ಎಸ್.ವೈ.ಎಸ್.ನಿಂದ ‘ಮಾದರಿ ಮದುವೆ: ಶತದಿನ ಅಭಿಯಾನ’

ಮಂಗಳೂರು: ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘದಿಂದ ‘ಮಾದರಿ ಮದುವೆ: ಶತದಿನ ಅಭಿಯಾನ’ ಸಮಾಜ ಸುಧಾರಣಾ ಚಳವಳಿಯನ್ನು ಹಮ್ಮಿಕೊಳ್ಳಲಾಗಿದೆ. ನ.8ರಿಂದ 2026 ಫೆ.15ರವರೆಗೆ ಈ ಅಭಿಯಾನ ನಡೆಯಲಿದೆ ಎಂದು ಎಸ್.ವೈ.ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಂ.ಅಬೂಬಕ್ಕರ್ ಸಿದ್ದೀಕ್ ಹೇಳಿದರು.
ಅವರು ಗುರುವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಮದುವೆಯಲ್ಲಿ ಆಚರಿಸಲಾಗುತ್ತಿರುವ ಅನಾಚಾರಗಳನ್ನು ತೊಡೆದು ಹಾಕಲು ಮತ್ತು ಆರ್ಥಿಕ ಭಾರವನ್ನು ಹಗುರಗೊಳಿಸುವ ಉದ್ದೇಶದಿಂದ ನಡೆಯಲಿರುವ ‘ಮಾದರಿ ಮದುವೆ: ಶತದಿನ ಅಭಿಯಾನ’ ನ.8 ರಂದು ಕೊಡಗು ಜಿಲ್ಲೆಯ ಎಮ್ಮೆಮಾಡುವಿನಲ್ಲಿ ಉದ್ಘಾಟನೆಗೊಳ್ಳಲಿದೆ. ರಾಜ್ಯಾಧ್ಯಕ್ಷ ಬಶೀರ್ ಸಅದಿ ಬೆಂಗಳೂರು ಅಧ್ಯಕ್ಷತೆಯಲ್ಲಿ ಸುನ್ನೀ ಉಲಮಾ ಒಕ್ಕೂಟದ ಕೊಡಗು ಜಿಲ್ಲಾಧ್ಯಕ್ಷ ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಕಿಲ್ಲೂರು ಉದ್ಘಾಟಿಸಲಿದ್ದಾರೆ. ಅಧ್ಯಾತ್ಮ ಗುರು ಸಯ್ಯಿದ್ ವಿ.ಪಿ. ಅಬ್ದುರ‌್ರಹ್ಮಾನ್ ದಾರಿಮಿ ಆಟೀರಿ ತಂಙಳ್, ಕಲ್ಲಿಕೋಟೆ ಮರ್ಕಝ್ ಉಪನ್ಯಾಸಕ ಹಾಫಿಝ್ ಕೌಸರ್ ಸಖಾಫಿ ಭಾಷಣ ಮಾಡಲಿದ್ದಾರೆ. ಕೂರ್ಗ್ ಜಂಇಯತುಲ್ ಉಲಮಾ ನಾಯಕರಾದ ಸಯ್ಯಿದ್ ಇಲ್ಯಾಸ್ ತಂಙಳ್, ಎರುಮಾಡ್ ದರ್ಗಾಧ್ಯಕ್ಷ ಹುಸೈನ್ ಸಖಾಫಿ, ಶಾಸಕರಾದ ಮಂಥರ್ ಗೌಡ, ಪೊನ್ನಪ್ಪ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. 2026ರ ಫೆ.15ರಂದು ಅಭಿಯಾನವು ಸಮಾರೋಪಗೊಳ್ಳಲಿದ್ದು, ಅಭಿಯಾನದ ವೇಳೆ ನಾನಾ ಸ್ತರಗಳಲ್ಲಿರುವ ಜನರಲ್ಲಿ ಜಾಗೃತಿ ಮೂಡಿಸಲು ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದರು.
ಈ ಸಂದರ್ಭ ಎಸ್‌ವೈ ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಂ. ಅಬೂಬಕರ್ ಸಿದ್ದೀಖ್, ಕೋಶಾಧಿಕಾರಿ ಮನ್ಸೂರ್ ಅಲಿ ತೀರ್ಥಹಳ್ಳಿ, ಉಪಾಧ್ಯಕ್ಷ ಅಬ್ದುರ‌್ರಹ್ಮಾನ್ ರಝ್ವಿ ಉಡುಪಿ, ಕಾರ‌್ಯದರ್ಶಿ ಆಸಿಫ್ ಕೃಷ್ಣಾಪುರ, ಜಿಲ್ಲಾಧ್ಯಕ್ಷ ಮಹೂಬ್ ಸಖಾಫಿ, ಜಿಲ್ಲಾ ಪ್ರಧಾನ ಕಾರ‌್ಯದರ್ಶಿ ಇಸ್ಮಾಈಲ್ ಮಾಸ್ಟರ್ ಹಾಗೂ ನಗರ ಸಮಿತಿ ಕಾರ್ಯದರ್ಶಿ ಸಿದ್ದೀಕ್ ತೋಕೂರು ಉಪಸ್ಥಿತರಿದ್ದರು.





