ್ಸಿಯ ವಿರುದ್ಧವೂ ಇದೇ ರೀತಿಯ ಕ್ರಮ ಕೈಗೊಳ್ಳಲಾಗಿತ್ತು ಎಂದು ಶುಕ್ಲಾ ಮಾಹಿತಿ ನೀಡಿದ್ದಾರೆ. ಇಂತಹ ವಂಚನೆಯ ಏಜೆನ್ಸಿಗಳ ಸಂಖ್ಯೆ ಹೆಚ್ಚುತ್ತಿದ್ದು, ವಿಶೇಷವಾಗಿ ವಿದೇಶಗಳಲ್ಲಿ ಕೆಲಸ ಮಾಡುವ ಕನಸು ಕಾಣುವ ಉದ್ಯೋಗಾಕಾಂಕ್ಷಿಗಳಿಗೆ ಇಂತಹ ಸಂಸ್ಥೆಗಳು ವಂಚನೆ ಮಾಡುತ್ತಿವೆ ಎಂದು ಶುಕ್ಲಾ ಹೇಳಿದರು.
1983 ರ ವಲಸೆ ಕಾಯ್ದೆಯ ಸೆಕ್ಷನ್ 10ರ ಅಡಿಯಲ್ಲಿ, ವಿದೇಶಾಂಗ ಸಚಿವಾಲಯದ ಮಾನ್ಯತಾ ಪ್ರಮಾಣಪತ್ರವಿಲ್ಲದೆ ಭಾರತದಲ್ಲಿ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗೆ ವಿದೇಶ ಉದ್ಯೋಗಕ್ಕಾಗಿ ನೇಮಕಾತಿಯನ್ನು ಕೈಗೊಳ್ಳಲು ಅವಕಾಶ ಇಲ್ಲ. ಈ ಕಾನೂನನ್ನು ಉಲ್ಲಂಘಿಸುವವರನ್ನು ಕಾಯ್ದೆಯ ಸೆಕ್ಷನ್ 24 ರ ಅಡಿಯಲ್ಲಿ ಶಿಕ್ಷಿಸಬಹುದು ಎಂದು ಶುಕ್ಲಾ ಸ್ಪಷ್ಟಪಡಿಸಿದರು. ಶಿಕ್ಷೆಯು ಎರಡು ವರ್ಷಗಳವರೆಗೆ ಜೈಲು ಶಿಕ್ಷೆ, ರೂ. 2000 ದಂಡವನ್ನು ಒಳಗೊಂಡಿರುತ್ತದೆ. ಇಂತಹ ದಂಧೆ ಪುನರಾವರ್ತನೆಗೊಂಡಲ್ಲಿ ದಂಡ ಮತ್ತು ಜೈಲು ಶಿಕ್ಷೆ ಎರಡನ್ನೂ ದ್ವಿಗುಣಗೊಳಿಸಲಾಗುತ್ತದೆ.
ವಿದೇಶಕ್ಕೆ ಹೋಗುವವರು ಏನು ಮಾಡಬೇಕು ವಿದೇಶಗಳಲ್ಲಿ ಕೆಲಸ ಮಾಡಲು ಬಯಸುವ ಎಲ್ಲಾ ಭಾರತೀಯ ನೇಮಕಾತಿ ಏಜೆಂಟ್ ವಿದೇಶಾಂಗ ಸಚಿವಾಲಯದಲ್ಲಿ ನೋಂದಾವಣೆ ಆಗಿದೆಯೇ? ಎಂದು ಜನರು ಪರಿಶೀಲಿಸಬೇಕು ಎಂದು ಅವರು ಹೇಳಿದರು. ಅದಕ್ಕಾಗಿ www.emigrate.gov.in ವೆಬ್ ಸೈಟ್ ನೋಡಬೇಕು ಅಥವಾ ಬೆಂಗಳೂರಿನ ಪಿ ಒ ಇ ಕಚೇರಿಯ poebengaluru@mea.gov.in ಗೆ ಇಮೇಲ್ ಕಳಿಸಬೇಕು. |
ವಿದೇಶದಲ್ಲಿ ಸಿಲುಕಿದವರು ಏನು ಮಾಡಬೇಕು ಉದ್ಯೋಗಕ್ಕಾಗಿ ವಿದೇಶಕ್ಕೆ ಹೋಗಿ ವಂಚನೆಗೆ ಒಳಗಾದವರು 1800-11-3090 ಟೋಲ್ ಫ್ರೀ ನಂಬರ್ ಗೆ ಯಾವುದೇ ಸಮಯದಲ್ಲಿ ಕಾಲ್ ಮಾಡಬಹುದು. ಅವರು ಕಾಲ್ ಮಾಡುವ ಪರಿಸ್ಥಿತಿಯಲ್ಲಿ ಇಲ್ಲದಿದ್ದರೆ ಅವರ ಕುಟುಂಬದವರು ಕಾಲ್ ಮಾಡಬಹುದು. ಅವರಿಗೆ ಅಗತ್ಯ ಕಾನೂನು ನೆರವು ನೀಡಲಾಗುವುದು ಎಂದು ಪಿಒಇ ಶುಕ್ಲಾ ಹೇಳಿದರು. |







