ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣ | ಪರಾರಿಯಾಗಲು ಯತ್ನಿಸಿದ ಆರೋಪಿಯ ಕಾಲಿಗೆ ಪೊಲೀಸರಿಂದ ಗುಂಡೇಟು

ಮಂಗಳೂರು : ನಗರದ ಕೋಟೆಕಾರು ಸಹಕಾರಿ ಬ್ಯಾಂಕ್ನಲ್ಲಿ ಚಿನ್ನಾಭರಣ, ನಗದು ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆರೋಪಿ ಮೇಲೆ ಪೊಲೀಸರು ಗುಂಡಿನ ದಾಳಿ ಮಾಡಿದ್ದಾರೆ.
ಪೊಲೀಸರು ಆರೋಪಿ ಮುರುಗನ್ ಡಿ ಥೇವರ್ ಎಂಬಾತನನ್ನು ಕರೆದುಕೊಂಡು ಅಜ್ಜಿನಡ್ಕ ಎಂಬಲ್ಲಿಗೆ ಹೋಗಿ ಸ್ಥಳ ಮಹಜರು ನಡೆಸುತ್ತಿದ್ದಾಗ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ.
ದರೋಡೆ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದ ಮುರುಗನ್ ಥೇವರ್ ಮತ್ತು ಯೋಶುವಾ ರಾಜೇಂದ್ರನ್ ಅವರನ್ನು ತಮಿಳುನಾಡಿನ ತಿರುನಲ್ವೇಲಿಯಲ್ಲಿ ಬಂಧಿಸಲಾಗಿತ್ತು. ಇಂದು ಮುರುಗನ್ ಥೇವರ್ ಎಂಬಾತನನ್ನು ಮಧ್ಯಾಹ್ನ ಸ್ಥಳ ಮಹಜರು ಉದ್ದೇಶಕ್ಕಾಗಿ ಕರೆದೊಯ್ದಿದ್ದಾಗ ಪೊಲೀಸರ ಮೇಲೆ ದಾಳಿ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ, ಉಳ್ಳಾಲ ಇನ್ ಸ್ಪೆಕ್ಟರ್ ಬಾಲಕೃಷ್ಣ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ. ಗಾಯಾಳು ಆರೋಪಿಯನ್ನು ದೇರಳಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪಿಸ್ತೂಲ್ ಗಾಗಿ ಶೋಧ
ತಲೆಮರೆಸಿಕೊಂಡಿರುವ ಆರೋಪಿ ಶಶಿ ಥೇವರ್ ಅಜ್ಜಿನಡ್ಕ ಬಳಿ ಪಿಸ್ತೂಲ್ ಬಚ್ಚಿಟ್ಟಿದ್ದ. ಈ ವಿಚಾರವನ್ನು ಆತ ನನಗೆ ತಿಳಿಸಿದ್ದ ಎಂದು ಆರೋಪಿ ಮುರುಗನ್ ಡಿ ಥೇವರ್ ತನಿಖೆ ವೇಳೆ ಪೊಲೀಸರಿಗೆ ಮಾಹಿತಿ ನೀಡಿದ್ದನು. ಈ ಹಿನ್ನೆಲೆಯಲ್ಲಿ ಆರೋಪಿ ಮುರುಗನ್ ನನ್ನು ಪೊಲೀಸರು ಅಜ್ಜಿನಡ್ಕ ಬಳಿ ಇಂದು ಕರೆದುಕೊಂಡು ಹೋಗಿ ಮಹಜರು ನಡೆಸಿದ್ದರು, ಇದೀಗ ಪೊಲೀಸ್ ಬಂದೋಬಸ್ತ್ ನಲ್ಲಿ ಪೊಲೀಸರು ಅಜ್ಜಿನಡ್ಕ ಬಳಿ ಬಚ್ಚಿಟ್ಟಿರುವ ಪಿಸ್ತೂಲ್ ಗಾಗಿ ಶೋಧ ಮುಂದುವರಿಸಿದ್ದಾರೆ.







