ಪತ್ರಕರ್ತ, ಸಾಹಿತಿ, ಸಂಘಟಕ ಬಿ.ಎಂ. ಹನೀಫ್ರಿಗೆ ʼಕನ್ನಡ ರಾಜ್ಯೋತ್ಸವ ಪ್ರಶಸ್ತಿʼ

ಬಿ.ಎಂ. ಹನೀಫ್
ಮಂಗಳೂರು: ರಾಜ್ಯ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಡಮಾಡುವ 2025-26ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಗಿದ್ದು, ಪತ್ರಕರ್ತ, ಸಾಹಿತಿ, ಸಂಘಟಕ ಬಿ.ಎಂ. ಹನೀಫ್ ಅವರು ಮಾಧ್ಯಮ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ದ.ಕ.ಜಿಲ್ಲೆಯ ಮಂಗಳೂರು ತಾಲೂಕಿನ ಹಳೆಯಂಗಡಿ ಗ್ರಾಮದ ಬೆಳ್ಳಾಯರು ಎಂಬಲ್ಲಿನ ಬಿ.ಕೆ. ಮೊಯ್ದಿನಬ್ಬ-ಝೈನಬಾ ದಂಪತಿಯ ಪುತ್ರನಾಗಿ 1961ರ ಡಿಸೆಂಬರ್ 12ರಂದು ಜನಿಸಿದ ಬೆಳ್ಳಾಯರು ಮುಹಮ್ಮದ್ ಹನೀಫ್ ಅವರು ಬಿ.ಎಂ.ಹನೀಫ್ ಎಂದೇ ಸಾರ್ವಜನಿಕ ವಲಯದಲ್ಲಿ ಚಿರಪರಿಚಿತರಾಗಿದ್ದಾರೆ.
ಸಾಹಿತ್ಯ, ಕಲೆ, ಸಂಸ್ಕೃತಿ, ಸಂಘಟನೆ, ಸಾಮಾಜಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಬಿ.ಎಂ.ಹನೀಫ್ ಉತ್ತಮ ಭಾಷಣಕಾರರೂ ಹೌದು. ಅನೇಕ ಶಿಬಿರಗಳನ್ನು ನಡೆಸಿಕೊಟ್ಟಿರುವ ಬಿ.ಎಂ. ಹನೀಫ್ ಸಂಪನ್ಮೂಲ ವ್ಯಕ್ತಿಯೂ ಹೌದು. ಮಂಗಳೂರು ಹೊರವಲಯದ ಸುರತ್ಕತ್ನ ಗೋವಿಂದದಾಸ ಕಾಲೇಜಿನಲ್ಲಿ ಬಿಕಾಂ ಪದವಿ ಪಡೆದರು. ಬಳಿಕ ಮಂಗಳೂರಿನ ಎಸ್ಡಿಎಂ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಓದುತ್ತಿರುವಾಗಲೇ (ಕಾರಣಾಂತರದಿಂದ ಪರೀಕ್ಷೆ ಬರೆದಿಲ್ಲ) ಅಂದರೆ 1984ರಲ್ಲಿ ವಡ್ಡರ್ಸೆ ರಘುರಾಮ ಶೆಟ್ಟಿ ನೇತೃತ್ವದ ಮುಂಗಾರು’ ದಿನಪತ್ರಿಕೆಯಲ್ಲಿ ಉಪ ಸಂಪಾದಕರಾಗಿ ಉದ್ಯೋಗಕ್ಕೆ ಸೇರಿದರು. ಬಳಿಕ ಹಿರಿಯ ಉಪಸಂಪಾದಕ, ಸಹಾಯಕ ಸುದ್ದಿ ಸಂಪಾದಕರಾಗಿ ಭಡ್ತಿ ಹೊಂದಿದರು.
1989ರಲ್ಲಿ ಪ್ರಜಾವಾಣಿ ಪತ್ರಿಕೆಯ ಬಳಗಕ್ಕೆ ಸೇರ್ಪಡೆಗೊಂಡು ಉಪ ಸಂಪಾದಕರಾಗಿ, ವಿಜಾಪುರ ಜಿಲ್ಲೆಯಲ್ಲಿ ಪ್ರಜಾವಾಣಿ -ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ವರದಿಗಾರರಾಗಿ ಕಾರ್ಯನಿರ್ವಹಿಸಿದರು. ಬಳಿಕ ಭಡ್ತಿ ಪಡೆದು ಹಿರಿಯ ಉಪ ಸಂಪಾದಕರಾಗಿ, ಪ್ರಜಾವಾಣಿಯಲ್ಲಿ ವಾಣಿಜ್ಯ ವಿಭಾಗದ ಸುದ್ದಿ ಮತ್ತು ವಾಣಿಜ್ಯ ಪುರವಣಿಯ ಮುಖ್ಯಸ್ಥರಾಗಿ ಕೆಲಸ ಮಾಡಿದರು. ನಂತರ ಪ್ರಜಾವಾಣಿಯ ಮೈಸೂರು ಬ್ಯೂರೋ ಮುಖ್ಯಸ್ಥರಾದರು. ಆ ನಂತರ ಬೆಂಗಳೂರಿಗೆ ವರ್ಗಾವಣೆಯಾಗಿ ಸಹಾಯಕ ಸಂಪಾದಕರಾಗಿ ಭಡ್ತಿ ಪಡೆದು, ಬೆಂಗಳೂರಿನಲ್ಲಿ ಸುಧಾ ವಾರಪತ್ರಿಕೆಯ ಮುಖ್ಯಸ್ಥರಾದರು. ಈ ಮಧ್ಯೆ ಜರ್ಮನಿಯ ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಜರ್ನಲಿಸಂನಿಂದ ವಾಣಿಜ್ಯ ಪತ್ರಿಕೋದ್ಯಮದಲ್ಲಿ ವಿಶೇಷ ಕೋರ್ಸ್ ಮಾಡಿದ್ದಾರೆ.
ವೃತ್ತಿಯಲ್ಲಿ ಪತ್ರಕರ್ತರಾದರೂ ಪ್ರವೃತ್ತಿಯಲ್ಲಿ ಕಥೆಗಾರ, ಕವಿ. ಈ ಮೂಲಕವೂ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಚಿರಪರಿಚಿತರು. ಇವರ ಹಲವು ಕವಿತೆಗಳು, ಕಥೆಗಳು ಪ್ರಜಾವಾಣಿ ಮತ್ತು ಮಯೂರ ಮಾಸಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಅನನ್ಯ ಸಮಾಜವಾದಿ ಲೋಹಿಯಾ (ಲೋಹಿಯಾ ಜೀವನ ಕುರಿತು ಪುಸ್ತಕ), ಇತಿಹಾಸ ಮತ್ತು ಇಸ್ಲಾಂ (ಎಂ.ಎನ್. ರಾಯ್ ಅವರ ಆಂಗ್ಲ ಪುಸ್ತಕದ ಕನ್ನಡ ಅನುವಾದ), ಕತ್ತಲೆಗೆ ಯಾವ ಬಣ್ಣ? (ಕವನ ಸಂಕಲನ), ಮಾತೇ ಮಾತು (ಸುಧಾ ಪತ್ರಿಕೆಯಲ್ಲಿ ಪ್ರಕಟವಾದ, ಕನ್ನಡದ ಪ್ರಮುಖ ಸಾಹಿತಿಗಳ ಸಂದರ್ಶನಗಳ ಸಂಕಲನ), ಬಣ್ಣದ ಬುಗುರಿ, ಸಜ್ಜನ ರಾಜಕಾರಣಿ ಎಸ್. ಎಂ. ಯಾಹ್ಯಾ (ವಿಧಾನ ಮಂಡಲ ಗ್ರಂಥಾಲಯಕ್ಕೆ ಬರೆದ ಅಧ್ಯಯನ ಪುಸ್ತಕ), ಕೆಂಪರಾಜ ಅರಸು (ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪ್ರಕಟಿಸಿದ ಪುಸ್ತಕ), ಕನಸು ಕನ್ನಡಿ (ಪ್ರಜಾವಾಣಿ ಸಿನಿಮಾ ಪುರವಣಿಯಲ್ಲಿ ಪ್ರಕಟವಾದ ಅಂಕಣಗಳ ಸಂಕಲನ), ಕೊಲಾಝ್ (ಕಥೆ, ಕವಿತೆ, ಪ್ರವಾಸ ಕಥನ, ಸಂದರ್ಶನ, ವಿಡಂಬನೆಗಳ ಸಂಕಲನ), ಮೈನಾರಿಟಿ ಕಾಂಪ್ಲೆಕ್ಸ್ (ಮುಸ್ಲಿಮರ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ತಲ್ಲಣಗಳ ಕುರಿತು ಬರಹಗಳ ಸಂಕಲನ), ಮಾಂಜಿ ರವಾ ಫ್ರೈ (ಕಥಾ ಸಂಕಲನ) ಸಹಿತ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ.
ಬ್ಯಾರಿ-ಕನ್ನಡ-ಇಂಗ್ಲಿಷ್ ಶಬ್ದಕೋಶ ಇದರ ಸಲಹಾ ಮಂಡಳಿ ಸದಸ್ಯರಾಗಿದ್ದ ಇವರು ಅಹ್ಮದ್ ನೂರಿ ಅವರ ಮೈಕಾಲ’ ಸಂಶೋಧನಾ ಗ್ರಂಥ, ನವರಸ ನಗು (ನವರಸಪುರ ಉತ್ಸವದ ಅಂಗವಾಗಿ ರಾಜ್ಯಮಟ್ಟದ ಹಾಸ್ಯ ಕವಿ ಗೋಷ್ಠಿಯ ಸಂಕಲನ), ನವರಸ ಕಾವ್ಯ (ನವರಸಪುರ ಉತ್ಸವದ ಅಂಗವಾಗಿ ನಡೆದ ರಾಜ್ಯಮಟ್ಟದ ಕವಿಗೋಷ್ಠಿಯ ಸಂಕಲನ), ಮುತ್ತುಮಾಲೆ (ಬ್ಯಾರಿ ಭಾಷೆಯ ನುಡಿಮುತ್ತುಗಳ ಸಂಗ್ರಹ) ಇವುಗಳ ಪ್ರಕಟನೆಯ ಜವಾಬ್ದಾರಿ ವಹಿಸಿಕೊಂಡಿದ್ದರು.
ಬೆಂಗಳೂರಿನ ದಿ ಬ್ಯಾರೀಸ್ ವೆಲ್ಫೇರ್ ಅಸೋಸಿಯೇಶನ್ನ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಸುಮಾರು 25 ವರ್ಷಗಳಿಂದ ಕಾರ್ಯನಿರ್ವಹಿಸಿರುವ ಇವರು, ಈ ಸಂಘಟನೆಯ ಮುಖವಾಣಿ ಬ್ಯಾರಿ ಟೈಮ್ಸ್ನ ಸಂಪಾದಕರಾಗಿಯೂ ಕೆಲಸ ಮಾಡಿದ್ದರು.
ಬೆಂಗಳೂರು ದೂರದರ್ಶನದಲ್ಲಿ ಸತತ ಮೂರು ವರ್ಷಗಳ ಕಾಲ ಸಿನಿಮಾ ಸೆನ್ಸಾರ್ ಸಮಿತಿಯ ಸದಸ್ಯರಾಗಿದ್ದರು. ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರಾಗಿ ಎರಡು ಬಾರಿ ಕಾರ್ಯನಿರ್ವಹಿಸಿದ್ದಾರೆ.
ದೇಶದ 15ಕ್ಕೂ ಹೆಚ್ಚು ರಾಜ್ಯಗಳಿಗೆ ಮತ್ತು ಫ್ರಾನ್ಸ್, ದುಬೈ, ಮಲೇಶಿಯಾ ಮತ್ತು ಹಾಂಕಾಂಗ್ಗೆ ಪತ್ರಕರ್ತರಾಗಿ ಪ್ರವಾಸ ಮಾಡಿದ್ದಾರೆ.
ಬೆಂಗಳೂರಿನ ಕನಕ ಅಧ್ಯಯನ ಕೇಂದ್ರವು ಬ್ಯಾರಿ ಭಾಷೆಯಲ್ಲಿ ಹೊರತಂದ ಕನಕದಾಸ ಜೀವನ ಚರಿತ್ರೆ’ ಸಂಪುಟದ ಸಂಪಾದಕರಾಗಿದ್ದರು. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಹೊರತಂದ ಬ್ಯಾರಿ ಸಾಕ್ಷ್ಯಚಿತ್ರವನ್ನು ನಿರ್ದೇಶಿಸಿದ್ದರು. ಬ್ಯಾರಿ ಸಾಹಿತ್ಯ ಅಕಾಡಮಿಯು ಹೊರತಂದ ಸಂತ-ಕನಕದಾಸರ ಜೀವನ-ಕಾವ್ಯ-ದರ್ಶನವನ್ನು ಬ್ಯಾರಿ ಭಾಷೆಗೆ ಅನುವಾದಿಸಿದ್ದಾರೆ.
ಬೆಂಗಳೂರು ತುಳು ಕೂಟದಿಂದ ತೌಳವಶ್ರೀ ಪ್ರಶಸ್ತಿ, ಗದಗದ ಡಂಬಳ ಸ್ವಾಮೀಜಿ ನೇತೃತ್ವದ ಸಾಂಸ್ಕೃತಿಕ ಪ್ರತಿಷ್ಠಾನದಿಂದ ರಾಜ್ಯ ಮಟ್ಟದ ಮಾಧ್ಯಮ ಮಂದಾರ ಪ್ರಶಸ್ತಿ, ಬೆಂಗಳೂರಿನ ಕರಾವಳಿ ಒಕ್ಕೂಟದ ಕರಾವಳಿ ಸಿರಿ ಪ್ರಶಸ್ತಿ, ಕರ್ನಾಟಕ ಪತ್ರಿಕಾ ಅಕಾಡೆಮಿ 2013ರ ಗೌರವ ಪ್ರಶಸ್ತಿ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಗೌರವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕನ್ನಡ ಭಾಷಾ ಚಳವಳಿ, ಕನ್ನಡ ಸಿನಿಮಾ, ವಿವಿಧ ಧರ್ಮ ಮತ್ತು ಸಂಸ್ಕೃತಿಗಳ ಅಧ್ಯಯನದಲ್ಲಿ ಅಪಾರ ಆಸಕ್ತಿ ಹೊಂದಿದ್ದಾರೆ. ಬ್ಯಾರಿ ಮಾತೃಭಾಷಿಗನಾಗಿರುವ ಬಿ.ಎಂ. ಹನೀಫ್ ಇಂಗ್ಲಿಷ್, ಹಿಂದಿ, ಕನ್ನಡ, ಉರ್ದು, ಮಲಯಾಳಂ, ತುಳು, ಕೊಂಕಣಿ ಭಾಷೆಯ ಮೇಲೆ ಹಿಡಿತ ಹೊಂದಿದ್ದಾರೆ.
ಪ್ರಜಾವಾಣಿ ಬಳಗದಿಂದ 2021ರಲ್ಲಿ ನಿವೃತ್ತಿ ಹೊಂದಿದ ಬಳಿಕ ಮೀಡಿಯಾ ಸೆಂಟರ್ ಸ್ಥಾಪಿಸಿ ಮಾಧ್ಯಮ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ಪತ್ನಿ ಮತ್ತು ಇಬ್ಬರು ಪುತ್ರಿಯರ ಜೊತೆ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ.







