ಕಾವೂರು | ಬಾಂಗ್ಲಾದೇಶಿಯೆಂದು ಆರೋಪಿಸಿ ವಲಸೆ ಕಾರ್ಮಿಕನಿಗೆ ಹಲ್ಲೆ ಪ್ರಕರಣ: ಮೂವರು ಆರೋಪಿಗಳ ಬಂಧನ

ಮಂಗಳೂರು, ಜ.13: ಬಾಂಗ್ಲಾದೇಶದ ಪ್ರಜೆ ಎಂದು ಆರೋಪಿಸಿ ಜಾರ್ಖಂಡ್ ಮೂಲದ ವಲಸೆ ಕಾರ್ಮಿಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿ, ಕೊಲೆ ಯತ್ನ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು ತಾಲೂಕಿನ ಕೂಳೂರು ಗ್ರಾಮ ನಿವಾಸಿಗಳಾದ ರತೀಶ್ ದಾಸ್ ಯಾನೆ ಲಾಲು (32), ಧನುಷ್ (24) ಮತ್ತು ಸಾಗರ್ (24) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಜ. 11ರಂದು ಸಂಜೆ ಸುಮಾರು 6:05ರ ವೇಳೆಗೆ ನಾಲ್ವರು ಆರೋಪಿಗಳು ಜಾರ್ಖಂಡ್ ಮೂಲದ ದಿಲ್ಜಾನ್ ಅನ್ಸಾರಿ ಎಂಬವರನ್ನು ತಡೆದು ನಿಲ್ಲಿಸಿ, ನೀನು ಹಿಂದೂನಾ? ಮುಸ್ಲಿಮ್? ಎಂದು ಪ್ರಶ್ನಿಸಿ ಜನಾಂಗೀಯ ನಿಂದನೆ ಮಾಡಿದ್ದಲ್ಲದೆ, “ನೀನು ಬಾಂಗ್ಲಾದೇಶದವನು” ಎಂದು ಆಪಾದಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಸಾರಣೆ ಮಾಡುವ ತಾಪಿಯಿಂದ ತನ್ನ ಮೇಲೆ ಹಲ್ಲೆಗೈದು ಕೊಲೆಗೆ ಯತ್ನಿಸಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಸಂಬಂಧ ಜ. 12ರಂದು ಕಾವೂರು ಪೊಲೀಸ್ ಠಾಣೆಯಲ್ಲಿ ಠಾಣಾ ಅಪರಾಧ ಸಂಖ್ಯೆ 03/2026 ಕಲಂ 126(2), 352, 351(3), 353, 109, 118(1) ಹಾಗೂ 3(5) ಭಾರತೀಯ ನ್ಯಾಯ ಸಂಹಿತೆ–2023 ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಸೋಮವಾರ ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದಾರೆ.
ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.





