ಮಂಗಳೂರು | ತುರ್ತು ರೋಗಿ ನಿಗಾ ವ್ಯವಸ್ಥೆಗೆ ಪೇಟೆಂಟ್ ಪಡೆದ ಡಾ. ಹಾರೂನ್ ನೇತೃತ್ವದ ಕೆಎಂಸಿ ತಂಡ
ತುರ್ತು ಆರೈಕೆಯ ಗುಣಮಟ್ಟ ಹೆಚ್ಚಳದ ಮೂಲಕ ಆಂಬ್ಯುಲೆನ್ಸ್‌ನಲ್ಲಿ ಸಾಗಿಸುವ ವೇಳೆ ಜೀವ ರಕ್ಷಿಸುವ ತಂತ್ರಜ್ಞಾನ

ಮಂಗಳೂರು: ಇಲ್ಲಿನ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ತಜ್ಞ ವೈದ್ಯ ಡಾ. ಹಾರೂನ್ ಎಚ್ ನೇತೃತ್ವದ ತಂಡವು ಹೊಸದಾಗಿ ಅಭಿವೃದ್ಧಿಪಡಿಸಿದ "ರಿಯಲ್ ಟೈಮ್ ಎಮರ್ಜೆನ್ಸಿ ಮಾನಿಟರಿಂಗ್ ಸಿಸ್ಟಂ"ಗೆ ಪೇಟೆಂಟ್ ಪಡೆದಿರುವುದಾಗಿ ಪ್ರಕಟಿಸಿದೆ.
ಇದು ತುರ್ತು ವೈದ್ಯಕೀಯ ಆರೈಕೆ ಸೇವೆಯಲ್ಲಿ ಮಹತ್ವದ ಹೆಜ್ಜೆ ಎನಿಸಿದೆ. "ರಿಯಲ್ ಟೈಮ್ ಪ್ರಿ-ಹಾಸ್ಪಿಟಲ್ ಎಮರ್ಜೆನ್ಸಿ ಮಾನಿಟರಿಂಗ್ ಸಿಸ್ಟಂ ಅಂಡ್ ಮೆತಡ್" ಎಂಬ ಶೀರ್ಷಿಕೆಯಡಿ 2025ರ ಜುಲೈ 11ರಂದು ಅಧಿಕೃತವಾಗಿ ಈ ಪೇಟೆಂಟ್ ನೋಂದಣಿಯಾಗಿದೆ.
ಜನರಲ್ ವೈದ್ಯಕೀಯ ವಿಭಾಗದ ಡಾ.ಹಾರೂನ್, ಪ್ರಸೂತಿಶಾಸ್ತ್ರ ಮತ್ತು ಮಹಿಳಾ ರೋಗ ತಜ್ಞೆ ಡಾ.ಸಮೀನಾ ಎಚ್, ವಿದ್ಯಾರ್ಥಿಗಳಾದ ಭೂಸರಿ, ಸ್ನೇಹಲ್ ಮಹಿಮಾ ಕ್ಯಾಸ್ಟಲಿನೊ ಮತ್ತು ಆಯುಷ್ ಗಣೇಶ್ ಅಯ್ಯರ್ ಅವರಿದ್ದ ತಂಡ ಈ ವಿಶಿಷ್ಟ ಸಂಶೋಧನೆ ಕೈಗೊಂಡಿದೆ.
ಪೇಟೆಂಟ್ ಪಡೆದಿರುವ ಹೊಸ ರಿಯಲ್ ಟೈಮ್ ವ್ಯವಸ್ಥೆಯು ರೋಗಿಯನ್ನು ದೂರದ ಹಾಗೂ ಗ್ರಾಮೀಣ ಪ್ರದೇಶಗಳಿಂದ ಆಸ್ಪತ್ರೆಗೆ ಸಾಗಿಸುವ ಅವಧಿಯಲ್ಲಿ ರೋಗಿಯ ಆರೋಗ್ಯ ಸ್ಥಿತಿಯ ಮೇಲೆ ನಿಗಾ ಇಡುವ ಉದ್ದೇಶದಿಂದ ರೂಪಿತವಾಗಿದೆ. ಈ ವ್ಯವಸ್ಥೆಯು ಮಾಹಿತಿ ತಂತ್ರಜ್ಞಾನ ಹಾಗೂ ಸಂಪರ್ಕಿತ ಸಾಧನಗಳನ್ನು ಬಳಸಿಕೊಂಡು ಹೃದಯ ಬಡಿತದ ದರ, ರಕ್ತದ ಒತ್ತಡ, ಆಮ್ಲಜನಕದ ಆದ್ರೀಕರಣ ಮತ್ತು ಇತರ ಮಾನದಂಡಗಳ ಮೇಲೆ ವೈದ್ಯಕೀಯ ತಂಡ ಆ್ಯಬುಲೆನ್ಸ್ ನಿಂದಲೇ ನಿಗಾ ವಹಿಸಲು ನೆರವಾಗಲಿದೆ.
ತುರ್ತು ಆರೋಗ್ಯ ಸಮಸ್ಯೆ ಎದುರಾದ ಸಮಯದಲ್ಲಿ ಆಸ್ಪತ್ರೆಗೆ ರೋಗಿಯನ್ನು ಆ್ಯಂಬುಲೆನ್ಸ್ ನಲ್ಲಿ ಸಾಗಿಸುವ ಅವಧಿಯಲ್ಲಿ ನೀಡಬೇಕಾದ ಆರೈಕೆಯ ಅಂತರವನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಸಾಧನ ಅಭಿವೃದ್ಧಿಪಡಿಸಲಾಗಿದೆ ಎಂದು ಡಾ.ಹಾರೂನ್ ನೇತೃತ್ವದ ತಂಡ ಹೇಳಿದೆ.
ಈ ರಿಯಲ್ ಟೈಮ್ ನಿಗಾ ವ್ಯವಸ್ಥೆಯು ಸ್ವಯಂಚಾಲಿತ ವೈದ್ಯಕೀಯ ನಿರ್ಣಯಗಳನ್ನು ಕೈಗೊಳ್ಳಲು ಕೂಡಾ ಪೂರಕವಾಗಿರುತ್ತದೆ. ರೋಗಿಯ ಆರೋಗ್ಯ ಸ್ಥಿತಿಯನ್ನು ಆಧರಿಸಿ ಈ ವ್ಯವಸ್ಥೆಯು, ಚಿಕಿತ್ಸೆಗೆ ಅತ್ಯಂತ ಸೂಕ್ತವಾದ ಆಸ್ಪತ್ರೆ ಯಾವುದು ಎನ್ನುವುದನ್ನು ಕೂಡಾ ನಿರ್ಧರಿಸುತ್ತದೆ ಹಾಗೂ ಅತ್ಯಂತ ಸನಿಹದ ಆಸ್ಪತ್ರೆಗೆ ರೋಗಿಯನ್ನು ಕರೆದೊಯ್ಯಲು ಮಾರ್ಗದರ್ಶನವನ್ನೂ ನೀಡುತ್ತದೆ. ವಿಶೇಷ ತಜ್ಞರ ಅಗತ್ಯವಿರುವ ಸಂಕೀರ್ಣ ವೈದ್ಯಕೀಯ ತುರ್ತು ಸ್ಥಿತಿಗಳಿಗೆ ಇದು ಮಹತ್ವದ್ದೆನಿಸಲಿದೆ.
ಉದಾಹರಣೆಗೆ ಮಂಗಳೂರಿನಿಂದ ಎರಡು ಗಂಟೆ ಪ್ರಯಾಣದ ಅವಧಿಯಷ್ಟು ದೂರವಿರುವ ಗ್ರಾಮದಿಂದ ರೋಗಿಗಳನ್ನು ಕರೆ ತರುವುದಾದರೆ, ಹಾಲಿ ವ್ಯವಸ್ಥೆಯಲ್ಲಿ ರೋಗಿಗೆ ಪ್ರಯಾಣದ ವೇಳೆ ಏನಾಗಿದೆ ಎಂಬ ಸಮರ್ಪಕ ಮಾಹಿತಿ ಆಸ್ಪತ್ರೆಗೆ ಲಭ್ಯವಾಗುವುದಿಲ್ಲ. ಕೆಲವೊಮ್ಮೆ ರೋಗಿಯಲ್ಲಿ ಆಗುವ ಪ್ರಮುಖ ಆರೋಗ್ಯ ವ್ಯತ್ಯಯಗಳು ಗಮನಕ್ಕೆ ಬರುವುದಿಲ್ಲ. ಆದರೆ ಹೊಸ ವ್ಯವಸ್ಥೆಯಡಿ ರೋಗಿಗೆ ಪ್ರಯಾಣದಲ್ಲೂ ವೈದ್ಯರ ಸಲಹೆ ಲಭ್ಯವಾಗುವಂತೆ ವ್ಯವಸ್ಥೆ ಇರುತ್ತದೆ ಹಾಗೂ ವೈದ್ಯರು ನೇರಪ್ರಸಾರ ವ್ಯವಸ್ಥೆಯ ಮತ್ತು ಆ್ಯಂಬುಲೆನ್ಸ್ ನಲ್ಲಿರುವ ಅರೆವೈದ್ಯಕೀಯ ಸಿಬ್ಬಂದಿಯ ಮೂಲಕ ರೋಗಿಯ ಮೇಲೆ ನಿಗಾ ಇಡಲು ಸಾಧ್ಯವಾಗುತ್ತದೆ.







