ಮಂಗಳೂರು: ಕೊನೆಗೂ ಹಜ್ ಭವನ ನಿರ್ಮಾಣಕ್ಕೆ ಸಂಪುಟ ಸಭೆ ಅಸ್ತು!

ಮಂಗಳೂರು, ನ.9: ಒಂದೆಡೆ ಬೆಂಗಳೂರು ಮಾದರಿಯಲ್ಲಿ ಹಜ್ ಭವನವನ್ನು ಮಂಗಳೂರಿನಲ್ಲಿ ನಿರ್ಮಿಸಲಾಗುವುದು ಎಂಬ ರಾಜ್ಯದ ಮುಖ್ಯಮಂತ್ರಿ, ಸಚಿವರು, ಶಾಸಕರು, ಅಧಿಕಾರಿಗಳ ಭರವಸೆ. ಇನ್ನೊಂದೆಡೆ ಈ ವರ್ಷದಿಂದಲೇ ಮಂಗಳೂರಿನಿಂದ ಹಜ್ ಯಾತ್ರೆ ಆರಂಭಿಸಬಹುದು ಎಂಬ ಯಾತ್ರಿಕರ ಬಹು ಕಾಲದ ಕನಸು. ಇದೀಗ ಆ ಭರವಸೆ ಶೀಘ್ರ ಈಡೇರುವ ಸಾಧ್ಯತೆ ಇದೆ. ಕನಸು ನನಸಾಗುವ ಹಂತ ತಲುಪಿದೆ.
ಕಳೆದ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಸಿದ ರಾಜ್ಯ ಸಚಿವ ಸಂಪುಟವು ಮಂಗಳೂರು ತಾಲೂಕಿನ ಬಜ್ಜೆಯ 1.86 ಎಕರೆ ಜಮೀನಿನಲ್ಲಿ ಅಂದಾಜು 20 ಕೋ.ರೂ. ವೆಚ್ಚದಲ್ಲಿ ಹಜ್ ಭವನ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ ನೀಡಿದೆ. ಕಾಮಗಾರಿ ಅನುಷ್ಠಾನಗೊಳಿಸಲು ಕರ್ನಾಟಕ ಗೃಹ ಮಂಡಳಿಗೆ ಮತ್ತು ಚಾಲ್ತಿಯಲ್ಲಿರುವ ಸರಕಾರದ ಸುತ್ತೋಲೆ ಹಾಗೂ ಕೆಟಿಪಿಪಿ ನಿಯಮದಂತೆ ಟೆಂಡರ್‌ಗಳನ್ನು ಆಹ್ವಾನಿಸಲಾಗುತ್ತದೆ. ಕಾಮಗಾರಿಯನ್ನು ಅನುಷ್ಠಾನಗೊಳಿಸಲು ಸರಕಾರದ ಅನುಮೋದನೆ ನೀಡಲು ಸಚಿವ ಸಂಪುಟ ನಿರ್ಣಯಿಸಿದೆ.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಉದ್ಯಮಿ ಇನಾಯತ್ ಅಲಿ ದಾನ ಮಾಡಲಾಗಿದ್ದ ಜಮೀನಿನಲ್ಲಿ ಹಜ್ ಭವನ ನಿರ್ಮಿ ಸಲಾಗುತ್ತದೆ. ಆರಂಭದಲ್ಲಿ ಅವರು 1.56 ಎಕರೆ ಜಮೀನು ದಾನ ಮಾಡಿದ್ದರು. ಬಳಿಕ ಹೆಚ್ಚುವರಿಯಾಗಿ 30 ಸೆಂಟ್ಸ್ ಜಮೀನು ದಾನ ಮಾಡಿದ್ದರು. ಅಂದರೆ 1.86 ಎಕರೆ ಜಮೀನಿನಲ್ಲಿ ಹಜ್ ಭವನ ತಲೆಯೆತ್ತಲಿದೆ. ಇದೀಗ ರಸ್ತೆ ನಿರ್ಮಾಣಕ್ಕೆ ಪ್ರತ್ಯೇಕವಾಗಿ 50 ಸೆಂಟ್ಸ್ ಜಮೀನನ್ನು ಇನಾಯತ್ ಅಲಿ ದಾನ ಮಾಡಿದ್ದಾರೆ.
ಮೊದಲು ಕರಾವಳಿ ಮತ್ತು ಪಶ್ಚಿಮ ಘಟ್ಟ ಪ್ರದೇಶದ ಹಜ್ ಯಾತ್ರಾರ್ಥಿಗಳು ಪವಿತ್ರ ಮಕ್ಕಾ ಯಾತ್ರೆಗೆ ಬೆಂಗಳೂರು ವಿಮಾನ ನಿಲ್ದಾಣವನ್ನು ಆಶ್ರಯಿಸಬೇಕಾಗಿತ್ತು. 2009ರಲ್ಲಿ ಅದರ ಚಿತ್ರಣವೇ ಬದಲಾಯಿತು. ಉದ್ಯಮಿ ಯೆನೆಪೊಯ ಮುಹಮ್ಮದ್ ಕುಂಞಿಯ ಅಧ್ಯಕ್ಷತೆಯಲ್ಲಿ ಮಂಗಳೂರು ಹಜ್ ನಿರ್ವಹಣಾ ಸಮಿತಿ ರಚಿಸಲಾಯಿತು. ಅಲ್ಲದೆ ಸ್ವಯಂ ಸೇವಕರ ಸಹಕಾರದಿಂದ ಬಜ್ಪೆಯ ಅನ್ಸಾರುಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಜ್ ಕ್ಯಾಂಪ್ ನಡೆಯತೊಡಗಿತು.
2009ರ ಅಕ್ಟೋಬರ್ 25ರಂದು ಅಂದಿನ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಪ್ರಪ್ರಥಮ ಹಜ್ ಯಾತ್ರೆಗೆ ಚಾಲನೆ ನೀಡಿದ್ದರು. ಅಂದು ರಾಜ್ಯ ವಕ್ಫ್ ಸಚಿವರಾಗಿದ್ದ ಮುಮ್ತಾಝ್ ಅಲಿ ಖಾನ್ ಮಂಗಳೂರಿನಲ್ಲಿ ‘ಹಜ್ ಘರ್’ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದ್ದರು. 2009ರ ಬಳಿಕ ದ.ಕ., ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು ಜಿಲ್ಲೆಯ ಯಾತ್ರಿಗಳು ಮಂಗಳೂರಿನಿಂದ ಯಾತ್ರೆ ಹೊರಡುತ್ತಿದ್ದರು. 2022ರ ನಂತರ ಮಂಗಳೂರಿನ ಹಜ್ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಹಜ್ ಭವನ ನಿರ್ಮಿಸಲು ಸರಕಾರ ಮುಂದಾಗಿರುವುದರಿಂದ ಈ ಐದು ಜಿಲ್ಲೆಗಳ ಯಾತ್ರಿಗಳಿಗೆ ಅನುಕೂಲವಾಗಲಿದೆ.
ಆರಂಭದಲ್ಲಿ ಬಜ್ಪೆ ಸಮೀಪದ ಕೆಂಜಾರು ವಿಮಾನ ನಿಲ್ದಾಣ ಸಮೀಪದಲ್ಲಿರುವ ಕೆಂಜಾರು ಗ್ರಾಮದಲ್ಲಿ 2.18 ಎಕರೆ ಜಮೀನು ಮಂಜೂರು ಮಾಡಲು ಕಂದಾಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಆ ಜಮೀನು ಸರಕಾರಿ ಅನಾಧೀನ ಮತ್ತು ಕುಮ್ಕಿ ಮಿತಿಯಲ್ಲಿದೆ, ಜಮೀನು ಮಂಜೂರಾತಿಗೆ ಕುಮ್ಕಿದಾರರ ಆಕ್ಷೇಪಣೆ, ಜಮೀನು ಗ್ರಾಪಂ ವ್ಯಾಪ್ತಿಯಲ್ಲಿದೆ, ಗ್ರಾಪಂ ಸದಸ್ಯರ ವಿರೋಧವಿದೆ, ಗ್ರಾಪಂ ಅಭಿಪ್ರಾಯ ನೀಡಿಲ್ಲ ಎಂದೆಲ್ಲಾ ಕಡತಗಳಲ್ಲಿ ಒಕ್ಕಣೆ ನೀಡಲಾದ ಹಾಗು ಸ್ಥಳೀಯರ ವಿರೋಧವಿದ್ದ ಕಾರಣ ಆ ಪ್ರಸ್ತಾವವನ್ನು ಕೈ ಬಿಡಲಾಗಿತ್ತು.
ಬಳಿಕ ಅದೇ ಗ್ರಾಮದಲ್ಲಿ 5.20 ಎಕರೆ ಜಮೀನು ಇರುವುದನ್ನು ತಿಳಿದುಕೊಂಡ ಹಜ್ ಕಮಿಟಿ ಮತ್ತೊಂದು ಅರ್ಜಿ ಸಲ್ಲಿಸಿ ಜಮೀನು ಮಂಜೂರು ಮಾಡುವಂತೆ ಕೇಳಿಕೊಂಡಿತ್ತು. ಅದರಂತೆ ಕಂದಾಯ ಇಲಾಖೆಯು ಕೆಂಜಾರು ಗ್ರಾಮದಲ್ಲಿ ಹಜ್ ಭವನ ನಿರ್ಮಾಣಕ್ಕೆ 1.91 ಎಕರೆ ಜಮೀನು ಮಂಜೂರು ಮಾಡಿತ್ತು. ಈ ಮಧ್ಯೆ ಪಟ್ಟಾ ಜಮೀನಿನ ಮಾಲಕರು ಇದು ತನ್ನ ಕುಮ್ಕಿ ಭೂಮಿ ಎಂದು ಹೇಳಿಕೊಂಡು ಮಂಗಳೂರು ಸಹಾಯಕ ಆಯುಕ್ತರ ನ್ಯಾಯಾಲಯದ ಮೊರೆ ಹೊಕ್ಕಿದ್ದರು. ಬಳಿಕ ಅದು ಜಿಲ್ಲಾಧಿಕಾರಿಯ ನ್ಯಾಯಾಲಯದ ಮೆಟ್ಟಲೇರಿದ್ದರೂ ಆ ವ್ಯಕ್ತಿ ಹೈಕೋರ್ಟ್‌ನ ಮೊರೆ ಹೊಕ್ಕಿದ್ದರು.
ನಂತರ ಮರವೂರು ಗ್ರಾಮದಲ್ಲಿ ಹಜ್ ಭವನಕ್ಕಾಗಿ ಭೂಮಿ ಕಾಯ್ದಿರಿಸಲಾಗಿತ್ತು. ಆದರೆ ಈ ಪ್ರದೇಶವು ಸಿಆರ್‌ಝಡ್ ವ್ಯಾಪ್ತಿಯಲ್ಲಿ ಬರುವುದರಿಂದ ಅಲ್ಲಿ ಕಟ್ಟಡ ನಿರ್ಮಾಣ ಮಾಡಲು ಸಾಧ್ಯವಾಗದು ಎಂಬ ಅಭಿಪ್ರಾಯ ಒಂದೆಡೆಯಾದರೆ, ಅಲ್ಲಿಯೂ ಕೆಲವರು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ತಡೆಯಾಜ್ಞೆ ತಂದಿದ್ದರು. ಅದರ ನಂತರ ರಾ.ಹೆ. 75ರ ಫರಂಗಿಪೇಟೆ-ಅಡ್ಯಾರ್‌ನಲ್ಲಿರುವ ಖಾಸಗಿ ಜಮೀನನ್ನು ಪರಿಶೀಲಿಸಲಾಗಿತ್ತು. ಅದನ್ನು ಖರೀದಿಸಿ ಅಲ್ಲಿ ಹಜ್ ಭವನ ನಿರ್ಮಿಸುವ ಯೋಜನೆಯೂ ಇತ್ತು. ಆದರೆ ಅದು ಕಾರ್ಯಗತಗೊಳ್ಳಲಿಲ್ಲ. ಇದೀಗ ಇನಾಯತ್ ಅಲಿ ದಾನ ನೀಡಿದ್ದ ಜಮೀನಿನನ್ನು ಹಜ್ ಭವನ ನಿರ್ಮಾಣಗೊಳ್ಳಲಿದೆ.
ಹಜ್ ಭವನದ ವಿಶೇಷತೆ
ಹಜ್ ಭವನವು ತಳ ಅಂತಸ್ತು (2,395 ಚ.ಅ), ನೆಲಮಹಡಿ (2,395 ಚ.ಅ), ಒಂದನೇ ಮಹಡಿ (2,395 ಚ.ಅ),ಎರಡನೇ ಮಹಡಿ (1,163 ಚ.ಅ), ಮೂರನೇ ಮಹಡಿ (1,163 ಚ.ಅ), ನಾಲ್ಕನೇ ಮಹಡಿ (1,163 ಚ.ಅ)ಯಲ್ಲಿ ನಿರ್ಮಾಣಗೊಳ್ಳಲಿದೆ. ಅದಲ್ಲದೆ ಸುಮಾರು 200 ವಾಹನಗಳ ನಿಲುಗಡೆಗೆ ಪಾರ್ಕಿಂಗ್ ವ್ಯವಸ್ಥೆ, ಅಡುಗೆ ಕೋಣೆ, ಡೈನಿಂಗ್ ಹಾಲ್, ಮಹಿಳೆಯರು ಮತ್ತು ಪುರುಷರಿಗೆ ನಮಾಝ್ ಮಾಡಲು ಪ್ರತ್ಯೇಕ ವ್ಯವಸ್ಥೆ, ಲಗ್ಗೇಜು ದಾಸ್ತಾನು ಕೊಠಡಿ, ಸ್ನಾನ-ಶೌಚಾಲಯ, ತರಬೇತಿ ಹಾಲ್ ಇತ್ಯಾದಿ ಇರಲಿದೆ.
ಮಂಗಳೂರಿನಲ್ಲಿ ಹಜ್ ಭವನ ನಿರ್ಮಿಸಬೇಕು ಎಂಬ ಕನಸು ಇಂದು ನಿನ್ನೆಯದಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರವು ಇದೀಗ ಹಜ್ ಭವನ ನಿರ್ಮಿಸಲು 20 ಕೋ.ರೂ. ಅನುದಾನಕ್ಕೆ ಒಪ್ಪಿಗೆ ನೀಡಿದೆ. ಈ ಹಿಂದೆಯೇ ಸರಕಾರ 10 ಕೋ.ರೂ. ಅನುದಾನ ಬಿಡುಗಡೆ ಮಾಡಿತ್ತು. ಸೂಕ್ತ ಜಮೀನು ಲಭ್ಯವಾಗದ ಕಾರಣ ಆ ಮೊತ್ತವು ಖಾತೆಯಲ್ಲೇ ಉಳಿದಿತ್ತು. ಅದರಿಂದ 6 ಕೋ.ರೂ. ಬಡ್ಡಿಯೂ ಬಂದಿತ್ತು. ಇಸ್ಲಾಮಿನಲ್ಲಿ ಬಡ್ಡಿಯ ಹಣ ಬಳಕೆಗೆ ನಿಷೇಧವಿದೆ. ಹಾಗಾಗಿ ಆರು ಕೋ.ರೂ.ವನ್ನು ಸರಕಾರಕ್ಕೆ ಮರಳಿಸಲಾಗಿದೆ. ಇನ್ನೊಂದು ವರ್ಷದೊಳಗೆ ಹಜ್ ಭವನ ತಲೆಯೆತ್ತಲಿದೆ.
-ಇನಾಯತ್ ಅಲಿ , ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ







