ಜ್ಞಾನ ಭರಿತ ಶಿಕ್ಷಣ ಹೆಣ್ಣು ಮಕ್ಕಳ ಅಸ್ತ್ರ: ಡಾ. ನಾಗಲಕ್ಷ್ಮಿ ಚೌಧರಿ

ಮಂಗಳೂರು, ಮಾ.5: ಹೆಣ್ಣು ಮಕ್ಕಳು ತಮ್ಮ ಮೇಲಿನ ದೌರ್ಜನ್ಯ, ಅನ್ಯಾಯದ ಸಂದರ್ಭ ಎದ್ದು ನಿಂತು ಹೋರಾಡುವಲ್ಲಿ ಅರಿವಿನಿಂದ ಕೂಡಿದ ಶಿಕ್ಷಣ ಅಸ್ತ್ರವಾಗಿರುತ್ತದೆ. ಶಿಕ್ಷಣ ಪಡೆಯುವ ಜತೆಗೆ ಹೆಣ್ಣು ಮಕ್ಕಳು ತಮ್ಮ ಹಕ್ಕು, ಕಾನೂನುಗಳನ್ನು ತಿಳಿದುಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಯುವ ವಿದ್ಯಾರ್ಥಿನಿಯರಿಗೆ ಕರೆ ನೀಡಿದರು.
ಬಲ್ಮಠದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಗುರುವಾರ ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾ ಕೋಶ, ಆಂತರಿಕ ದೂರು ನಿವಾರಣಾ ಸಮಿತಿ ಸಹಯೋಗದಲ್ಲಿ ವಿದ್ಯಾರ್ಥಿನಿಯರ ಜತೆಗಿನ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಿಕ್ಷಣ ಮತ್ತು ಸಂವಿಧಾನ ಮಹಿಳೆಯರಿಗೆ ಸ್ವಾವಲಂಬಿ ಬದುಕನ್ನು ನೀಡುತ್ತದೆ. ಸವಾಲುಗಳನ್ನು ಮೆಟ್ಟಿ ನಿಲ್ಲುವ ಧೈರ್ಯ ತುಂಬುತ್ತದೆ. ಹೆಣ್ಣು ಅನ್ಯಾಯ, ದೌಜನ್ಯಗಳ ವಿರುದ್ಧ ಸಿಡಿದೇಳುವ ಶಕ್ತಿಯಾಗಿದ್ದು, ಆಕೆಯ ಹಕ್ಕು, ಕಾನೂನುಗಳನ್ನು ತಿಳಿಸುವ ನಿಟ್ಟಿನಲ್ಲಿ ಮಹಿಳಾ ಆಯೋಗ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಆನ್‌ಲೈನ್, ಸೈಬರ್ ವಂಚನೆ ಮೂಲಕ ಹೆಣ್ಣು ಮಕ್ಕಳು ದೌರ್ಜನ್ಯಕ್ಕೊಳಗಾಗುತ್ತಿರುವ ಬಗ್ಗೆ ನೈಜ ಘಟನೆಯನ್ನು ವಿವರಿಸುವ ಮೂಲಕ ವಿದ್ಯಾರ್ಥಿನಿಯರಿಗೆ ಮನವರಿಕೆ ಮಾಡಿದ ಅವರು, ಯಾವುದೇ ರೀತಿಯ ಅನ್ಯಾಯ ನಡೆದಾಗ ಆತ್ಮಸ್ಥೈರ್ಯ ಕಳೆದುಕೊಳ್ಳದೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಹಾಯವನ್ನು ಪಡೆಯುವಂತೆ ಪ್ರೇರೇಪಿಸಿದರು.
ಯಶಸ್ಸಿಗೆ ಯಾವುದೇ ಅಡ್ಡದಾರಿ ಇಲ್ಲ. ಕಠಿಣ ಪರಿಶ್ರಮದಿಂದ ಸೋಲನ್ನು ಜಯಿಸಬಹುದು. ಅವಮಾನ, ಸೋಲುಗಳನ್ನು ಮೆಟ್ಟಿ ನಿಲ್ಲುವ ಧೈರ್ಯ ಮಹಿಳೆಯರಲ್ಲಿರಬೇಕು ಎಂದು ತಮ್ಮ ಜೀವನದ ಸೋಲು ಗೆಲುವುಗಳನ್ನು ಡಾ. ನಾಗಲಕ್ಷ್ಮಿ ಚೌಧರಿ ಮೆಲುಕು ಹಾಕಿದರು.
ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಜಿಲ್ಲಾ ನ್ಯಾಯಾಧೀಶರಾದ ಜೈಬುನ್ನಿಸಾ, ಕಾಲೇಜ್ ಅಭಿವೃದ್ಧಿ ಸಮಿತಿ ಯ ರಾಜಲಕ್ಷ್ಮಿ, ಕಾಲೇಜಿನ ಪ್ರಾಂಶುಪಾಲ ಗೋಪಾಲಕೃಷ್ಣ, ಗ್ರಂಥಪಾಲಕಿ ಶಿಲ್ಪಾ, ಆಂತರಿಕ ಗುಣಮಟ್ಟ ಭರವಸಾ ಕೋಶದ ಡಾ. ಮಂಜುಳಾ ಮಲ್ಯ ಮೊದಲಾದವರು ಉಪಸ್ಥಿತರಿದ್ದರು.
ಉಪನ್ಯಾಸಕಿ ಡಾ. ಜಯಶ್ರೀ ಸ್ವಾಗತಿಸಿದರು. ವಿಜಯಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು. ಮೀನಾಕ್ಷಿ ವಂದಿಸಿದರು.
ಮಂಗಳೂರಿನ ಹೆಣ್ಣು ಮಕ್ಕಳಲ್ಲಿ ಅರಿವಿನ ಬೆಳಕು ಹೆಚ್ಚಿದೆ
ಮಹಿಳಾ ಸಹಾಯವಾಣಿ, ಪೊಲೀಸ್ ಸಹಾಯವಾಣಿ ಸಂಖ್ಯೆಗಳ ಬಗ್ಗೆ ಪ್ರಶ್ನಿಸುವ ಸಂದರ್ಭ ವಿದ್ಯಾರ್ಥಿನಿಯರು ಥಟ್ಟನೆ ಉತ್ತರಿಸಿದಾಗ ಡಾ. ನಾಗಲಕ್ಷ್ಮಿ ಚೌಧರಿ ಮೆಚ್ಚುಗೆ ವ್ಯಕ್ತಪಡಿಸಿದರು. ಮಂಗಳೂರಿನ ಮಕ್ಕಳಲ್ಲಿ ಅರಿವಿನ ಬೆಳಕು ಹೆಚ್ಚಿದೆ. ಇನ್ನಷ್ಟು ಕಾನೂನು ತಿಳುವಳಿಕೆ ಪಡೆಯಬೇಕು ಎಂದು ಅವರು ಹೇಳಿದರು.







