ಜೋಕಟ್ಟೆ: ಮಳೆಗೆ ಮನೆ ಕಳೆದುಕೊಂಡ ಹರೀಶ್ಚಂದ್ರರಿಗೆ ಆಸರೆಯಾದ ಶರೀಫ್ ವೈಟ್‌ಸ್ಟೋನ್, ಟೀಮ್ ಹ್ಯೂಮ್ಯಾನಿಟಿ

ಸುರತ್ಕಲ್, ಎ.1: ಕಳೆದ ವರ್ಷದ ಭಾರೀ ಮಳೆಗೆ ಮನೆ ಕಳೆದುಕೊಂಡು ಕಂಗಾಲಾಗಿದ್ದ ಜೋಕಟ್ಟೆ ನಿವಾಸಿ ಹರೀಶ್ಚಂದ್ರ ಆಚಾರ್ಯರ ಕುಟುಂಬಕ್ಕೆ ಜೋಕಟ್ಟೆ ಹೊಸ ಮಸೀದಿಯ ಅಧ್ಯಕ್ಷ ಮುಹಮ್ಮದ್ ಶರೀಫ್ ವೈಟ್‌ಸ್ಟೋನ್ ಮತ್ತು ಟೀಮ್ ಹ್ಯೂಮ್ಯಾನಿಟಿ ಜೋಕಟ್ಟೆ ಯುವಕರ ತಂಡವು ಮನೆ ನಿರ್ಮಿಸಿ ಕೊಡುವ ಮೂಲಕ ಆಸರೆ ನೀಡಿದೆ.
ಮನೆ ನೆಲಸಮವಾಗಿ ಕಂಗಾಲಾಗಿದ್ದ ಹರೀಶ್ಚಂದ್ರರಿಗೆ ತಕ್ಷಣದ ಪರಿಹಾರಗಳನ್ನು ನೀಡಿದ್ದ ಟೀಮ್ ಹ್ಯೂಮ್ಯಾನಿಟಿ ಜೋಕಟ್ಟೆ ತಂಡ, ಹೊಸ ಮನೆ ನಿರ್ಮಿಸಿಕೊಡುವ ಭರವಸೆ ನೀಡಿತ್ತು. ಅದರಂತೆ ಜೋಕಟ್ಟೆ ಹೊಸ ಮಸೀದಿಯ ಅಧ್ಯಕ್ಷ ವೈಟ್‌ಸ್ಟೋನ್ ಮುಹಮ್ಮದ್ ಶರೀಫ್‌ರ ಸಹಕಾರದೊಂದಿಗೆ ಅವರಿಗಾಗಿ ನಿರ್ಮಿಸಿದ್ದ ನೂತನ ಮನೆಯನ್ನು ತಂಡವು ಮಂಗಳವಾರ ಹಸ್ತಾಂತರಿಸಿತು. ಬುಧವಾರ ಗೃಹಪ್ರವೇಶವೂ ನಡೆಯಿತು.
ಈ ಬಗ್ಗೆ ʼವಾರ್ತಾಭಾರತಿʼಯೊಂದಿಗೆ ಮಾತನಾಡಿದ ಜೋಕಟ್ಟೆ ಮುಹಿಯುದ್ದೀನ್ ಹಳೇ ಜುಮಾ ಮಸೀದಿಯ ಅಧ್ಯಕ್ಷ ರಶೀದ್ ಕೊಪ್ಪ, ‘ಕೊರೋನ ಸಂದರ್ಭ ಸಮಸ್ಯೆಗಳಿಗೆ ಒಳಗಾದ ಜನರಿಗೆ ಮಿಡಿಯುವ ಸಲುವಾಗಿ ಟೀಮ್ ಹ್ಯೂಮ್ಯಾನಿಟಿ ಜೋಕಟ್ಟೆ ಎಂಬ ತಂಡವನ್ನು ರಚಿಸಲಾಗಿತ್ತು. ಆ ಸಂದರ್ಭ ರಸ್ತೆ ಬದಿ ಸಿಲುಕಿಕೊಂಡಿದ್ದ ಟ್ರಕ್ ಚಾಲಕರಿಗೆ ಊಟೋಪಹಾರ ನೀಡುವ ಮೂಲಕ ಆರಂಭಗೊಂಡ ತಂಡದ ಸಾಮಜಿಕ ಸೇವೆಯು, ಇಂದು ಹರೀಶ್ಚಂದ್ರ ಆಚಾರ್ಯರಿಗೆ ಮನೆ ನಿರ್ಮಾಣ ಮಾಡಿಕೊಡುವವರೆಗೆ ಬೆಳೆದಿದೆ. ಇದಕ್ಕೆ ಜನರು ನೀಡಿದ ಆಶೀರ್ವಾದವೇ ಕಾರಣ. ಈಗಾಗಲೇ ಇನ್ನೆರಡು ಮನೆಗಳ ಕಾಮಗಾರಿ ಆರಂಭಿಸಲಾಗಿದ್ದು, ಅದನ್ನೂ ಶೀಘ್ರ ಫಲಾನುಭವಿಗಳಿಗೆ ಹಸ್ತಾಂತರಿಸಲಾಗುವುದು. ನಮ್ಮ ಎಲ್ಲಾ ಕಾರ್ಯಗಳಿಗೆ ಬೆನ್ನುಲುಬಾಗಿ ನಿಂತು ಸಹಾಯ, ಸಹಕಾರ ನೀಡುತ್ತಿರುವ ಜೋಕಟ್ಟೆ ಹೊಸ ಮಸೀದಿಯ ಅಧ್ಯಕ್ಷ ಮುಹಮ್ಮದ್ ಶರೀಫ್ ವೈಟ್‌ಸ್ಟೋನ್ ಅವರಿಗೆ ಧನ್ಯವಾದಗಳು’ ಎಂದು ತಿಳಿಸಿದ್ದಾರೆ.
ಹರೀಶ್ಚಂದ್ರರಿಗೆ ಕಟ್ಟಿಕೊಟ್ಟ ಮನೆಯ ಗೃಹಪ್ರವೇಶಕ್ಕಾಗಿ ನಾವೂ ಬಂದಿದ್ದೇವೆ. ಇದು ಎಲ್ಲರೂ ಪ್ರೀತಿ, ಕರುಣೆ, ಸೌಹಾರ್ದ್‌ವನ್ನು ಕಟ್ಟುವ ಸಂಭ್ರಮ. ಜೋಕಟ್ಟೆ ಹೊಸ ಮಸೀದಿಯ ಅಧ್ಯಕ್ಷ ಮುಹಮ್ಮದ್ ಶರೀಫ್ ವೈಟ್‌ಸ್ಟೋನ್ ಮತ್ತು ಟೀಮ್ ಹ್ಯೂಮ್ಯಾನಿಟಿಯ ಕಾರ್ಯ ಶ್ಲಾಘನೀಯ ಎಂದು ಟೀಮ್ ಹ್ಯೂಮ್ಯಾನಿಟಿ ಜೋಕಟ್ಟೆಯ ಸದಸ್ಯ ಮುಹಮ್ಮದ್ ಇಕ್ಬಾಲ್ ಕಾವೂರು ತಿಳಿಸಿದರು.
"ನಮ್ಮೂರಿನ ಯುವಕರ ತಂಡ ಮಾನವೀಯ ನೆಲೆಗಟ್ಟಿನಲ್ಲಿ ಹರೀಶ್ಚಂದ್ರ ಆಚಾರ್ಯರ ಕಷ್ಟ ನಷ್ಟಗಳನ್ನು ನಮ್ಮ ಕಷ್ಟನಷ್ಟಗಳೆಂದು ಪರಿಗಣಿಸಿ ಉತ್ತಮ ಕೆಲಸ ಮಾಡಿದ್ದಾರೆ. ಅವರ ಸಾಮಾಜಿಕ ಕಳಕಳಿಯು ಮುಂದಿನ ದಿನಗಳಲ್ಲಿ ಇನ್ನಷ್ಟು ವಿಸ್ತರಿಸಲಿ ಎಂದು ಅಲ್ಲಾಹನಲ್ಲಿ ಪ್ರಾರ್ಥಿಸುತ್ತೇನೆ" -ಬಶೀರ್ ಹಿಮಮಿ, ಸ್ಥಳೀಯ ನಿವಾಸಿ
ಭಾವುಕರಾದ ಹರೀಶ್ಚಂದ್ರ ಆಚಾರ್ಯ
ಗೃಹ ಪ್ರವೇಶದ ಬಳಿಕ ವಾರ್ತಾಭಾರತಿ ಜೊತೆ ಮಾತನಾಡಿದ ಹರೀಶ್ಚಂದ್ರ ಆಚಾರ್ಯರು, ಜೋಕಟ್ಟೆಯ ಎಲ್ಲಾ ಯುವಕರು ಎಲ್ಲ ರೀತಿಯ ಸಹಾಯ ಸಹಕಾರ ನೀಡುತ್ತಿದ್ದಾರೆ. ನಾನು ಮತ್ತು ನನ್ನ ಕುಟುಂಬ ಕನಸಿನಲ್ಲಿಯೂ ಅಂದುಕೊಂಡಿರದ ಸುಂದರ ಮನೆಯನ್ನು ನಿರ್ಮಿಸಿಕೊಟ್ಟಿದ್ದಾರೆ. ದೇವರು ಅವರೆಲ್ಲರಿಗೂ ಒಳ್ಳೆಯದನ್ನು ನೀಡಲಿ ಎಂದು ಬಾವುಕರಾಗಿ ನುಡಿದರು.
"ಕಳೆದ ಮಳೆಗಾಲದಲ್ಲಿ ಹರೀಶ್ಚಂದ್ರ ಆಚಾರ್ಯರ ಮನೆ ಬಿದ್ದು ಸಂಪೂರ್ಣ ನಾಸವಾಗಿತ್ತು. ಇದನ್ನು ಕಂಡ ನಾವು ಅವರಿಗೆ ಸಹಾಯ ಮಾಡಬೇಕು ಎಂದು ಆಲೋಚನೆ ಮಾಡಿದಾಗ ಮುಹಮ್ಮದ್ ಶರೀಫ್ ವೈಟ್‌ಸ್ಟೋನ್ ನಮ್ಮ ಬೆನ್ನಿಗೆ ನಿಂತು ಎಲ್ಲಾ ಕೆಲಸಗಳನ್ನು ಮಾಡಿಕೊಡುವುದಾಗಿ ಭರವಸೆ ನೀಡದರು. ಜೊತೆಗೆ ಟೀಮ್ ಹ್ಯೂಮ್ಯಾನಿಟಿಯ ಸೌದಿ ಸಮಿತಿಯವರೂ ಜೊತೆಗೂಡಿ ಹೊಸ ಮನೆ ನಿರ್ಮಾಣ ಮಾಡಿಕೊಡುವ ನಿರ್ಧಾರಕ್ಕೆ ಬಂದರು. ಅದರಂತೆ ಇಂದು ಮನೆಯ ಗೃಹಪ್ರವೇಶ ನೆರವೇರಿದೆ" -ಬಿ.ಎಸ್.ಬಶೀರ್, ಸ್ಥಳೀಯ ನಿವಾಸಿ
"ಕಷ್ಟದಲ್ಲಿರುವವಿಗೆ ಪ್ರಥಮವಾಗಿ ಸ್ಪಂದಿಸುವುದು ಟೀಮ್ ಹ್ಯೂಮ್ಯಾನಿಟಿಯ ಪ್ರಥಮ ಆಧ್ಯತೆ. ಹರೀಶ್ಚಂದ್ರ ಆಚಾರ್ಯರು ಯಾವುದೇ ಪರಿಸ್ಥಿತಿಯಲ್ಲಿ ಇದ್ದರೂ ನಮ್ಮ ಊರಿನ ಯಾರದೇ ಕೆಲಸಗಳಿದ್ದರೆ ತಕ್ಷಣ ಸ್ಪಂದಿಸು ವವರು. ಅವರ ಕಷ್ಟದ ಸಂದರ್ಭದಲ್ಲಿ ಊರಿನ ಯುವಕರೆಲ್ಲರೂ ಒಂದಾಗಿ ಟೀಮ್ ಹ್ಯೂಮ್ಯಾನಿಟಿ ಹೆಸರಿನಲ್ಲಿ ಸ್ಪಂದಿಸುವ ಕೆಲಸಮಾಡಿದ್ದೇವೆ" -ಅಬ್ದುಲ್ ರಹ್ಮಾನ್ ಸದಸ್ಯ, ಟೀಮ್ ಹ್ಯೂಮ್ಯಾನಿಟಿ ಜೋಕಟ್ಟೆ, ಸೌದಿ ಅರೆಬಿಯಾ
"ಮನೆ ಕಳಕೊಂಡ ಹರೀಶ್ಚಂದ್ರ ಆಚಾರ್ಯರಿಗೆ ಟೀಮ್ ಹ್ಯೂಮ್ಯಾನಿಟಿ ಜೋಕಟ್ಟೆ ತಂಡ ನೀಡಿದ್ದ ಭರವಸೆಯನ್ನು ಈಡೇರಿಸಿಕೊಟ್ಟಿದ್ದಾರೆ. ದ.ಕ. ಎಂದರೆ ಕೋಮು ಸೂಕ್ಷ್ಮಜಿಲ್ಲೆ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಈ ಸಂದರ್ಭದಲ್ಲಿ ಟೀಮ್ ಹ್ಯೂಮ್ಯಾನಿಟಿ ಜೋಕಟ್ಟೆ ತಂಡವು ಇಂತಹ ಕಾರ್ಯಕ್ರಮಗಳ ಮೂಲಕ ಸಾಮರಸ್ಯದ ಕೆಲಸ ಮಾಡುತ್ತಿದೆ" -ಉಮರ್ ಫಾರೂಕ್ ಜೋಕಟ್ಟೆ, ಮಾಜಿ ಅಧ್ಯಕ್ಷ, ಜೋಕಟ್ಟೆ ಗ್ರಾಪಂ






