ಕರಾವಳಿಗೆ ಮಲ್ನಾಡ್ ಟೂರಿಸಂ ಕಾರ್ಪೊರೇಶನ್: ದ.ಕ. ಜಿಲ್ಲಾ ಸ್ವಾತಂತ್ರ್ಯೋತ್ಸವದಲ್ಲಿ ಸಚಿವ ಯು.ಟಿ.ಖಾದರ್ ಘೋಷಣೆ

ಮಂಗಳೂರು, ಆ.15: ಕರಾವಳಿ ಪ್ರದೇಶದ ಯುವಕರ ಭವಿಷ್ಯಕ್ಕೆ ಪೂರಕವಾಗಿ, ಜಾಗತಿಕ ಮಟ್ಟದಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಕರಾವಳಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಮಲ್ನಾಡ್ ಟೂರಿಸಂ ಕಾರ್ಪೊರೇಶನ್ ಆರಂಭಿಸಲು ಸರಕಾರ ತೀರ್ಮಾನಿಸಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಅಲ್ಪಸಂಖ್ಯಾತ ಕಲ್ಯಾಣ, ಹಜ್ ಮತ್ತು ವಕ್ಫ್ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ.ಖಾದರ್ ಹೇಳಿದ್ದಾರೆ.
ನೆಹರೂ ಮೈದಾನದಲ್ಲಿ ಶನಿವಾರ ದ.ಕ. ಜಿಲ್ಲಾ ಮಟ್ಟದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ಸಚಿವ ಯು.ಟಿ.ಖಾದರ್, ಪೆರೇಡ್ ವೀಕ್ಷಣೆಯ ಬಳಿಕ ಸ್ವಾತಂತ್ರ್ಯೋತ್ಸವ ಸಂದೇಶ ನೀಡಿದರು.
ರೈತರು, ಯುವಕರು ಸೇರಿದಂತೆ ಸಮಾಜದ ವಿವಿಧ ವರ್ಗಗಳ ಜನರಿಗೆ ಪೂರಕವಾಗಿ ಸರಕಾರ 100 ದಿನಗಳ 10 ಪ್ರಮುಖ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ರೈತ ಮಿತ್ರ ಯೋಜನೆಯಡಿ ಒಂದು ಹೆಕ್ಟೇರ್‌ವರೆಗಿನ ಜಮೀನು ಹೊಂದಿರುವ ರೈತರಿಗೆ ಕೃಷಿ ಯಂತ್ರೋಪಕರಣಗಳ ಬಾಡಿಗೆ ಮೊತ್ತದಲ್ಲಿ ಶೇ. 50ರಷ್ಟು ಸಬ್ಸಿಡಿ ನೀಡಲಿದೆ.
ವಿದ್ಯಾರ್ಥಿಗಳಿಗೆ ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಕಲೆ ಮತ್ತು ಸಂಸ್ಕೃತಿ ಸೇರಿದಂತೆ ಗ್ರಾಮೀಣ ಬದುಕಿನ ಅನುಭವಕ್ಕಾಗಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಿದೆ. ಯುವ ಕರ್ನಾಟಕ ನಿರ್ಮಾಣ ಯೋಜನೆಯಡಿ ಭಾರತ್ ಜೋಡೋ ಯುವಕ ಸಂಘ ಮಿಷನ್ ಮೂಲಕ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 6000, ನಗರ ಪ್ರದೇಶಗಳಲ್ಲಿ 4000 ಸಂಘಗಳ ಸ್ಥಾಪನೆ, ವಾರ್ಷಿಕ ತಲಾ 10 ಲಕ್ಷ ರೂ. ಅನುದಾನದಂತೆ ವಾರ್ಷಿಕ 1000 ಕೋಟಿ ರೂ.ಗಳ ವೆಚ್ಚದಲ್ಲಿ ಯುವಕರಲ್ಲಿ ಆರೋಗ್ಯ ಕೌಶಲ್ಯ ಹಾಗೂ ಸಾಮಾಜಿಕ ಸಾಮರಸ್ಯಕ್ಕೆ ಉತ್ತೇಜನ ನೀಡಲಾಗುವುದು.
ಯುವ ಉದ್ಯೋಗ ಸೇತು, ಸರಕಾರಿ ಆಸ್ಪತ್ರೆಗಳ ದತ್ತು ಯೋಜನೆ, ನಶೆ ಮುಕ್ತ ಕರ್ನಾಟಕ, ಪ್ರಜಾಸೇವೆ ಇಲಾಖೆ, ಭೂ ಗ್ಯಾರಂಟಿ, ಕರ್ನಾಟಕ ಮೊಬಿಲಿಟಿ ಗ್ರೀಡ್ ಮಿಷನ್ ಮೊದಲಾದ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ವಿವರಿಸಿದರು. ನಮ್ಮ ಮಂಗಳೂರು ಮಿನಿ ಭಾರತ ಇದ್ದಂತೆ ಇಲ್ಲಿ ವಿವಿಧ ಧರ್ಮಗಳ, ಭಾಷೆಗಳ, ಸಂಸ್ಕೃತಿಗಳ ಮತ್ತು ವೈವಿಧ್ಯಮಯ ಜೀವನ ಪದ್ಧತಿಗಳ ಜನರು ಪರಸ್ಪರ ಪ್ರೀತಿ, ಗೌರವ ಮತ್ತು ಸಹಬಾಳ್ವೆಯಿಂದ ಬದುಕುತ್ತಿದ್ದಾರೆ. ನಮ್ಮ ನಂಬಿಕೆ, ಭಾಷೆ ಭಿನ್ನವಾಗಿರಬಹುದು. ರಾಜಕೀಯ ಅಭಿಪ್ರಾಯಗಳೂ ಬೇರೆಯಾಗಿರಬಹುದು. ಆದರೆ ನಮ್ಮ ಭವ್ಯ ರಾಷ್ಟ್ರ ಧ್ವಜದಡಿ ನಮ್ಮ ಪ್ರಜಾಪ್ರಭುತ್ವದ ವ್ಯವಸ್ಥೆಯೊಳಗೆ ನಾವೆಲ್ಲರೂ ಒಂದೇ. ನಮ್ಮ ಹೆಮ್ಮೆಯ ಗುರುತು ಭಾರತೀಯತೆ. ಇದುವೇ ನಮ್ಮ ಪ್ರಬಲ ಶಕ್ತಿ ಎಂದವರು ಹೇಳಿದರು.
ಸಂಸದ ಕ್ಯಾ. ಬ್ರಿಜೇಶ್ ಚೌಟ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಕರ್ನಾಟಕ ರಾಜ್ಯ ಕನಿಷ್ಟ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ. ಶಾಹಿದ್ ತೆಕ್ಕಿಲ್, ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಅಧ್ಯಕ್ಷೆ ಶಾಲೆಟ್ ಪಿಂಟೋ, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರನಾಥ್ ಗಟ್ಟಿ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮರ್ ಯು.ಎಚ್., ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ, ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ, ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್, ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕುಮಾರ್, ಜಿ.ಪಂ. ಸಿಇಒ ನರ್ವಡೆ ವಿನಾಯಕ್ ಕರ್ಭಾರಿ, ಪಾಲಿಕೆ ಆಯುಕ್ತ ರಾಹುಲ್ ರತ್ನಂ ಪಾಂಡೆ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಪೊಲೀಸ್ ಬ್ಯಾಂಡ್‌ನೊಂದಿಗೆ ರಾಷ್ಟ್ರಗೀತೆ, ಕೆನರಾ ಶಾಲೆ ಮಕ್ಕಳಿಂದ ವಂದೇ ಮಾತರಂ, ನಾಡಗೀತೆ ಹಾಗೂ ರೈತ ಗೀತೆ ಗಾಯನ ನಡೆಯಿತು.
ಎಸಿಪಿ ವಿಜಯ ಕ್ರಾಂತಿಯವರು ವಿವಿಧ ತಂಡಗಳ ಆಕರ್ಷಕ ಪಥ ಸಂಚಲನದ ನೇತೃತ್ವ ವಹಿಸಿದ್ದರು. ಪಥ ಸಂಚಲನದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಮುಲ್ಲಕಾಡು ಸರಕಾರಿ ಪ್ರಾಥಮಿಕ ಶಾಲೆಯ ಸೇವಾದಳದ ವಿದ್ಯಾರ್ಥಿಗಳ ತಂಡ ಪ್ರಥಮ ಸ್ಥಾನ ಹಾಗೂ ಎಸ್‌ಡಿಎಂ ಅಶೋಕನಗರದ ಸ್ಕೌಟ್ಸ್ ಬಾಲಕರ ತಂಡ ದ್ವಿತೀಯ ಸ್ಥಾನದ ರೋಲಿಂಗ್ ಶೀಲ್ಡ್ ಪಡೆಯಿತು.
ಕಳೆದ ಫೆಬ್ರವರಿ ತಿಂಗಳಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದ 63ರ ಹರೆಯದ ಐರಿನ್ ಡಿಸೋಜಾ ಅವರ ಅಂಗಾಂಗಳ ದಾನದ ಮೂಲಕ ಸಾವಿನಲ್ಲೂ ಸಾರ್ಥಕತೆ ಮರೆದ ಸ್ಮರಣಾರ್ಥ, ಅದಕ್ಕೆ ಪ್ರೇರಣೆ ನೀಡಿದ ಅವರ ಪುತ್ರಿ ನೀತಾ ಪಿರೇರಾರನ್ನು ಸಮಾರಂಭದಲ್ಲಿ ಗೌರವಿಸಲಾಯಿತು.
ದೇಶಪ್ರೇಮವೆಂದರೆ ಕೇವಲ ದೇಶವನ್ನು ಪ್ರೀತಿಸುವುದು ಮಾತ್ರವಲ್ಲ, ದೇಶದ ಪ್ರತಿಯೊಬ್ಬ ಪ್ರಜೆಯನ್ನು ಗೌರವಿಸುವುದು. ಪ್ರತಿಯೊಂದು ಧರ್ಮದ ಸಂದೇಶವೂ ಒಂದೇ ಆಗಿದ್ದು, ಇನೊಬ್ಬರ ಮನಸ್ಸಿಗೆ ಹಾಗೂ ದೇಹಕ್ಕೆ ಗಾಯ ಮಾಡುವ ಕತ್ತಿಯಾಗಬಾರದು. ಬದಲಾಗಿ ಅದು ಇನ್ನೊಬ್ಬರ ಗಾಯವನ್ನು ಗುಣಮಪಡಿಸುವ ಔಷಧ, ಸೌಹಾರ್ದತೆಯ ಮುಲಾಮಾಗಬೇಕು. ವೈವಿಧ್ಯತೆಯಲ್ಲಿ ಏಕತೆ ನಮ್ಮ ಭಾರತದ ಶಕ್ತಿ. ಸಹಿಷ್ಣುತೆ ನಮ್ಮ ಸಂಸ್ಕೃತಿ, ಸಹೋದರತ್ವ ನಮ್ಮ ಬಾಂಧವ್ಯ, ಸಮಾನತೆ ನಮ್ಮ ಸಂವಿಧಾನದ ಆತ್ಮ ಎಂದು ಎಂದು ಸಚಿವ ಯು.ಟಿ.ಖಾದರ್ ಸ್ವಾತಂತ್ರ್ಯೋತ್ಸವ ಸಂದೇಶ ನೀಡಿದರು.
ತೇಗದ ಸಿರಿ ಯೋಜನೆ- ಭೂಮಾಲಕರಿಗೆ ಶೇ. 70ರಷ್ಟು ರಾಜಸ್ವ ಪಾಲು
ಪರಿಸರಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಸರಕಾರವು ವಾಣಿಜ್ಯ ಮೌಲ್ಯವುಳ್ಳ ತೇಗ ಸೇರಿದಂತೆ ಇತರ ಮರಗಳನ್ನು ಜಮೀನು ಮಾಲಕರು ಅವರ ಜಮೀನು ಪಕ್ಕದಲ್ಲಿರುವ ಸರಕಾರಿ ಜಾಗಗಳಲ್ಲಿ ಬೆಳೆಸಲು ಪ್ರೋತ್ಸಾಹಿಸಲಿದೆ. ಮರಗಳ ಮಾರಾಟದಿಂದ ಬರುವ ರಾಜಸ್ವದ ಶೇ. 70ರಷ್ಟು ಭೂ ಮಾಲಕರಿಗೆ ನೀಡುವ ಯೋಜನೆ ಇದಾಗಿದೆ ಎಂದು ಸಚಿವ ಯು.ಟಿ.ಖಾದರ್ ತಿಳಿಸಿದರು.






