ಕೆಪಿಸಿಸಿ ನಿಯೋಗದಿಂದ ದ.ಕ. ಜಿಲ್ಲೆಯ ಪರಿಸ್ಥಿತಿ ಅಧ್ಯಯನ ಆರಂಭ

ಮಂಗಳೂರು, ಜೂ.5: ದಕ್ಷಿಣ ಕನ್ನಡದಲ್ಲಿ ಇತ್ತೀಚೆಗೆ ನಡೆದಿರುವ ಕೆಲವು ಅಹಿತಕರ ಘಟನೆಗೆ ಸಂಬಂಧಿಸಿ ಸತ್ಯಾಸತ್ಯತೆ ಅರಿಯಲು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ)ಯಿಂದ ನಿಯೋಜಿಸಲಾದ ನಿಯೋಗದ ಸದಸ್ಯರು ಗುರುವಾರ ಬೆಳಗ್ಗೆ ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಪಕ್ಷದ ಜಿಲ್ಲಾ ಕಾಂಗ್ರೆಸ್ನ ಹಿರಿಯ ನಾಯಕರು , ಚುನಾಯಿತ ಪ್ರತಿನಿಧಿಗಳನ್ನು ಭೇಟಿಯಾಗಿ ಮಾಹಿತಿ ಪಡೆದರು.
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ನಡೆದಿರುವ ಅಹಿತಕರ ಘಟನೆಗಳು ಕೊಲೆ, ಸುಲಿಗೆ, ಹತ್ಯೆ, ಕೋಮು ಗಲಭೆ ಎಂಬಿತ್ಯಾದಿ ವ್ಯಾಖ್ಯಾನಗಳಿಂದ ವ್ಯಾಪಕವಾಗಿ ಪ್ರಚಾರವಾಗುತ್ತಿದ್ದು, ಇದರ ಸತ್ಯಾಸತ್ಯತೆ ಅರಿಯಲು ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ನೇಮಕ ಮಾಡಿರುವ ನಿಯೋಗದ ಸದಸ್ಯರಾದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಸೈಯದ್ ನಾಸಿರ್ ಹುಸೇನ್, ಕೆಪಿಸಿಸಿ ಕಾರ್ಯಾಧ್ಯಕ್ಷ ಡಾ.ಮಂಜುನಾಥ ಭಂಡಾರಿ, ಬಿಡಿಎ ಅಧ್ಯಕ್ಷ ಎನ್.ಎ.ಹಾರಿಸ್, ಎಐಸಿಸಿ ಕಾರ್ಯದರ್ಶಿ ರೋಝಿ ಜಾನ್, ಕೆಪಿಸಿಸಿ ಉಪಾಧ್ಯಕ್ಷ ವಿ.ಆರ್.ಸುದರ್ಶನ್, ಮಾಜಿ ಸಚಿವ ವಿ.ಆರ್.ಸುದರ್ಶನ್ ಮತ್ತು ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಇದ್ದಾರೆ.
ಜಿಲ್ಲಾ ಕಾಂಗ್ರೆಸ್ನ ಅಧ್ಯಕ್ಷರು, ಕೆಪಿಸಿಸಿ ಸದಸ್ಯರು, ವಿಧಾನ ಪರಿಷತ್ ಸದಸ್ಯರು, ಮಾಜಿ ಸಚಿವರು, ಪಕ್ಷದ ಹಿರಿಯ ಧುರೀಣರಿಂದ ನಿಯೋಗದ ಸದಸ್ಯರು ಅಭಿಪ್ರಾಯವನ್ನು ಸಂಗ್ರಹಿಸಿದರು.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮಾಜಿ ಸಚಿವರಾದ ಬಿ.ರಮಾನಾಥ ರೈ, ಅಭಯಚಂದ್ರ ಜೈನ್, ರಾಜ್ಯಸಭಾ ಮಾಜಿ ಸದಸ್ಯ ಬಿ.ಇಬ್ರಾಹೀಂ, ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಕಾಂಗ್ರೆಸ್ನ ಪ್ರಮುಖರಾದ ಇನಾಯತ್ ಅಲಿ, ಮಿಥುನ್ ರೈ, ಪದ್ಮರಾಜ್ ಆರ್. ಪೂಜಾರಿ, ಎಂ.ಎಸ್.ಮುಹಮ್ಮದ್, ರಕ್ಷಿತ್ ಶಿವರಾಂ, ಜಿ.ಎ.ಬಾವಾ, ಯು.ಕೆ.ಮೋನು ಕಣಚೂರು, ಮಾಜಿ ಮೇಯರ್ ಶಶೀಧರ್ ಹಗ್ಡೆ ಮತ್ತಿತರು ಭಾಗವಹಿಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾಂಗ್ರೆಸ್ ಕಚೇರಿಯಲ್ಲಿ ಅಭಿಪ್ರಾಯ ಸಂಗ್ರಹದ ಬಳಿಕ ಕೆಪಿಸಿಸಿ ನಿಯೋಗವು ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿತು.