ಮೇ 3ರಂದು ಇಕ್ರಾ ಅರೇಬಿಕ್ ಸ್ಕೂಲ್ 25ನೇ ವಾರ್ಷಿಕೋತ್ಸವ; ಹಿಫ್ಝ್ ಸಮಾರೋಪ ಸಮಾರಂಭ

ಮಂಗಳೂರು: ಕಳೆದ 25 ವರ್ಷಗಳಿಂದ ಮಂಗಳೂರಿನಲ್ಲಿ ಧಾರ್ಮಿಕ ಮತ್ತು ಲೌಕಿಕ ಶಿಕ್ಷಣವನ್ನು ನೀಡುತ್ತಿರುವ ಇಕ್ರಾ ಅರೇಬಿಕ್ ಸ್ಕೂಲ್ ʼ25ನೇ ವಾರ್ಷಿಕೋತ್ಸವ ಮತ್ತು ಹಿಫ್ಝ್ ಸಮಾರೋಪ ಸಮಾರಂಭʼವು ಮೇ 3ರಂದು ನಗರದ ಟೌನ್ ಹಾಲ್ ನಲ್ಲಿ ನಡೆಯಲಿದೆ.
ಮೇ 3ರಂದು ಮಧ್ಯಾಹ್ನ 3 ರಿಂದ ರಾತ್ರಿ 9 ರವರೆಗೆ ನಡೆಯಲಿರುವ ಸಮಾರೋಪ ಕಾರ್ಯಕ್ರಮದಲ್ಲಿ ಪವಿತ್ರ ಕುರ್ ಆನ್ ಕಂಠಪಾಠವನ್ನು ಪೂರ್ಣಗೊಳಿಸಿದ ಹಾಫಿಝ್ ಮತ್ತು ಉಲಮಾ ಪದವಿ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುತ್ತದೆ.
ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಪೋಷಕರು, ಹಳೆ ವಿದ್ಯಾರ್ಥಿಗಳು ಮತ್ತು ಸಮುದಾಯದ ಸದಸ್ಯರು ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಕಾರ್ಯದರ್ಶಿ ಮೌಲಾನಾ ಸೈಯದ್ ಬಿಲಾಲ್ ಅಬ್ದುಲ್ ಹೈ ಹಸನಿ ನದ್ವಿ ಭಾಗವಹಿಸಲಿದ್ದಾರೆ.
ಅಮೆರಿಕದ ಟಫ್ಟ್ಸ್ ವಿಶ್ವವಿದ್ಯಾಲಯದ ಡಾ. ಎ. ರಝಾಕ್ ಅಹ್ಮದ್, ನಿಟ್ಟೆ ವಿಶ್ವವಿದ್ಯಾಲಯದ ಸಹ-ಕುಲಪತಿ ಡಾ. ಶಾಂತಾರಾಮ್ ಶೆಟ್ಟಿ ಮತ್ತು ಯೆನೆಪೊಯ ವಿಶ್ವವಿದ್ಯಾಲಯದ ಡಾ. ಜಾವೇದ್ ಜಮಿಲ್ ಭಾಗವಹಿಸಲಿದ್ದಾರೆ.
ಇಕ್ರಾ ಅರೇಬಿಕ್ ಸ್ಕೂಲ್ ನಿರ್ವಹಣೆ ಮಾಡುವ ಹಝ್ರತ್ ಮೌಲಾನಾ ಅಬುಲ್ ಹಸನ್ ಅಲಿ ನದ್ವಿ, ಶಿಕ್ಷಣ ಮತ್ತು ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಸೈಯದ್ ಮುಹಮ್ಮದ್ ಬ್ಯಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸುವಂತೆ ಇಕ್ರಾ ಅರೇಬಿಕ್ ಸ್ಕೂಲ್ ಪ್ರಾಂಶುಪಾಲರಾದ ಸಲೀಂ ಖಲೀಫಾ ನದ್ವಿ, ಟ್ರಸ್ಟಿ ಹಾಜಿ ಮುಹಮ್ಮದ್ ಹನೀಫ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.







