ಮಂಗಳೂರು| ಮಾದಕ ವಸ್ತು ಪೂರೈಕೆ ಪ್ರಕರಣ: ಆರೋಪಿ ವೈದ್ಯ ಡಾ.ಪ್ರಜ್ವಲ್ ಬಂಧನ

ಮಂಗಳೂರು, ಜು.11: ನಗರದ ಕಾಲೇಜು ವಿದ್ಯಾರ್ಥಿಗಳ ಸಹಿತ ಸಾರ್ವಜನಿಕರಿಗೆ ಮಾದಕ ವಸ್ತುಗಳನ್ನು ಪೂರೈಕೆ ಮಾಡುತ್ತಿದ್ದ ಆರೋಪದ ಮೇರೆಗೆ ಮೂಲತಃ ಬೀದರ್‌ನ ಪ್ರಸಕ್ತ ಕೋಡಿಪಾಳ್ಯ ನಿವಾಸಿ ಡಾ. ಪ್ರಜ್ವಲ್ ಪೀಣ್ಯಾಸ್ (35) ಎಂಬಾತನನ್ನು ನಗರದ ಸೆನ್ ಠಾಣೆಯ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
ನಗರ ಹೊರವಲಯದ ಪಡುಶೆಡ್ಡೆ ಗ್ರಾಮದ ಹಾಲಾಡಿ ಎಂಬಲ್ಲಿ ಜು.3ರಂದು ಐವರು ಆರೋಪಿಗಳನ್ನು ಮಾದಕ ವಸ್ತುವಿನ ಸಮೇತ ಬಂಧಿಸಲಾಗಿತ್ತು. ಈ ಆರೋಪಿಗಳಿಗೆ ಮಾದಕ ಸಾಗಿಸುವ ವ್ಯಕ್ತಿಯ ಪತ್ತೆಗೆ ಶೋಧ ನಡೆಸಿದಾಗ ಬೆಂಗಳೂರಿನ ಕೆಂಗೇರಿಯಲ್ಲಿರುವ ವೈದ್ಯ ಡಾ. ಪ್ರಜ್ವಲ್ ಪೀಣ್ಯಾಸ್ ಮತ್ತು ಮೈಸೂರಿನ ಯುವಕನೊಬ್ಬ ಸರಬರಾಜು ಮಾಡುತ್ತಿರುವುದು ಪತ್ತೆಯಾಗಿದೆ.
ಆರೋಪಿಯು ಈ ಹಿಂದೆ ನಗರದ ಮೆಡಿಕಲ್ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿಯಾಗಿ ವ್ಯಾಸಂಗ ಮಾಡಿದ್ದ. ಆವಾಗಲೇ ಗಾಂಜಾ ಮಾರಾಟದಲ್ಲಿ ತೊಡಗಿದ್ದ ಎನ್ನಲಾಗಿದೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯನಾಗಿ ಕಾರ್ಯನಿರ್ವಹಿಸುತ್ತಿದ್ದ ಈತ ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಿಂದ ಮಾದಕ ವಸ್ತುಗಳನ್ನು ತರಿಸಿಕೊಂಡು ಮಂಗಳೂರಿನ ಯುವಕರಿಗೆ ಸರಬರಾಜು ಮಾಡುತ್ತಿದ್ದ ಎಂದು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಮಾಹಿತಿ ನೀಡಿದ್ದಾರೆ.
ಮಾದಕ ವಸ್ತು ಪೂರೈಕೆಗೆ ಸಂಬಂಧಿಸಿದಂತೆ ಈಗಾಗಲೆ ನಗರ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ 9 ಮಂದಿಯನ್ನು ಬಂಧಿಸಲಾಗಿತ್ತು. ಪ್ರಜ್ವಲ್ ಪೀಣ್ಯಾಸ್‌ನನ್ನು ಬಂಧಿಸುವ ಮೂಲಕ ಈ ಪ್ರಕರಣಕ್ಕೆ ಸಂಬಂಧಿಸಿ 10 ಮಂದಿಯನ್ನು ಬಂಧಿಸಿದಂತಾಗಿದೆ. ಈತ ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಿಂದ ಮಾದಕ ವಸ್ತುವನ್ನು ಪಡೆದುಕೊಂಡು ನಗರಕ್ಕೆ ಪೂರೈಕೆ ಮಾಡುತ್ತಿದ್ದ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಈತನಿಂದ ಕೃತ್ಯಕ್ಕೆ ಬಳಸಿದ 1 ಮೊಬೈಲ್ ಫೋನ್ ವಶಪಡಿಸಲಾಗಿದೆ. ಈತನ ವಿರುದ್ಧ ಈಗಾಗಲೆ ಮಾದಕ ವಸ್ತು ಮಾರಾಟಕ್ಕೆ ಸಂಬಂಧಿಸಿ ಮೂರು ಪ್ರಕರಣಗಳು ದಾಖಲಾಗಿದೆ ಎಂದು ಕಮಿಷನರ್ ತಿಳಿಸಿದ್ದಾರೆ.







