ಮಂಗಳೂರು | ಕಳವಾದ ಚಪ್ಪಲಿಗಾಗಿ 112ಗೆ ಕರೆ ಮಾಡಿದ ಯುವಕ!

ಮಂಗಳೂರು, ಜು. 19: ತುರ್ತು ಸಂದರ್ಭಗಳಲ್ಲಿ ಸಹಾಯ ಅಥವಾ ಪೊಲೀಸರ ನೆರವಿಗಾಗಿನ 112 ಸಹಾಯವಾಣಿಗೆ ಕರೆ ಮಾಡಿದ ವ್ಯಕ್ತಿಯೋರ್ವ ಕಳವಾಗಿರುವ ತಮ್ಮ ಚಪ್ಪಲಿ ಹುಡುಕಿ ಕೊಡುವಂತೆ ದೂರು ನೀಡಿದ ಪ್ರಸಂಗ ಮಂಗಳವಾರ ನಡೆದಿದೆ.
ನಗರದ ಶರವು ದೇವಸ್ಥಾನದ ಬಳಿಯ ಬಾಳಂ ಭಟ್ ಹಾಲ್ಗೆ ಬಂದಿದ್ದ ಯುವಕನೋರ್ವನ ಚಪ್ಪಲಿ ನಾಪತ್ತೆಯಾಗಿದ್ದು, ಹುಡುಕಾಡಿ ಸಿಗದಾಗ 112ಗೆ ಕರೆ ಮಾಡಿದ್ದಾನೆ. ದೂರನ್ನು ಪರಿಶೀಲಿಸುವಂತೆ ಬಂದರು ಠಾಣೆಗೆ ಸಂದೇಶ ಬಂದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಪೊಲೀಸರು ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮರವನ್ನೂ ಪರಿಶೀಲಿಸಿದ್ದು, ಮಾರುಕಟ್ಟೆಯಿಂದ ಸಾಮಗ್ರಿ ಹಾಕಲುಬಂದಿದ್ದ ವ್ಯಕ್ತಿಯೊಬ್ಬ ಚಪ್ಪಲಿ ಹಾಕಿಕೊಂಡು ಹೋಗಿರುವುದು ಗಮನಕ್ಕೆ ಬಂದಿದೆ.
ಚಪ್ಪಲಿ ಕಳೆದುಹೋಗಿರುವ ಬಗ್ಗೆ ಯುವಕನಿಂದ ಅಧಿಕೃತ ದೂರು ದಾಖಲಾಗಿಲ್ಲ. ಹಾಗಿದ್ದರೂ ಪೊಲೀಸರು 112ಗೆ ಬಂದ ತುರ್ತು ಕರೆಯನ್ನು ಆಧರಿಸಿ ಕಾರ್ಯಾಚರಣೆ ನಡೆಸಿದ್ದಾರೆ.
Next Story





