ಮಂಗಳೂರು: ವಂಚನೆ ಆರೋಪ; ರಾಯಲ್ ತ್ರಿವಂಕೂರ್ ಹಣಕಾಸು ಸಂಸ್ಥೆಯ ವಿರುದ್ಧ ಪ್ರತಿಭಟನೆ

ಮಂಗಳೂರು, ಡಿ.8: ನಗರದ ಪಿವಿಎಸ್ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದ ‘ರಾಯಲ್ ತ್ರಿವಂಕೂರು’ ಎಂಬ ಹಣಕಾಸು ಸಂಸ್ಥೆಯ ವಿರುದ್ಧ ವಂಚನೆ ಆರೋಪ ಕೇಳಿ ಬಂದಿದೆ. ಈ ಮಧ್ಯೆ ಕಚೇರಿಗೆ ಬೀಗ ಜಡಿದಿರುವ ಬಗ್ಗೆ ಮಾಹಿತಿ ತಿಳಿದ ವಂಚನೆಗೊಳಗಾದ ಸಂತ್ರಸ್ತರು ಹಣಕಾಸು ಸಂಸ್ಥೆಯ ಕಚೇರಿಯ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿದ್ದಾರೆ.
ಸಾರ್ವಜನಿಕರಿಂದ ಪಿಗ್ಮಿ ಹಾಗೂ ವಿವಿಧ ಠೇವಣಿಗಳ ಮೂಲಕ ಕೋಟ್ಯಂತರ ಹಣವನ್ನು ಸಂಗ್ರಹಿಸಿರುವ ಸಂಸ್ಥೆಯು ಬಳಿಕ ತಮಗೆ ಹಣ ಮರಳಿಸದೆ ವಂಚಿಸಿ ಸದ್ದಿಲ್ಲದೆ ಕಚೇರಿಗೆ ಬೀಗ ಹಾಕಿ ಪರಾರಿಯಾಗಿದೆ ಎಂದು ಗ್ರಾಹಕರು ಆರೋಪಿಸಿದ್ದಾರೆ.
ರೈತರ ಹೆಸರಿನಲ್ಲಿ ಕರ್ನಾಟಕವಲ್ಲದೆ ಕೇರಳ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಪುದುಚೆರಿ ಮತ್ತಿತರ ರಾಜ್ಯ ಗಳಲ್ಲಿ ಶಾಖೆಗಳನ್ನು ತೆರೆದು ಸಣ್ಣ ಮಟ್ಟಿನ ಆದಾಯಗಳಿಸುವ ಜನರನ್ನು ಗುರಿಯಾಗಿಟ್ಟುಕೊಂಡು ವಂಚನೆ ಮಾಡಿದೆ ಎಂದು ಆರೋಪಿಸಲಾಗಿದೆ.
ನಗರದಲ್ಲಿ ಕೂಲಿ ಕಾರ್ಮಿಕರು, ಬೀದಿ ವ್ಯಾಪಾರಿಗಳು, ಸಣ್ಣ ಪುಟ್ಟ ವ್ಯಾಪಾರಿಗಳು ದಿನನಿತ್ಯ ಪಿಗ್ಮಿಯ ಹೆಸರಿನಲ್ಲಿ ಈ ಸಂಸ್ಥೆಗೆ ಹಣ ಪಾವತಿಸಿದ್ದರು. ಶುಕ್ರವಾರ ಕಚೇರಿಗೆ ಬೀಗ ಜಡಿದಿರುವ ಬಗ್ಗೆ ಮಾಹಿತಿ ತಿಳಿದ ಗ್ರಾಹಕರು ಕಚೇರಿ ಮುಂದೆ ಜಮಾಯಿಸಿದರಲ್ಲದೆ ಡಿವೈಎಫ್‌ಐ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭ ಮಾತನಾಡಿದ ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಅವಿದ್ಯಾವಂತರನ್ನೇ ಗುರಿಯಾಗಿಸಿಕೊಂಡು ವಂಚನೆ ಮಾಡಲಾಗಿದೆ. ಮಂಗಳೂರಿನಲ್ಲಿ ಅಂದಾಜು 50 ಕೋ.ರೂ. ವಂಚನೆಯಾಗಿರುವ ಬಗ್ಗೆ ಮಾಹಿತಿ ಇದೆ. ಹಾಗಾಗಿ ಸರಕಾರ ಸಂತ್ರಸ್ತರ ಪರವಾಗಿ ನಿಲ್ಲಬೇಕು. ವಂಚನೆ ಮಾಡಿದ ಕಂಪೆನಿಯ ಆಡಳಿತ ಮಂಡಳಿಯ ನಿರ್ದೇಶಕರನ್ನು ಬಂಧಿಸಿ ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಬೇಕು. ಕಂಪೆನಿಯ ಬ್ಯಾಂಕ್ ಖಾತೆಗಳನ್ನು ಯಾವುದೇ ವ್ಯವಹಾರ ನಡೆಸದಂತೆ ತಡೆ ಹಿಡಿದು ಸಂತ್ರಸ್ತ ಜನರಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭ ಡಿವೈಎಫ್‌ಐ ಮುಖಂಡರಾದ ನವೀನ್ ಕೊಂಚಾಡಿ, ರಿಝ್ವಾನ್ ಹರೇಕಳ, ತಯ್ಯುಬ್ ಬೆಂಗ್ರೆ, ರಫೀಕ್ ಹರೇಕಳ, ಬೀದಿಬದಿ ವ್ಯಾಪಾರಸ್ಥರ ಸಂಘದ ಮುಖಂಡರಾದ ಆಸೀಫ್ ಬಾವ ಉರುಮನೆ, ರಿಯಾಝ್ ಎಲ್ಯಾರ್ ಪದವು, ಜಗದೀಶ್, ಹಂಝ, ಸರೋಜಿನಿ ಮತ್ತಿತರರು ಉಪಸ್ಥಿತರಿದ್ದರು.
ನಗರದ ಲೇಡಿಗೋಶನ್ ಆಸ್ಪತ್ರೆ ಸಮೀಪ ಕಡಲೆ ಮಾರಾಟ ಮಾಡಿ ಜೀವನ ನಡೆಸುತ್ತಿದ್ದ ಸುಮಾರು 60 ವರ್ಷ ಪ್ರಾಯದ ವೃದ್ಧೆ ಸರೋಜಿನಿ 25 ಸಾವಿರ ರೂ.ವನ್ನು ಈ ಹಣಕಾಸು ಸಂಸ್ಥೆಯಲ್ಲಿ ಹೂಡಿದ್ದರು. ಆದರೆ ಸಂಸ್ಥೆಯ ಕಚೇರಿಗೆ ಬೀಗ ಜಡಿದಿರುವ ಬಗ್ಗೆ ಮಾಹಿತಿ ಪಡೆದ ಅವರು ಆಘಾತಗೊಂಡಿದ್ದಾರೆ. ಅಲ್ಲದೆ ‘ಯಾರೋ ನಾಲ್ಕು ಮಂದಿ ಹುಡುಗಿಯರು ಬಂದು ನಮ್ಮ ಹಣಕಾಸು ಸಂಸ್ಥೆಯಲ್ಲಿ ಹಣ ಹೂಡಿದರೆ ಭದ್ರತೆ ಇರುತ್ತದೆ. ಕಷ್ಟ ಕಾಲದಲ್ಲಿ ನೆರವಿಗೆ ಬರುತ್ತದೆ ಎಂದರು. ನಾನದನ್ನು ನಂಬಿ ಹಣ ಹಾಕಿದೆ. ಈಗ ಅವರು ಕೈಕೊಟ್ಟಿದ್ದಾರೆ ಎಂದು ಸರೋಜಿನಿ ಅಳಲು ತೋಡಿಕೊಂಡರು.
ನಾನು ಎರಡು ಬಾಂಡ್‌ಗಳಲ್ಲಿ 1.15 ಲಕ್ಷ ರೂ. ಹೂಡಿದ್ದೆ. ಅಲ್ಲದೆ ಪಿಗ್ಮಿಯಲ್ಲಿ 15,000 ರೂ. ತನಕ ಪಾವತಿಸಿದ್ದೆ. ಈ ಹಣವನ್ನು ಒಗ್ಗೂಡಿಸಿ ಈ ತಿಂಗಳು ಸಣ್ಣ ಅಂಗಡಿ ತೆರೆಯಲು ನಿರ್ಧರಿಸಿದ್ದೆ. ಆದರೆ ಕಚೇರಿಗೆ ಬೀಗ ಜಡಿದು ಪರಾರಿಯಾದ ಬಳಿಕ ನನ್ನ ಕನಸು ಭಗ್ನಗೊಂಡಿವೆ ಎಂದು ನಗರದ ಲೇಡಿಹಿಲ್ ಬಳಿಯ ನವೀನ್ ಹೇಳಿದರು.
ಈ ಕಂಪನಿಯು 2021ರ ಮೇ ತಿಂಗಳಲ್ಲಿ ಆರಂಭಗೊಂಡಿದೆ ಮತ್ತು ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದಲ್ಲಿ ಬೆಳೆಗಾರರ ಉತ್ಪನ್ನಗಳ ಕಂಪನಿ ಎಂದು ನೋಂದಣಿ ಮಾಡಿಕೊಂಡಿರುವ ಬಗ್ಗೆ ತನ್ನ ವೆಬ್‌ಸೈಟ್‌ನಲ್ಲಿ ಹೇಳಿಕೊಂಡಿದೆ.
‘ರಾಯಲ್ ಟ್ರಾವಂಕೂರ್’ ಹಣಕಾಸು ಸಂಸ್ಥೆಯ ವಿರುದ್ಧ ಪ್ರಕರಣ ದಾಖಲು
‘ರಾಯಲ್ ಟ್ರಾವಂಕೂರ್’ ಹಣಕಾಸು ಸಂಸ್ಥೆಯಿಂದ 60 ಲ.ರೂ.ಗಳಿಗೂ ಅಧಿಕ ಹಣ ವಂಚನೆಯಾಗಿರುವ ಬಗ್ಗೆ ಮಂಗಳೂರು ನಗರ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಸಿಗುತ್ತದೆ ಎಂದು ರಾಯಲ್ ಟ್ರಾವಂಕೂರ್ ಕಂಪೆನಿಯ ನಿರ್ದೇಶಕರಾದ ರಾಹುಲ್ ಚಕ್ರಪಾಣಿ, ಅನಿಲ್ ಚಕ್ರಪಾಣಿ, ಸಿಂಧು ಚಕ್ರಪಾಣಿ ಎಂಬವರು ಜ್ಞಾನೇಶ ಮತ್ತಿತರ 600ಕ್ಕೂ ಅಧಿಕ ಮಂದಿಯನ್ನು ನಂಬಿಸಿ ಮಂಗಳೂರು ಮತ್ತು ತೊಕ್ಕೊಟ್ಟು ಶಾಖೆಯಲ್ಲಿ ಸುಮಾರು 60 ಲ.ರೂ.ಗಳಿಗೂ ಅಧಿಕ ಹಣವನ್ನು ಠೇವಣಿಯಾಗಿ ಸಂಗ್ರಹಿಸಿದ್ದರು. ಹಣಕ್ಕೆ ಪ್ರತಿಫಲವಾಗಿ ಲಾಭಾಂಶ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಯಾವುದೇ ಲಾಭಾಂಶ ಅಥವಾ ಮೂಲ ಬಂಡವಾಳ ನೀಡದೆ ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.







