2007ರ KPME ಕಾಯ್ದೆಯನ್ನು ಈಗ ಓದಿ ಹೇಳಿ ಜನರ ಕಣ್ಣಿಗೆ ಮಣ್ಣೆರಚಬೇಡಿ; ಜಿಲ್ಲಾ ಮಟ್ಟದ ನಿಯಂತ್ರಣ ಪ್ರಾಧಿಕಾರಗಳಿಗೆ ಅಧಿಕಾರ ನೀಡಿ: ಡಿವೈಎಫ್‌ಐ

ಮಂಗಳೂರು: ಖಾಸಗಿ ಆಸ್ಪತ್ರೆಗಳ ಚಿಕಿತ್ಸಾ ಶುಲ್ಕದ ಸುಲಿಗೆಯಿಂದ ಜನಸಾಮಾನ್ಯರು ತತ್ತರಿಸುತ್ತಿರುವಾಗ, ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಹಳೆಯ ಕಾಯ್ದೆಯ ನಿಯಮಗಳನ್ನು ಒಂದೊಂದಾಗಿ ಓದಿ ಮಾಧ್ಯಮಗಳ ಮುಂದೆ ಹೇಳಿಕೆ ನೀಡುತ್ತಿರುವುದು ಜನರ ಕಣ್ಣಿಗೆ ಮಣ್ಣೆರಚುವ ಪ್ರಯತ್ನದಂತಿದೆ. 2007ರಿಂದಲೇ ಜಾರಿಯಲ್ಲಿರುವ ಕಾಯ್ದೆಯ ನಿಯಮಗಳನ್ನು ಈಗಷ್ಟೇ ಕಂಡುಕೊಂಡವರಂತೆ ಮಾತನಾಡುವುದರಿಂದ ಜನರ ಆರೋಗ್ಯ ಸಮಸ್ಯೆಗಳು ಬಗೆಹರಿಯುವುದಿಲ್ಲ. ಕಾಯ್ದೆ ಇದೆ, ನಿಯಮಗಳಿವೆ ಆದರೆ ಅವುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ರಾಜಕೀಯ ಇಚ್ಛಾಶಕ್ತಿ ಸರ್ಕಾರಕ್ಕಿದೆಯೇ ಎಂಬುದೇ ಇಂದಿನ ಪ್ರಶ್ನೆ ? ಎಂದು ಡಿವೈಎಫ್‌ಐ ಕರ್ನಾಟಕ ರಾಜ್ಯ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ.
2007ರಲ್ಲಿ ಜಾರಿಗೆ ಬಂದ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆ (KPME Act) ಖಾಸಗಿ ಆಸ್ಪತ್ರೆಗಳು ಮತ್ತು ಕ್ಲಿನಿಕ್‌ಗಳ ನಿಯಂತ್ರಣಕ್ಕೆ ಸಂಬಂಧಿಸಿದ ಹಲವು ನಿಯಮಗಳನ್ನು ಒಳಗೊಂಡಿದೆ. ಈ ಕಾಯ್ದೆಗೆ ಕಾಲಕಾಲಕ್ಕೆ ತಿದ್ದುಪಡಿಗಳನ್ನೂ ತರಲಾಗಿದೆ. ಇಷ್ಟೆಲ್ಲ ವರ್ಷಗಳಿಂದ ಕಾಯ್ದೆ ಜಾರಿಯಲ್ಲಿದ್ದರೂ ಖಾಸಗಿ ಆಸ್ಪತ್ರೆಗಳ ಚಿಕಿತ್ಸಾ ಶುಲ್ಕದ ಮೇಲೆ ಪರಿಣಾಮಕಾರಿ ನಿಯಂತ್ರಣ ಸಾಧಿಸಲು ಸರ್ಕಾರಕ್ಕೆ ಸಾಧ್ಯವಾಗದಿರುವುದು ಆಡಳಿತದ ವೈಫಲ್ಯವಲ್ಲದೆ ಮತ್ತಿನ್ನೇನಲ್ಲ. ಕಾಯ್ದೆಯ ನಿಯಮಗಳನ್ನು ಮಾಧ್ಯಮಗಳ ಮುಂದೆ ಓದಿ ಹೇಳುವುದಕ್ಕಿಂತ, ಅವುಗಳನ್ನು ಉಲ್ಲಂಘಿಸುವ ಆಸ್ಪತ್ರೆಗಳ ವಿರುದ್ಧ ಸರ್ಕಾರ ಕೈಗೊಂಡಿರುವ ಕ್ರಮಗಳೇನು ಎಂಬುದನ್ನು ಆರೋಗ್ಯ ಸಚಿವರು ಜನರಿಗೆ ತಿಳಿಸಬೇಕು.
ಒಂದೇ ಚಿಕಿತ್ಸೆಗೆ ಒಂದೊಂದು ಆಸ್ಪತ್ರೆಯಲ್ಲಿ ಒಂದೊಂದು ದರ, ಸಾಮಾನ್ಯ ಜನರ ಕೈಗೆಟುಕದ ಚಿಕಿತ್ಸಾ ವೆಚ್ಚ, ಅಗತ್ಯವಿಲ್ಲದ ಪರೀಕ್ಷೆಗಳ ಹೊರೆ, ಆಸ್ಪತ್ರೆಯಿಂದ ಬಿಡುಗಡೆಯಾಗುವವರೆಗೂ ಮುಂದುವರಿಯುವ ಬಿಲ್‌ಗಳ ಆತಂಕ, ಇವೆಲ್ಲವೂ ಜನರು ಎದುರಿಸುತ್ತಿರುವ ವಾಸ್ತವ ಸಮಸ್ಯೆಗಳು. ಇಂತಹ ಸಂದರ್ಭದಲ್ಲಿ ಒಂದೇ ಚಿಕಿತ್ಸೆಗೆ ಬೇರೆ ಬೇರೆ ಊರುಗಳಲ್ಲಿ ಬೇರೆ ಬೇರೆ ದರ ವಿಧಿಸುವುದು ಸರಿಯಲ್ಲ ಎಂದು ಹೇಳಿಕೆ ನೀಡುವುದರಲ್ಲಿ ಹೊಸತೇನಿದೆ? ತಪ್ಪು ಎಂದು ಹೇಳುವುದು ಸುಲಭ, ಅದನ್ನು ತಡೆಯುವ ಅಧಿಕಾರದಲ್ಲಿರುವವರು ಕ್ರಮ ಕೈಗೊಳ್ಳುವುದೇ ನಿಜವಾದ ಜವಾಬ್ದಾರಿ ಎಂಬುದನ್ನು ಆರೋಗ್ಯ ಮಂತ್ರಿ ಅರಿಯಬೇಕು.
ಡಿವೈಎಫ್‌ಐ 2015ರಿಂದಲೇ ದಕ್ಷಿಣ ಕನ್ನಡ ಜಿಲ್ಲೆಯ ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿ, ಚಿಕಿತ್ಸಾ ದರಪಟ್ಟಿಯನ್ನು ಕಡ್ಡಾಯವಾಗಿ ಪ್ರಕಟಿಸುವಂತೆ ಒತ್ತಾಯಿಸುತ್ತಾ ಬಂದಿದೆ. ಈ ಬೇಡಿಕೆಯನ್ನು ರಾಜ್ಯಾದ್ಯಂತ ಜಾರಿಗೊಳಿಸಬೇಕೆಂದೂ ಆಗ್ರಹಿಸಿದೆ. ಆಗಲೂ ಆರೋಗ್ಯ ಸಚಿವರಾಗಿದ್ದವರು ನೀವೇ. ಅಂದಿನಿಂದ ಇಂದಿನವರೆಗೆ ಜನರ ಈ ನ್ಯಾಯಯುತ ಬೇಡಿಕೆಗೆ ಪೂರ್ಣ ಪ್ರಮಾಣದ ಪರಿಹಾರ ಕಲ್ಪಿಸಲು ಸಾಧ್ಯವಾಗದಿದ್ದರೆ, ಈಗ ನೀಡುತ್ತಿರುವ ಹೇಳಿಕೆಗಳಿಂದ ಜನರಿಗೆ ಯಾವ ಪ್ರಯೋಜನವಾಗಲಿದೆ? ಡಿವೈಎಫ್‌ಐ ಹಲವು ವರ್ಷಗಳ ಹಿಂದೆಯೇ ಎತ್ತಿದ್ದ ಬೇಡಿಕೆಯನ್ನು ಈಗ ಹೊಸ ಆಲೋಚನೆಯಂತೆ ಮಂಡಿಸುವ ಬದಲು, ಅದನ್ನು ಜಾರಿಗೆ ತಂದು ತೋರಿಸಿ. ರೋಗಿಯ ಅಸಹಾಯಕತೆಯನ್ನು ಲಾಭ ಗಳಿಸುವ ಅವಕಾಶವಾಗಿ ಬಳಸಿಕೊಳ್ಳುವ ಖಾಸಗೀ ಆಸ್ಪತ್ರೆಗಳ ಪ್ರವೃತ್ತಿಗೆ ಸರ್ಕಾರ ಕಡಿವಾಣ ಹಾಕಬೇಕು. ಖಾಸಗಿ ಆಸ್ಪತ್ರೆಗಳ ಆಡಳಿತ ಮಂಡಳಿಗಳ ಒತ್ತಡಕ್ಕೆ ಮಣಿಯದೆ ಜನರ ಪರವಾಗಿ ನಿಲ್ಲುವ ಧೈರ್ಯವನ್ನು ಆರೋಗ್ಯ ಸಚಿವರು ಪ್ರದರ್ಶಿಸಬೇಕು. ಅಲ್ಲದೆ ಸರಕಾರಿ ಆಸ್ಪತ್ರೆಗಳ ಬಲಪಡಿಸಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದೆ.
ಮೊದಲನೆಯದಾಗಿ, ಸರ್ಕಾರಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಿ ಖಾಸಗಿ ಆಸ್ಪತ್ರೆಗಳಿಗೆ ಸಮರ್ಥ ಪರ್ಯಾಯವಾಗಿ ರೂಪಿಸಬೇಕು. ಅಗತ್ಯ ವೈದ್ಯರು, ತಜ್ಞ ವೈದ್ಯರು, ಔಷಧಗಳು, ಆಧುನಿಕ ವೈದ್ಯಕೀಯ ಉಪಕರಣಗಳು ಮತ್ತು ಮೂಲಸೌಕರ್ಯಗಳನ್ನು ಒದಗಿಸಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಚಿಕಿತ್ಸೆ ದೊರೆಯುವಂತೆ ಮಾಡಿದಾಗ ಮಾತ್ರ ಜನರು ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗಳ ಬಾಗಿಲು ತಟ್ಟುವ ಪರಿಸ್ಥಿತಿಯಿಂದ ಹೊರಬರಲು ಸಾಧ್ಯ.
ಇದರ ಜೊತೆಗೆ, ಪ್ರತಿಯೊಂದು ಜಿಲ್ಲೆಯಲ್ಲಿ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ, ಜಯದೇವ ಹೃದ್ರೋಗ ಆಸ್ಪತ್ರೆ ಮತ್ತು ನಿಮಾನ್ಸ್‌ನಂತಹ ವಿಶೇಷ ಚಿಕಿತ್ಸಾ ಸಂಸ್ಥೆಗಳ ಘಟಕಗಳನ್ನು ಆರಂಭಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಗಂಭೀರ ಕಾಯಿಲೆಗಳ ಚಿಕಿತ್ಸೆಗೆ ದೂರದ ನಗರಗಳಿಗೆ ತೆರಳಬೇಕಾದ ಅನಿವಾರ್ಯತೆಯನ್ನು ತಪ್ಪಿಸಬೇಕು. ಬಡ ಮತ್ತು ಮಧ್ಯಮ ವರ್ಗದ ಜನರಿಗೆ ವಿಶೇಷ ಚಿಕಿತ್ಸೆಗಳು ತಮ್ಮ ಜಿಲ್ಲೆಯಲ್ಲೇ ಕೈಗೆಟುಕುವ ದರದಲ್ಲಿ ದೊರೆಯುವಂತೆ ಮಾಡಬೇಕು. ಜನರ ಆರೋಗ್ಯದ ಬಗ್ಗೆ ನಿಜವಾದ ಕಾಳಜಿ ಇದ್ದರೆ, ಇಂತಹ ಶಾಶ್ವತ ಪರಿಹಾರಗಳತ್ತ ಸರ್ಕಾರ ಗಮನ ಹರಿಸಬೇಕು.
ಎರಡನೆಯದಾಗಿ, KPME ಕಾಯ್ದೆಯಡಿ ಕಾರ್ಯನಿರ್ವಹಿಸುವ ಜಿಲ್ಲಾ ಮಟ್ಟದ ನಿಯಂತ್ರಣ ಪ್ರಾಧಿಕಾರಗಳಿಗೆ ಹೆಚ್ಚಿನ ಅಧಿಕಾರ, ಸಿಬ್ಬಂದಿ ಮತ್ತು ಅಗತ್ಯ ಸಂಪನ್ಮೂಲಗಳನ್ನು ಒದಗಿಸಬೇಕು. ಖಾಸಗಿ ಆಸ್ಪತ್ರೆಗಳ ತಪ್ಪಾದ ಚಿಕಿತ್ಸಾ ಕ್ರಮಗಳು, ಅನಗತ್ಯ ಪರೀಕ್ಷೆಗಳು, ಅಕ್ರಮ ಶುಲ್ಕ ವಸೂಲಿ ಮತ್ತು ಕಾಯ್ದೆಯ ಉಲ್ಲಂಘನೆಗಳ ಕುರಿತು ದೂರುಗಳು ಬಂದಾಗ, ಅವುಗಳನ್ನು ತ್ವರಿತವಾಗಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ವ್ಯವಸ್ಥೆ ಇರಬೇಕು.
ಆದ್ದರಿಂದ, ಆರೋಗ್ಯ ಸಚಿವರು ಹಳೆಯ ಕಾಯ್ದೆಯ ನಿಯಮಗಳನ್ನು ಓದಿ ಹೇಳಿಕೆ ನೀಡುವುದಕ್ಕಿಂತ, ಅವುಗಳ ಕಟ್ಟುನಿಟ್ಟಿನ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು. ಸರ್ಕಾರಿ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಬೇಕು ಹಾಗೂ ಜಿಲ್ಲಾ ಮಟ್ಟದ ನಿಯಂತ್ರಣ ಪ್ರಾಧಿಕಾರಗಳಿಗೆ ಹೆಚ್ಚಿನ ಅಧಿಕಾರ ನೀಡಿ ಖಾಸಗಿ ಆಸ್ಪತ್ರೆಗಳ ಅನಿಯಂತ್ರಿತ ಶುಲ್ಕ ವಸೂಲಿ ಮತ್ತು ನಿಯಮಬಾಹಿರ ಚಿಕಿತ್ಸಾ ಕ್ರಮಗಳಿಗೆ ಕಡಿವಾಣ ಹಾಕಬೇಕು ಎಂದು ಡಿವೈಎಫ್‌ಐ ಕರ್ನಾಟಕ ರಾಜ್ಯ ಸಮಿತಿ ಆಗ್ರಹಿಸುತ್ತದೆ ಎಂದು ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಸಂತೋಷ್ ಬಜಾಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






