ದ.ಕ. ಜಿಲ್ಲಾ ಕಾಂಗ್ರೆಸ್ ಸರ್ವ ಸದಸ್ಯರ ಸಭೆ: ಬ್ಯಾನರ್‌ನಲ್ಲಿ ಕೆಪಿಸಿಸಿ ಅಧ್ಯಕ್ಷರ ಫೋಟೋ ಮಾಯ!

ಮಂಗಳೂರು: ನಗರದ ಬೆಂದೂರಿನ ಸಂತ ಸೆಬೆಸ್ಟಿಯನ್ ಸಭಾಂಗಣದಲ್ಲಿ ಸೆ.11ರಂದು ನಡೆದ ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿಯ ಸರ್ವ ಸದಸ್ಯರ ಸಭೆಯಲ್ಲಿ ಹಾಕಲಾದ ಬ್ಯಾನರ್‌ನಲ್ಲಿ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರ ಫೋಟೋ ಮಾಯವಾಗಿದ್ದು, ಪಕ್ಷದೊಳಗೆ ವ್ಯಾಪಕ ಆಕ್ರೋಶ ಮತ್ತು ಚರ್ಚೆಗೆ ಕಾರಣವಾಗಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ನಾಯಕಿ ಸೋನಿಯಾ ಗಾಂಧಿ, ವಿಪಕ್ಷ ನಾಯಕ ರಾಹುಲ್ ಗಾಂಧಿ, ಸಂಸದೆ ಪ್ರಿಯಾಂಕಾ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ಶಾಸಕರಾದ ಮಂಜುನಾಥ ಭಂಡಾರಿ, ಐವನ್ ಡಿಸೋಜ, ಅಶೋಕ್ ಕುಮಾರ್, ಮಾಜಿ ಸಚಿವರಾದ ರಮಾನಾಥ ರೈ, ಅಭಯಚಂದ್ರ ಜೈನ್, ಡಿಸಿಸಿ ನೂತನ ಅಧ್ಯಕ್ಷ ಪದ್ಮರಾಜ ಆರ್. ಪೂಜಾರಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಗಳಾದ ಇನಾಯತ್ ಅಲಿ, ಮಿಥುನ್ ರೈ, ರಕ್ಷಿತ್ ಶಿವರಾಂ ಮತ್ತಿತರರ ಸಣ್ಣಗಾತ್ರದ ಫೋಟೋ ಇದೆ. ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಮತ್ತು ಡಿಸಿಸಿ ನಿರ್ಗಮನ ಅಧ್ಯಕ್ಷ ಹರೀಶ್ ಕುಮಾರ್‌ರ ದೊಡ್ಡ ಗಾತ್ರದ ಫೋಟೋ ಇದೆ. ಆದರೆ ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್‌ರ ಫೋಟೋ ಇಲ್ಲವೇ ಇಲ್ಲ. ಈ ಬಗ್ಗೆ ಸೆ.11ರಂದು ನಡೆದ ಡಿಸಿಸಿ ಸರ್ವ ಸದಸ್ಯರ ಸಭೆಯಲ್ಲೇ ಹಲವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಸರಕಾಕ್ಕೆ ಮುಖ್ಯಮಂತ್ರಿ ಸುಪ್ರೀಂ ಆದರೆ, ಕಾಂಗ್ರೆಸ್ ಪಕ್ಷಕ್ಕೆ ಕೆಪಿಸಿಸಿ ಅಧ್ಯಕ್ಷರೇ ಸುಪ್ರೀಂ. ಬ್ಯಾನರ್‌ನಲ್ಲಿ ಅವರ ಫೋಟೋವನ್ನು ಯಾಕೆ ಹಾಕಿಲ್ಲ. ಉದ್ದೇಶಪೂರ್ವಕವೇ ಎಂದು ಸಭೆಯಲ್ಲಿದ್ದ ಹಲವರು ನಾಯಕರ ವಿರುದ್ಧ ಹರಿಹಾಯ್ದಿದಿದ್ದಾರೆ ಎನ್ನಲಾಗಿದೆ.
ಇದು ಉದ್ದೇಶಪೂರ್ವಕವಾಗಿ ಮಾಡಿದ್ದಲ್ಲ. ಅಚಾತುರ್ಯದಿಂದ ಆಗಿದೆ. ಬ್ಯಾನರ್‌ನಲ್ಲಿ ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಧಾನ ಪರಿಷತ್ ನೂತನ ಸದಸ್ಯ ಪಿ.ವಿ. ಮೋಹನ್‌ರ ಫೋಟೋ ಕೂಡ ಇಲ್ಲ. ಇದು ಅಚಾತುರ್ಯವೇ ಹೊರತು ಉದ್ದೇಶಪೂರ್ವಕವಲ್ಲ. ಮುಂದಿನ ದಿನಗಳಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳ ಬ್ಯಾನರ್‌ಗಳಲ್ಲಿ ಕೆಪಿಸಿಸಿ ಅಧ್ಯಕ್ಷರ ಸಹಿತ ಪ್ರಮುಖರ ಫೋಟೋ ಹಾಕಿಸಲಾಗುವುದು ಎಂದು ನಾಯಕರು ಸಮಜಾಯಿಸಿಕೆ ನೀಡಿರುವುದಾಗಿ ಹೇಳಲಾಗಿದೆ.






