ಕಣಂತೂರಿನ ಮಾದರಿ ಮನೆಗೆ ಜನಶಿಕ್ಷಣ ಟ್ರಸ್ಟ್ನ 'ಸ್ವಚ್ಛ' ಪ್ರಶಸ್ತಿಯ ಗರಿ ಹೂತೋಟ

ಮಂಗಳೂರು, ಮಾ.30: ವಾಯು ಮಾಲಿನ್ಯ, ತ್ಯಾಜ್ಯ ಮಾಲಿನ್ಯ ಸೇರಿದಂತೆ ಮಾಲಿನ್ಯದಲ್ಲೇ ಬದುಕು ಸಾಗಿಸುವಂತಾಗಿರುವ ಪ್ರಸಕ್ತ ಸನ್ನಿವೇಶದಲ್ಲಿ ನಗರದ ಹೊರವಲಯದ ಕಣಂತೂರಿನ ಮಾದರಿ ಮನೆಯೊಂದು ಸ್ವಚ್ಛ ಪರಿಸರ ಹಾಗೂ ಮಾಲಿನ್ಯ ಮುಕ್ತ ಮನೆಯಾಗಿ ರೂಪುಗೊಂಡಿದೆ. ಈ ಕಾರಣಕ್ಕಾಗಿಯೇ ಸ್ವಚ್ಛ ಭಾರತ ಅಭಿಯಾನದಡಿ ಜನ ಶಿಕ್ಷಣ ಟ್ರಸ್ಟ್ ವತಿಯಿಂದ ನೀಡಲಾಗುವ 'ಸ್ವಚ್ಛ ಮನೆ' ಎಂಬ ಚೊಚ್ಚಲ ಪ್ರಶಸ್ತಿಗೆ ಆಯ್ಕೆಯಾಗಿದೆ. ಬಾಳೆಪುಣಿ ಗ್ರಾಪಂ ವ್ಯಾಪ್ತಿಯ ಕಣಂತೂರಿನಲ್ಲಿರುವ ಈ ಮನೆ ಪುಷ್ಪಾ- ಕೇಶವ ಅವರದ್ದು. ಮನೆಯ ಸುತ್ತಮುತ್ತಲೂ ಬಣ್ಣ ಬಣ್ಣದ ಹೂಗಳು ಒಂದೆಡೆಯಾದರೆ, ಕೈ ತೋಟದಲ್ಲಿ ನಳನಳಿಸುವ ತರಕಾರಿ, ಹಣ್ಣು ಹಂಪಲುಗಳು. ಅಷ್ಟು ಮಾತ್ರವಲ್ಲ, ಇವರ ತೋಟದಲ್ಲಿ ಔಷಧಿ ಗಿಡಗಳೂ ಇದ್ದು, ಇವರ ತೋಟದಲ್ಲಿ ಜೇನು, ಕೋಳಿ, ಆಡು, ಗಿಳಿಗಳನ್ನ್ನೂ ಕಾಣಬಹುದು.
ಯಾಕೆ ವಿಶೇಷ ಕಣಂತೂರಿನ ಈ ಮನೆ?
ಈ ಮನೆಯ ಕೈ ತೋಟದಲ್ಲಿ ಏಳು ವಿಧದ ಮಲ್ಲಿಗೆ ಹಾಗೂ ಗೊಂಡೆಹೂವಿನ ಗಿಡಗಳಿವೆ. ನಾಲ್ಕು ವಿಧದ ಗೌರಿ ಹೂ, ನಾಲ್ಕು ವಿಧದ ಬುಗಡಿ ಹೂ, ಎರಡು ವಿಧದ ಸದಾಪುಷ್ಪ, ಏಳು ವಿಧದ ದಾಸವಾಳ, 5 ವಿಧದ ಗುಲಾಬಿ, ತಲಾ ನಾಲ್ಕು ವಿಧದ ಕೇಪುಲ, ಲಿಂಬಸ್, 10 ವಿಧದ ಕ್ರೋಟನ್, 2 ವಿಧದ ಕ್ರೋಟನ್ ಜತೆಗೆ ನೆಲಗುಲಾಬಿ, ಕಲರ್ ಕೆಸು, ಸೇವಂತಿಗೆ ಸೇರಿದಂತೆ 15 ವಿಧದ ಬಣ್ಣ ಬಣ್ಣದ ಹೂಗಿಡಗಳಿವೆ. ಕೈತೋಟದಲ್ಲಿ ಹರಿವೆ, ಮೆಣಸು, ನುಗ್ಗೆ, ತೊಂಡೆ, ಬಸಳೆ, ಪಪ್ಪಾಯಿ, ಬದನೆ, ಕಾಳುಮೆಣಸು, ತಿಮರೆ, ಕಾಫಿ, ವೆನಿಲ, ಬಿರಿಯಾನಿ ಎಲೆ, ಕಬ್ಬು ಮೊದಲಾದ ಬಳ್ಳಿ ಗಿಡಗಳಿದ್ದರೆ, ಮಾವು, ಹಲಸು, ಪೇರಳೆ, ಚಿಕ್ಕು, ನಿಂಬೆ, ಗೇರು, ಡ್ರಾಗನ್ಫ್ರೂಟ್, ರಂಬೂಟನ್ನಂತಹ ಹಣ್ಣು ಹಂಪಲುಗಳ ಗಿಡಗಳೂ ಇವರ ತೋಟದಲ್ಲಿವೆ. ಸ್ವಚ್ಛ ಪರಿಸರದಿಂದ ಕೂಡಿದ ಮನೆ ಹಾಗೂ ಸುತ್ತಮುತ್ತಲಿನ ಆವರಣಕ್ಕೆ ಪ್ರತಿನಿತ್ಯ ನವಿಲು, ಕಾಡುಕೋಳಿ, ಕೋಗಿಲೆ ಸೇರಿದಂತೆ ಸಮೀಪ ಕಾಡಿನಿಂದ ನಾನಾ ರೀತಿಯ ಹಕ್ಕಿಗಳು ಕೂಡಾ ಭೇಟಿ ನೀಡುತ್ತಿರುತ್ತವೆ.
ಮನೆ ಹಾಗೂ ಮನೆ ಪರಿಸರವನ್ನು ಸ್ವಚ್ಛವಾಗಿಡುವ ಜತೆಗೆ ಹಚ್ಚ ಹಸಿರಾಗಿಸಿ ಕಾಡು ಹಕ್ಕಿಗಳಿಗೂ ಸ್ವಚ್ಛಂದ ವಿಹಾರಕ್ಕೆ ಅವಕಾಶ ಕಲ್ಪಿಸಿದೆ. ಸ್ವಚ್ಛ ಪರಿಸರ, ಪ್ರಕೃತಿ ಸ್ನೇಹಿ ಮನೆಗಳನ್ನು ಪ್ರೇರೇಪಿಸುವ ಉದ್ದೇಶದಿಂದ ಈ ಪ್ರಶಸ್ತಿಯನ್ನು ಅಪ್ನಾದೇಶ್ ಮಾದರಿ ಗ್ರಾಮ ಅಭಿಯಾನಡಿ ನೀಡಲಾಗುತ್ತಿದೆ. ಮಾ. 31ರಂದು ಬೆಳಗ್ಗೆ 10ಕ್ಕೆ ಮುಡಿಪು ಸರ್ವೋದಯ ಮಂಟಪದಲ್ಲಿ ನಡೆಯಲಿರುವ ಸರಳ ಕಾರ್ಯಕ್ರಮದಲ್ಲಿ ಪುಷ್ಪ ಕೇಶವ ಕಣಂತೂರು ಅವರ ಯಶೋಗಾಥೆ ನಿರೂಪಣೆಯೊಂದಿಗೆ ಪ್ರಶಸ್ತಿ ನೀಡಲಾಗುವುದು. ಸಾರ್ವಜನಿಕ ವಲಯದಲ್ಲಿ ನಮ್ಮ ಮನಸ್ಥಿತಿ ಬದಲಾದರೆ, ಮನೆ ಸ್ಥಿತಿ ಬದಲಾಗುತ್ತದೆ ಎಂಬುದನ್ನು ತಿಳಿಯಪಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಜನಶಿಕ್ಷಣ ಟ್ರಸ್ಟ್ನ ಶೀನ ಶೆಟ್ಟಿ ತಿಳಿಸಿದ್ದಾರೆ.
ಪ್ರಕೃತಿ ಸ್ನೇಹಿಯಾಗಿ ಗುರುತಿಸಿಕೊಂಡಿರುವ ಪುಷ್ಪಾ ಕೇಶವರ ಮನೆಯನ್ನು ಅಪ್ನಾದೇಶ್ ಸ್ವಚ್ಛಾ ಸ್ವಯಂ ಸೇವಕರ ಬಳಗದಿಂದ ಪ್ರಥಮ ಸ್ವಚ್ಛ ಮನೆ ಪ್ರಶಸ್ತಿಯ ಗೌರವಕ್ಕೆ ಆಯ್ಕೆ ಮಾಡಲಾಗಿದೆ. ಸ್ವಚ್ಛತಾ ಅಭಿಯಾನದ ತಳ ಮಟ್ಟದ ಫಲಾನುಭವಿಗಳ ಕುಟುಂಬಗಳನ್ನು ಗುರುತಿಸಿಕೊಂಡು ಈ ಕಾರ್ಯಕ್ರಮ ನಡೆಸಲಾಗುತ್ತಿದೆ. ಪ್ರಾಯೋಗಿಕವಾಗಿ ಉಳ್ಳಾಲ ತಾಲೂಕು ವ್ಯಾಪ್ತಿಯ ಈ ಮನೆಯನ್ನು ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ. ಮುಂದಿನ ವರ್ಷದಿಂದ ಒಂಭತ್ತು ತಾಲೂಕುಗಳಲ್ಲಿ ತಲಾ ಒಂದು ಮನೆಯಂತೆ ಸ್ವಚ್ಛ ಮನೆ ಪ್ರಶಸ್ತಿಗೆ ಆಯ್ಕೆ ಮಾಡುವ ಗುರಿ ಇದೆ.'
-ಶೀನ ಶೆಟ್ಟಿ, ಜನಶಿಕ್ಷಣ ಟ್ರಸ್ಟ್







