ಮಂಗಳೂರು: ಕ್ರಿಸ್ತ ಜಯಂತಿ ಜುಬಿಲಿ 2025ರ ಸಿದ್ಧತೆಗೆ ಚಾಲನೆ
ಮಂಗಳೂರು, ನ.26: ಜಗತ್ತಿನಾದ್ಯಂತ ಕ್ರೈಸ್ತ ಧರ್ಮಸಭೆಯಲ್ಲಿ ಯೇಸು ಕ್ರಿಸ್ತರ ಜನನದ 2025 ವರ್ಷಗಳ ಸ್ಮರಣಾರ್ಥ ‘ಕ್ರಿಸ್ತ ಜಯಂತಿ ಜುಬಿಲಿ 2025’ ಸಂಭ್ರಮಾಚರಣೆಯ ಪೂರ್ವ ಸಿದ್ಧತೆಗಳು ನಡೆಯುತ್ತಿದ್ದು, ಮಂಗಳೂರಿನ ರೋಮನ್ ಕೆಥೊಲಿಕ್ ಧರ್ಮಕ್ಷೇತ್ರದಲ್ಲೂ ಎರಡು ವರ್ಷಗಳ ಪೂರ್ವ ತಯಾರಿಗಳಿಗೆ ಬಿಷಪ್ ಅ.ವಂ. ಡಾ.ಪೀಟರ್ ಪಾವ್ಲ್ ಸಲ್ಡಾನ ರವಿವಾರ ಚಾಲನೆ ನೀಡಿದರು.
ನಗರದ ಹೋಲಿ ರೋಜರಿ ಕೆಥೆಡ್ರಲ್ ನಲ್ಲಿ ‘ಭರವಸೆಯ ಯಾತ್ರಿಕರು’ ಎಂಬ ಧ್ಯೇಯವನ್ನು ಒಳಗೊಂಡ ಜುಬಿಲಿ ಲಾಂಛನದ ಅನಾವರಣದೊಂದಿಗೆ ಪೂರ್ವ ಸಿದ್ಧತೆಗಳಿಗೆ ಚಾಲನೆ ನೀಡಲಾಯಿತು.
ಬಿಷಪ್ ವಂ. ಪೀಟರ್ ಪೌಲ್ ಸಲ್ಡಾನ, ಕ್ರಿಸ್ತ ಜಯಂತ್ಯುತ್ಸವಕ್ಕೆ ಸಮರ್ಪಿತವಾದ ಪ್ರಾರ್ಥನೆಯನ್ನು ಯಾಜಕರು ಹಾಗೂ ಅಲ್ಲಿ ಸೇರಿದ್ದ ಭಕ್ತರ ಜತೆ ಪಠಿಸಿದರು. ನಂತರ ಜುಬಿಲಿ ಗೀತೆಯನ್ನು ಹಾಡಲಾಯಿತು.
ಬಿಷಪ್ ವಂ. ಪೀಟರ್ ಪೌಲ್ ಸಲ್ಡಾನ ಈ ಸಂದರ್ಭದಲ್ಲಿ 2025ರ ಜುಬಿಲಿ ಮಹತ್ವವನ್ನು ಸಾರುತ್ತಾ, ‘ಇತಿಹಾಸವನ್ನು ಕ್ರಿಸ್ತ ಪೂರ್ವ ಮತ್ತು ಕ್ರಿಸ್ತ ಶಕ ಎಂದು ವಿಭಜಿಸಲಾಗಿದೆ. ಪ್ರತಿಯೊಂದು ವರ್ಷವೂ ಯೇಸುವಿನ ಜನನದಿಂದ ಗುರುತಿಸಲ್ಪಡುತ್ತದೆ. ಯೇಸುಕ್ರಿಸ್ತರು ಹುಟ್ಟಿ 2025 ವರ್ಷಗಳಾಗುತ್ತಿವೆ. ಈ ಎರಡು ವರ್ಷಗಳ ಪೂರ್ವಸಿದ್ಧತೆಯಲ್ಲಿ 2023ನ್ನು 'ಕೌನ್ಸಿಲ್ ವರ್ಷ' (ಕಲಿಕೆಯ/ಅಧ್ಯಯನದ ವರ್ಷ)ಎಂದು ಮತ್ತು 2024ನ್ನು 'ಪ್ರಾರ್ಥನೆಯ ವರ್ಷ' ಎಂದು ಆಚರಿಸಲಾಗುತ್ತದೆ ಎಂದು ಹೇಳಿದರು.
ಕ್ರೈಸ್ತ ಧರ್ಮದ ಜಗದ್ಗುರು ಪೋಪ್ ಫ್ರಾನ್ಸಿಸ್ ಅವರು ಕಲಿಕಾ ವರ್ಷದಲ್ಲಿ ಎರಡನೇ ವ್ಯಾಟಿಕನ್ ಕೌನ್ಸಿಲ್ ನ ನಾಲ್ಕು ಸಂವಿಧಾನಗಳ ಅಧ್ಯಯನವನ್ನು ನಡೆಸಲು ನಿರ್ದೇಶಿಸಿದ್ದಾರೆ. ಈ ಸಂವಿಧಾನಗಳ ಆಧ್ಯಯನದಿಂದ ನಮ್ಮ ವಿಶ್ವಾಸವನ್ನು ಆಳವಾಗಿ ಆರಿಯಲು ಮತ್ತು ಪ್ರಾರ್ಥನಾ ಸ್ಫೂರ್ತಿಯಿಂದ ಈ ಜಯಂತಿಯನ್ನು ಆಚರಿಸಲು ನಮಗೆ ಕರೆ ನೀಡಿದ್ದಾರೆ ಎಂದು ಬಿಷಪ್ ತಿಳಿಸಿದರು.
ಉದ್ಘಾಟನಾ ಸಮಾರಂದಲ್ಲಿ ಕೆಥೆಡ್ರಲ್ ನ ರೆಕ್ಟರ್ ವಂ.ಆಲ್ಫ್ರೆಡ್ ಜೆ. ಪಿಂಟೊ, ವಂ.ವಿನೋದ್ ಲೋಬೊ, ವಂ. ಸಂತೋಷ್ ಡಿಸೋಜ, ವಂ. ಹ್ಯಾರಿ ಡಿಸೋಜ, ವಂ. ತ್ರಿಶಾನ್ ಡಿಸೋಜ, ಡಾ.ಜಾನ್ ಡಿಸಿಲ್ವ ಉಪಸ್ಥಿತರಿದ್ದರು.
ಮಂಗಳೂರು ಕ್ರೈಸ್ತ ಧರ್ಮಪ್ರಾಂತದಾದ್ಯಂತ ಎಲ್ಲಾ ಚರ್ಚ್ ಗಳಲ್ಲಿ ಏಕಕಾಲದಲ್ಲಿ ಈ ಉದ್ಘಾಟನಾ ಸಮಾರಂಭವನ್ನು ನಡೆಸಿ ಜುಬಿಲಿ ಲಾಂಛನವನ್ನು ಅನಾವರಣಗೊಳಿಸಲಾಯಿತು, ಜುಬಿಲಿ 2025ರ ಬಗ್ಗೆ ಬಿಷಪ್ ವಂ. ಪೀಟರ್ ಪಾವ್ಲ್ ಸಲ್ಡಾನ ಕಿರು ವೀಡಿಯೊ ಸಂದೇಶ ನೀಡಿದರು.