ಕಡಬ| ಫಾಲ್ಸ್‌ನಲ್ಲಿ ಆಟವಾಡುತ್ತಿದ್ದ ವಿದ್ಯಾರ್ಥಿಗಳಿಗೆ ತಂಡದಿಂದ ಹಲ್ಲೆ; ಐವರ ವಿರುದ್ಧ ಪ್ರಕರಣ ದಾಖಲು

ಕಡಬ: ಕುಂಡಡ್ಕ ಫಾಲ್ಸ್ ನಲ್ಲಿ ಆಟವಾಡುತ್ತಿದ್ದ ಶಾಲಾ ವಿದ್ಯಾರ್ಥಿಗಳನ್ನು ತಂಡವೊಂದು ತಡೆದು, ಅನುಚಿತವಾಗಿ ವರ್ತಿಸಿ ಹಲ್ಲೆ ನಡೆಸಿ, ಬೆದರಿಕೆಯೊಡ್ಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಘಟನೆಯ ಬಗ್ಗೆ ಸಂತ್ರಸ್ತ ಬಾಲಕ ನೀಡಿದ ದೂರಿನಂತೆ ಐವರ ವಿರುದ್ಧ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗಳಾದ ರೋಹಿತ್, ದೇವಿಪ್ರಸಾದ್, ಚಂದನ್, ಉಮೇಶ್ ಹಾಗೂ ಬಾಲಕಿಯ ತಂದೆಯ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆ. 3ರಂದು ಈ ಘಟನೆ ಸಂಭವಿಸಿದ್ದು, ಮರ್ಧಾಳದ ಶಾಲೆಯೊಂದರಲ್ಲಿ ವ್ಯಾಸಂಗ ಮಾಡುತ್ತಿರುವ ಮೂವರು ವಿದ್ಯಾರ್ಥಿಗಳು ಹಾಗೂ ಓರ್ವ ವಿದ್ಯಾರ್ಥಿನಿ ಸೇರಿದಂತೆ ನಾಲ್ವರು ಸಹಪಾಠಿಗಳು ಕುಂಡಡ್ಕ ಫಾಲ್ಸ್ ನಲ್ಲಿ ಆಟವಾಡುತ್ತಿದ್ದರು ಎನ್ನಲಾಗಿದೆ. ಈ ವೇಳೆ ಸ್ಥಳೀಯರಾದ ಐವರ ತಂಡವೊಂದು ವಿದ್ಯಾರ್ಥಿಗಳೊಂದಿಗೆ ವಾಗ್ವಾದ ನಡೆಸಿ ಹಲ್ಲೆ ನಡೆಸಿ ಬೆದರಿಕೆ ಹಾಕಿದೆ ಎನ್ನಲಾಗಿದೆ.
ಘಟನೆಯಿಂದ ಆತಂಕಗೊಂಡ ವಿದ್ಯಾರ್ಥಿಗಳು ವಿಷಯವನ್ನು ಯಾರ ಬಳಿಯೂ ಹಂಚಿಕೊಂಡಿರಲಿಲ್ಲ ಎಂದು ತಿಳಿದುಬಂದಿದೆ. ಹಲ್ಲೆಯ ವಿಷಯ ಸ್ಥಳೀಯವಾಗಿ ಸದ್ದು ಮಾಡುತ್ತಿದ್ದಂತೆಯೇ, ಮಂಗಳವಾರದಂದು ಪರಿಶಿಷ್ಟ ಪಂಗಡಕ್ಕೆ ಸೇರಿದ ಸಂತ್ರಸ್ತ ಬಾಲಕ ಕಡಬ ಠಾಣೆಗೆ ನೀಡಿದ ದೂರಿನಂತೆ ಆರೋಪಿಗಳಾದ ರೋಹಿತ್, ದೇವಿಪ್ರಸಾದ್, ಚಂದನ್, ಉಮೇಶ್ ಹಾಗೂ ಬಾಲಕಿಯ ತಂದೆಯ ವಿರುದ್ಧ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




