ಕೊಣಾಜೆ | ಶಿಕ್ಷಣದ ಜೊತೆ ಮಾನವೀಯ ಮೌಲ್ಯಗಳೂ ಅಗತ್ಯ : ಡಾ.ಪ್ರಸಾದ್ ಎಸ್.ಎನ್.

ಕೊಣಾಜೆ : ಜಗತ್ತು ಇಂದು ವಿಜ್ಞಾನ ತಂತ್ರಜ್ಞಾನದ ಪ್ರಭಾವದಿಂದ ವಿಸ್ತೃತವಾಗಿ ಬೆಳೆದು ನಿಂತಿದ್ದು, ಶಿಕ್ಷಣ, ಪರಿಶ್ರಮ, ಕೌಶಲ್ಯಗಳ ಮೂಲಕ ಉತ್ತಮ ಅವಕಾಶಗಳನ್ನು ಪಡೆದುಕೊಳ್ಳಬೇಕು ಜೊತೆಗೆ ಪ್ರಾಮಾಣಿಕತೆ, ಮಾನವೀಯ ಮೌಲ್ಯಗಳ ಮೂಲಕ ಸಮಾಜಕ್ಕೆ ನಮ್ಮದೇ ಕೊಡುಗೆ ನೀಡಬೇಕು ಎಂದು ಮೈಸೂರಿನ ಎಸ್ ಡಿಎಂ ಇನಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ನಿರ್ದೇಶಕ ಡಾ.ಪ್ರಸಾದ್ ಎಸ್.ಎನ್. ಅವರು ಹೇಳಿದರು.
ಅವರು ದೇರಳಕಟ್ಟೆಯ ಯೆನೆಪೋಯ ವಿವಿಯ ಯೆಂಡೋರೆನ್ಸ್ ಸಭಾಂಗಣದಲ್ಲಿ ಮಂಗಳವಾರ ನಡೆದ ಯೆನೆಪೋಯ ಇನ್ಸ್ಟಿಟ್ಯೂಟ್ ಆಫ್ ಆರ್ಟ್ಸ್, ಸಯನ್ಸ್ ಹಾಗೂ ಕಾಮರ್ಸ್ ಮತ್ತು ಮ್ಯಾನೇಜ್ ಮೆಂಟ್ ಬಲ್ಮಠ, ಕೂಳೂರು ಮಂಗಳೂರು ಇದರ 6ನೇ ಪದವಿ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಜಗತ್ತು ಯಾರಿಗೂ ತಲೆಬಾಗುವುದಿಲ್ಲ. ಅದಕ್ಕೆ ಬದಲಾಗಿ ನಾವು ಜಗತ್ತಿಗೆ ತಮ್ಮ ಬದ್ಧತೆಯನ್ನು ತೋರಿಸಬೇಕು. ಮಾನಸಿಕ ಶಕ್ತಿ ದೈಹಿಕ ಶಕ್ತಿಯನ್ನು ರೂಪಿಸುತ್ತದೆ. ಉತ್ತಮ ನಡವಳಿಕೆ ಮತ್ತು ಕೊಡುಗೆಯ ಮೂಲಕ ಸಮಾಜದಲ್ಲಿ ಗೌರವವನ್ನು ಸಂಪಾದಿಸುವ ಮನೋಭಾವ ನಮ್ಮದಾಗಬೇಕು ಎಂದರು.
ಕೆಎಸ್ ಎ ಯೆನೆಪೋಯ ಇಂಟರ್ ನ್ಯಾಷನಲ್ ಸ್ಕೂಲ್ ಇದರ ಸಿಇಒ ಅರುಣ್ ಎ.ಭಾಗವತ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಇತ್ತೀಚೆಗೆ ಜಗತ್ತು ವಿಜ್ಞಾನ ತಂತ್ರಜ್ಞಾನದ ಮೂಲಕ ಬದಲಾವಣೆ ಕಾಣುತ್ತಿದ್ದು, ಇದಕ್ಕೆ ಪೂರಕವಾಗಿ ನಾವು ಬೆಳೆಯಬೇಕಾದ ಅನಿವಾರ್ಯತೆ ಇದೆ. ತಂತ್ರಜ್ಞಾನ ಮತ್ತು ಮಾನವಶ್ರಮ ಜೊತೆಯಾಗಿ ಸಾಗಿದರೆ ನೈಜ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.
ಯೆನೆಪೋಯ ವಿವಿಯ ಸಹಕುಲಪತಿ ಪ್ರೊ.ಶ್ರೀಪತಿ ರಾವ್ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಸ್ಪರ್ಧಾತ್ಮಕ ಕಾಲಘಟ್ಟದಲ್ಲಿ ಯೋಜಿತ ಕಾರ್ಯಯೋಜನೆಗಳೊಂದಿಗೆ ಮುನ್ನಡೆಯಬೇಕು. ಉತ್ತಮ ಸಂವಹನ, ಕೌಶಲ್ಯಗಳು, ಮೌಲ್ಯಗಳು ಭವಿಷ್ಯಕ್ಕೆ ಅವಕಾಶಗಳನ್ನು ಒದಗಿಸಿಕೊಡುತ್ತದೆ ಎಂದರು.
ಯೆನೆಪೋಯ ಇನ್ಸ್ಟಿಟ್ಯೂಟ್ ಆಫ್ ಆರ್ಟ್ಸ್, ಸಯನ್ಸ್ ಹಾಗೂ ಕಾಮರ್ಸ್ ಮತ್ತು ಮ್ಯಾನೇಜ್ ಮೆಂಟ್ ನ ಪ್ರಾಂಶುಪಾಲರಾದ ಡಾ.ಜೀವನ್ ರಾಜ್ ಉಪಸ್ಥಿತರಿದ್ದರು.
ಕಾಮರ್ಸ್ ಮ್ಯಾನೇಜ್ಮೆಂಟ್ ನ ಡೀನ್ ಡಾ.ಶರೀನಾ ಪಿ ಸ್ವಾಗತಿಸಿದರು. ಉಪಪ್ರಾಂಶುಪಾಲರಾದ ನಾರಾಯಣ ಸುಕುಮಾರ ವಂದಿಸಿದರು.
ಉಪನ್ಯಾಸಕರಾದ ಡಾ.ಶರೀನ ಶೇಖ್, ಚರಿತ್ರಾ ರೈ, ಪಿನಾಕಿನಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.







