ಪೇಪರ್ ಕ್ವಿಲ್ಲಿಂಗ್ ನಲ್ಲಿ ಇಸ್ಲಾಮಿಕ್ ಕ್ಯಾಲಿಗ್ರಫಿ: ಇಂಟರ್ನ್ಯಾಶನಲ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸ್ಥಾನ ಪಡೆದ ಕಲ್ಲಡ್ಕದ ಅಹ್ಮದ್ ಮಿಕ್ದಾದ್

(ಅಹ್ಮದ್ ಮಿಕ್ದಾದ್)
ಮಂಗಳೂರು: ಪೇಪರ್ ಕ್ವಿಲ್ಲಿಂಗ್ ವಿಧಾನದಲ್ಲಿ ಇಸ್ಲಾಮಿಕ್ ಕ್ಯಾಲಿಗ್ರಫಿಯ ಮೂಲಕ ಅತಿದೊಡ್ಡ ಕಲಾಕೃತಿ ತಯಾರಿಸಿದ ಕಲ್ಲಡ್ಕ ಗೋಳ್ತಮಜಲಿನ ಕಲಾವಿದ ಅಹ್ಮದ್ ಮಿಕ್ದಾದ್ ಇಂಟರ್ನ್ಯಾಶನಲ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸ್ಥಾನ ಪಡೆದಿದ್ದಾರೆ.
ಏಳು ದಿನಗಳಲ್ಲಿ ಒಟ್ಟು 105 ಗಂಟೆಗಳಲ್ಲಿ ಅಹ್ಮದ್ ಮಿಕ್ದಾದ್ ಈ ಕಲಾಕೃತಿಯನ್ನು ತಯಾರಿಸಿದ್ದಾರೆ. ಪವಿತ್ರ ಕುರ್ಆನ್ ನ 112ನೇ ಅಧ್ಯಾಯವಾದ ಸೂರತುಲ್ ಇಖ್ಲಾಸ್ ಅನ್ನು ಪೇಪರ್ ಕ್ವಿಲ್ಲಿಂಗ್ ವಿಧಾನ ಬಳಸಿ ಆಲಂಕಾರಿಕವಾಗಿ ಅಭಿವ್ಯಕ್ತಿಗೊಳಿಸಲಾಗಿದೆ.
ಪೇಪರ್ ಕ್ವಿಲ್ಲಿಂಗ್ ಆರ್ಟ್ ಎಂದರೆ ಕಾಗದವನ್ನು ಬಳಸಿ, ವಿವಿಧ ಆಕಾರಗಳಲ್ಲಿ ಪಟ್ಟಿಯಾಗಿ ಕತ್ತರಿಸಿ, ಸುರುಳಿ ಸುತ್ತಿ, ವಿಭಿನ್ನ ವಿನ್ಯಾಸಗಳನ್ನು ತಯಾರಿಸುವುದಾಗಿದೆ. ಅಕ್ಷರಗಳನ್ನು ಅಂದವಾಗಿ ಬರೆಯುವುದೇ ಕ್ಯಾಲಿಗ್ರಫಿ. ಅದರಲ್ಲೂ ಅರೇಬಿಕ್ ಅಕ್ಷರಗಳು ಎಲ್ಲಾ ರೀತಿಯಲ್ಲಿ ಹೊಂದಿಕೊಳ್ಳುವುದರಿಂದ ಈ ಅಕ್ಷರಗಳಲ್ಲಿ ವಿಧ ವಿಧದ ಕಲೆಗಳನ್ನು ಸೃಷ್ಟಿಸಲಾಗುತ್ತದೆ. ಪ್ರವಾದಿಯವರ ಕಾಲದಿಂದಲೂ ಅರೇಬಿಕ್ ಕ್ಯಾಲಿಗ್ರಫಿ ಯನ್ನು ಬಳಸಲಾಗುತ್ತಿದೆ. ಭಾರತದಲ್ಲಿ ಇಸ್ಲಾಮಿಕ್ ವಾಸ್ತುಶಿಲ್ಪವಿರುವ ತಾಜ್ ಮಹಲ್, ಕುತುಬ್ ಮಿನಾರ್ ಮುಂತಾದ ಸ್ಮಾರಕಗಳಲ್ಲೂ ಕ್ಯಾಲಿಗ್ರಫಿಯನ್ನು ನೋಡಬಹುದು.
"ನಾನು 40 ದಿನಗಳ ರಜೆಯಲ್ಲಿ ದುಬೈನಿಂದ ಊರಿಗೆ ಬಂದಿದ್ದೇನೆ. ದುಬೈನಲ್ಲಿ ಗಲ್ಫ್ ಏಶ್ಯನ್ ಸ್ಕೂಲ್ ನಲ್ಲಿ ಚಿತ್ರಕಲಾ ಅಧ್ಯಾಪಕನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಸುಮಾರು 15 ದಿನ ಈ ಕಲಾಕೃತಿಯ ನಿರ್ಮಾಣ ಮತ್ತು ಕಾರ್ಯಗಳಲ್ಲೇ ವ್ಯಯಿಸಿದೆ. ಈ ಕಾರ್ಯಕ್ಕೆ ಏಕಾಗ್ರತೆ, ಶ್ರದ್ಧೆ ಮತ್ತು ಕಠಿಣ ಪರಿಶ್ರಮದ ಅಗತ್ಯವಿದ್ದುದರಿಂದ ಸ್ಥಳೀಯ ಲಾಡ್ಜ್ ಒಂದರಲ್ಲಿ ಕೊಠಡಿ ಪಡೆದು ಈ ಕಲಾಕೃತಿ ರಚಿಸಿದ್ದೇನೆ" ಎನ್ನುತ್ತಾರೆ ಅಹ್ಮದ್ ಮಿಕ್ದಾದ್.
ಕುರ್ ಆನ್ ನ 112ನೇ ಅಧ್ಯಾಯ ಸೂರತುಲ್ ಇಖ್ಲಾಸ್ ನ ಪ್ರತಿಯೊಂದು ಅಕ್ಷರಗಳನ್ನೂ ಉದ್ದಲಾಗಿ ನಿಲ್ಲಿಸಿ, ಚಾಕಚಕ್ಯತೆಯಿಂದ ಹೆಣೆಯಲಾಗಿದೆ. ಒಟ್ಟು 1700 ಪೇಪರ್ ಪಟ್ಟಿಗಳನ್ನು ಇದರಲ್ಲಿ ಬಳಸಲಾಗಿದ್ದು, ಒಟ್ಟು ಕಲಾಕೃತಿಯಲ್ಲಿ ಸರಿಸುಮಾರು ಅರ್ಧ ಕಿ.ಮೀ. ಉದ್ದದ ಪೇಪರ್ ಗಳನ್ನು ಬಳಸಲಾಗಿದೆ.
ಯಾವುದೇ ಪೈಂಟ್ ಬಳಸದೇ, Teardrop shape, coiled circles, floral element ಗಳನ್ನು ಬಳಸಿ ಈ ಕಲಾಕೃತಿಯನ್ನು ನಿರ್ಮಿಸಲಾಗಿದೆ. ಪ್ರತಿಯೊಂದು ಅಕ್ಷರಗಳನ್ನೂ ಅತ್ಯಂತ ನಾಜೂಕಿನಿಂದ, ಎಚ್ಚರಿಕೆಯಿಂದ ಜೋಡಿಸಿ, 1,971 cm ಉದ್ದದ ಪೇಪರ್ ಪಟ್ಟಿಗಳ ಮೂಲಕ ಹೊರಭಾಗವನ್ನು ನಿರ್ಮಿಸಲಾಗಿದೆ. ಒಳಗಿನ ಭಾಗವನ್ನು ನೀಲಿ ಬಣ್ಣದ ಪೇಪರ್ ಸ್ಟ್ರಿಪ್ ಮೂಲಕ ಕಲಾತ್ಮಕವಾಗಿ ತುಂಬಿಸಲಾಗಿದೆ. ಪ್ರತಿಯೊಂದು ನೀಲಿ ಬಣ್ಣದ ಕಾಗದವನ್ನು ಸುರುಳಿಯಾಕಾರದಲ್ಲಿ ಸುತ್ತಿ, ಕ್ಯಾಲಿಗ್ರಫಿಯ ಒಳಭಾಗಕ್ಕೆ ನಾಜೂಕಿನಿಂದ ತುಂಬಿಸಲಾಗಿದೆ. ಇದಕ್ಕಾಗಿ 810 ಕಾಗದಗಳನ್ನು ಬಳಸಲಾಗಿದ್ದು, ಪೇಪರ್ ನ ಒಟ್ಟು ಉದ್ದ 240 ಮೀ. ಇದೆ.
ಅಹ್ಮದ್ ಮಿಕ್ದಾದ್ ಕೇವಲ ಚಿತ್ರಕಲೆಯ ವಿವಿಧ ಪ್ರಕಾರಗಳಲ್ಲಿ ಮಾತ್ರವಲ್ಲದೇ, ಶಿಲ್ಪಕಲೆ, ಕೆತ್ತನೆ, ಪೇಪರ್ ಆರ್ಟ್, ಮುಂತಾದ ಕಲೆಗಳಲ್ಲಿ ಪ್ರಾವೀಣ್ಯತೆ ಹೊಂದಿದ್ದಾರೆ.
"ನಾನು 2013ರಲ್ಲಿ ವಿಶ್ವದ ಅತೀಡೊಡ್ಡ ಕುರ್ ಆನ್ ಅನ್ನು ಕ್ಯಾನ್ ವಾಸ್ ಮೂಲಕ ಬರೆಯಲು ಮುಂದಾಗಿದ್ದೆ. ಅದರ ಮೊದಲ ಹೆಜ್ಜೆ ಎಂಬಂತೆ ತಿಂಗಳುಗಳ ಪರಿಶ್ರಮದ ಮೂಲಕ ಕುರ್ಆನ್ ನ ಮೊದಲ ಪುಟವನ್ನು ಬರೆದಿದ್ದೆ. ಅದು ಸುಮಾರು 12 ಫೀಟ್ ಉದ್ದ ಮತ್ತು 7 ಫೀಟ್ ಅಗಲವಿತ್ತು. ಕಾರಣಾಂತರಗಳಿಂದ ನನಗೆ ಅದನ್ನು ಮುಂದುವರಿಸಲಾಗಿಲ್ಲ. ಅದರ ಬಳಿಕ ಈ ಕಲಾಕೃತಿಯನ್ನು ಇದೀಗ ಪೂರ್ತಿಗೊಳಿಸಿದ್ದೇನೆ. ಇದು ಅಂತಾರಾಷ್ಟ್ರೀಯ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸ್ಥಾನ ಪಡೆದಿದ್ದು ಸಂತೋಷವಿದೆ" ಎಂದು ಮಿಕ್ದಾದ್ ಹೇಳುತ್ತಾರೆ.
ರಾಷ್ಟ್ರಪ್ರಶಸ್ತಿ, ರಾಜ್ಯಪ್ರಶಸ್ತಿಗಳು ಸೇರಿದಂತೆ ಹಲವು ಪುರಸ್ಕಾರಗಳನ್ನು ಅಹ್ಮದ್ ಮಿಕ್ದಾದ್ ಪಡೆದಿದ್ದಾರೆ. ದುಬೈ, ಸೌದಿ ಅರೇಬಿಯಾ, ಖತಾರ್, ಕುವೈಟ್ ಸೇರಿದಂತೆ ಹಲವು ಕಡೆಗಳಲ್ಲಿ ಇವರ ಚಿತ್ರಗಳು ಪ್ರದರ್ಶನಗೊಂಡಿದೆ. ಇಸ್ಲಾಮಿಕ್ ಕ್ಯಾಲಿಗ್ರಫಿಗೆ ಸಂಬಂಧಿಸಿ ಎರಡು ಸಂಶೋಧನಾ ಪ್ರಬಂಧಗಳನ್ನೂ ಅಹ್ಮದ್ ಮಿಕ್ದಾದ್ ಪ್ರಕಟಿಸಿದ್ದಾರೆ.
ಹಂಪಿ ಯುನಿವರ್ಸಿಟಿಗೆ 2010ರಲ್ಲಿ ಕಲಾತ್ಮಕ ಇಸ್ಲಾಮಿಕ್ ಕ್ಯಾಲಿಗ್ರಫಿ ಎನ್ನುವ ಸಂಶೋಧನಾ ಪ್ರಬಂಧ, ಸಮಕಾಲೀನ ಇಸ್ಲಾಮಿಕ್ ಕ್ಯಾಲಿಗ್ರಫಿ ಎನ್ನುವ ಅಧ್ಯಯನ ಪ್ರಬಂಧವನ್ನು ಬೆಂಗಳೂರು ಯುನಿವರ್ಸಿಟಿಗೆ 2012ರಲ್ಲಿ ಮಂಡಿಸಿದ್ದಾರೆ.
"ಹಲವು ಕಷ್ಟಗಳನ್ನು ಎದುರಿಸಿ, ಸವಾಲುಗಳನ್ನು ಮೀರಿ ನಿಂತ ಸಾಧಕ ಅಹ್ಮದ್ ಮಿಕ್ದಾದ್. ಇವರ ಪ್ರತಿಭೆ ಬೆಳಕಿಗೆ ಬರುವಲ್ಲಿ ವಿಳಂಬವಾಯಿತು. ಪ್ರೋತ್ಸಾಹ, ಅವಕಾಶ ಸಿಕ್ಕಿದರೆ ಅಹ್ಮದ್ ಮಿಕ್ದಾದ್ ವಿಶ್ವ ಪ್ರಸಿದ್ಧ ಕಲಾವಿದನಾಗುವುದರಲ್ಲಿ ಯಾವುದೇ ಸಂಶಯವಿಲ್ಲ".
-ಅಬೂಬಕರ್ ಸಿದ್ದೀಕ್
ಕಾರ್ಯದರ್ಶಿ, ಕಲ್ಲಡ್ಕ ಜುಮಾ ಮಸೀದಿ







