ಕೊಣಾಜೆ | ಜನರಲ್ಲಿ ಆತಂಕ ಮೂಡಿಸಿರುವ ಚಿರತೆ ಸೆರೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ಪ್ರಾರಂಭ

ಕೊಣಾಜೆ: ಇಲ್ಲಿನ ನಡುಪದವು ಬಳಿ ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದ್ದ ಚಿರತೆ ಸೆರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಕ್ರಮಕೈಗೊಂಡಿದ್ದಾರೆ.
ಕೊಣಾಜೆ ನಡುಪದವಿನ ಮಸೀದಿ ಬಳಿ ಗುರುವಾರ ರಾತ್ರಿ ಸುಮಾರು ಎಂಟು ಗಂಟೆಯ ವೇಳೆಗೆ ಮಸೀದಿ ಬಳಿ ಕಾರಿನಲ್ಲಿ ಬರುತ್ತಿದ್ದ ವ್ಯಕ್ಯಿಯೊಬ್ಬರು ರಸ್ತೆ ಬದಿಯಲ್ಲಿ ಚಿರತೆ ಜಿಗಿಯುವ ದೃಶ್ಯವನ್ನು ಕಂಡಿದ್ದರು. ಬಳಿಕ ಅದೇ ದಿನ ರಾತ್ರಿ 9.30 ವೇಳೆಗೆ ವಾಕಿಂಗ್ ಹೋಗುತಿದ್ದ ಉಪನ್ಯಾಸಕರೊಬ್ಬರು ಅಲ್ಲೇ ಸಮೀಪದ ಲಾಡ ಬಳಿ ಚಿರತೆಯನ್ನು ನೋಡಿ ಭಯಭೀತಗೊಂಡಿದ್ದರು. ಅಲ್ಲದೆ ಅದೇ ರಾತ್ರಿ ಪರಿಸರದ ಮಹಿಳೆ ಸೇರಿದಂತೆ ಒಟ್ಟು ಐದು ಜನರು ಚಿರತೆಯನ್ನು ನೋಡಿ ಭಯಗೊಂಡಿರುವುದಾಗಿ ತಿಳಿಸಿದ್ದಾರೆ. ಬಳಿಕ ಗ್ರಾಮಸ್ಥರು ಅರಣ್ಯ ಇಲಾಖೆಗೆ ಕರೆ ಮಾಡಿ ವಿಷಯ ತಿಳಿಸಿದ್ದರು.
ಹಲವರಿಗೆ ಒಂದೇ ದಿನ ರಾತ್ರಿ ಚಿರತೆ ಕಾಣಸಿಕ್ಕಿ ಗ್ರಾಮಸ್ಥರು ಭಯಗೊಂಡಿರುವ ಕಾರಣ ಅರಣ್ಯ ಇಲಾಖೆಯ ಉಪವಲಯ ಅರಣ್ಯಾಧಿಕಾರಿ ಮಹಾಬಲ ಡಿಎಸ್, ಬಾಳೆಪುಣಿ ವ್ಯಾಪ್ತಿಯ ಗಸ್ತು ಅರಣ್ಯಪಾಲಕಿ ಸವಿತಾ ಗಸ್ತು, ಕೊಣಾಜೆ ಗಸ್ತು ಅರಣ್ಯ ಪಾಲಕ ಮಹಮ್ಮದ್ ಹನೀಫ್ ಅವರು ಶನಿವಾರ ಬೆಳಿಗ್ಗೆ ನಡುಪದವು ಪರಿಸರದಲ್ಲಿ ಪರಿಶೀಲನೆ ನಡೆಸಿ ಚಿರತೆ ಸೆರೆ ಹಿಡಿಯಲು ಬೋನ್ ಇಟ್ಟಿದ್ದಾರೆ. ಗೂಡಿನ ಒಂದು ಭಾಗದಲ್ಲಿ ಜೀವಂತ ಕೋಳಿಯನ್ನು ಇಡಲಾಗಿದ್ದು, ಅಲ್ಲದೆ ಕೋಳಿ ಮಾಂಸವನ್ನು ಕೂಡಾ ಕಟ್ಟಲಾಗಿದೆ. ನಡುಪದವು ಲಾಡಕ್ಕೆ ಹೋಗುವ ರಸ್ತೆ ಬದಿಯ ಅರಣ್ಯ ಪ್ರದೇಶದಲ್ಲಿ ಬೋನನ್ನು ಇಡಲಾಗಿದೆ. ಬೋನ್ ವ್ಯವಸ್ಥೆಗೊಳಿಸುವಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳೊಂದಿಗೆ ಗ್ರಾಮಸ್ಥರು ಸಹಕರಿಸಿದರು.







