Mangaluru | ಪಣಂಬೂರಿನಲ್ಲಿ ಭೀಕರ ಸರಣಿ ಅಪಘಾತ: ಮೂವರು ಮೃತ್ಯು

ಸುರತ್ಕಲ್: ರಾಷ್ಟ್ರೀಯ ಹೆದ್ದಾರಿ 66ರ ಪಣಂಬೂರು ಸಿಗ್ನಲ್ ಬಳಿ ಶನಿವಾರ ಬೆಳಗ್ಗೆ ಸಂಭವಿಸಿದ ಸರಣಿ ರಸ್ತೆ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ವರದಿಯಾಗಿದೆ.
ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66ರ ಪಣಂಬೂರು ಸಿಗ್ನಲ್‌ನಲ್ಲಿ ಸರತಿಯಲ್ಲಿ ನಿಂತಿದ್ದ ವೇಳೆ ಎರಡು ಟ್ಯಾಂಕರ್‌ಗಳು, ಆಟೊ ರಿಕ್ಷಾ ಮತ್ತು ಕಾರು ಅಪಘಾತಕ್ಕೀಡಾಗಿ ಮೂವರು ಮೃತಪಟ್ಟು, ಓರ್ವ ಗಾಯಗೊಂಡಿದ್ದಾರೆ.
ಮೃತರನ್ನು ಮೊಂಟೆಪದವು ನರಿಂಗಾನ ನಿವಾಸಿ ಆಟೊರಿಕ್ಷಾ ಚಾಲಕ ಮೊಯ್ದಿನ್ ಕುಂಞಿ ಯಾನೆ ಮನ್ಸೂರ್ (25), ಪ್ರಯಾಣಿಕರಾಗಿದ್ದ ಮೊಂಟೆಪದವು ಮಂಜನಾಡಿ ನಿವಾಸಿಗಳಾದ ಅಬೂಬಕರ್ (65) ಮತ್ತು ಇಬ್ರಾಹೀಂ (68) ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ಮಂಗಳೂರು ಕೋಡಿಕಲ್ ನಿವಾಸಿ ಅನಂತ ಸನ್ನಿಲ್ (71) ಗಾಯಗೊಂಡಿದ್ದು, ತಕ್ಷಣ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
(ಆಟೊ ರಿಕ್ಷಾ ಚಾಲಕ ಮನ್ಸೂರ್)
ಪಣಂಬೂರು ಸಿಗ್ನಲ್‌ನ ಸರತಿಯಲ್ಲಿ ಟ್ಯಾಂಕರ್‌ವೊಂದರ ಹಿಂಭಾಗದಲ್ಲಿ ಕಾರು ಮತ್ತು ಆಟೊ ರಿಕ್ಷಾ ನಿಂತಿತ್ತು. ಈ ವೇಳೆ ಹಿಂದಿನಿಂದ ಬಂದ ಇನ್ನೊಂದು ಟ್ಯಾಂಕರ್ ರಿಕ್ಷಾಕ್ಕೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ರಿಕ್ಷಾ ಎದುರಿನಲ್ಲಿ ನಿಂತಿದ್ದ ಕಾರಿಗೆ ಅಪ್ಪಳಿಸಿ ಬಳಿಕ ಅದರ ಮುಂದೆ ನಿಂತಿದ್ದ ಮತ್ತೊಂದು ಟ್ಯಾಂಕರ್‌ಗೆ ಢಿಕ್ಕಿ ಹೊಡೆದಿದೆ.
ಮೃತರ ಪೈಕಿ ಅಬೂಬಕರ್ ಮತ್ತು ಇಬ್ರಾಹೀಂ ಬೀಡಿ ಕಾಂಟ್ರಾಕ್ಟರ್‌ಗಳಾಗಿದ್ದು, ವಾರದಲ್ಲಿ ಎರಡು ದಿನ ಬೈಕಂಪಾಡಿ ಕೈಗಾರಿಕಾ ಪ್ರದೇಶಕ್ಕೆ ಬಂದು ಅಲ್ಲಿನ ಸಂಸ್ಥೆಗೆ ಬೀಡಿ ಕೊಟ್ಟು ಹೋಗುತ್ತಿದ್ದರು. ಅದರಂತೆ ಇಂದು ಬೆಳಗ್ಗೆ ಮೊಂಟೆಪದವುನಿಂದ ಆಟೊ ರಿಕ್ಷಾದಲ್ಲಿ ಬಂದು ಕೆಲಸ ಮುಗಿಸಿಕೊಂಡು ವಾಪಸ್ ಮೊಂಟೆಪದವು ಕಡೆಗೆ ತೆರಳುತ್ತಿರುವಾಗ ಪಣಂಬೂರು ಜಂಕ್ಷನ್ ಬಳಿ ಈ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಮಂಗಳೂರು ಉತ್ತರ ಸಂಚಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಪಘಾತ ನಡೆಸಿದ ಟ್ಯಾಂಕರ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸ್ಪೀಕರ್ ಖಾದರ್ ಭೇಟಿ: ಪಣಂಬೂರಿನಲ್ಲಿ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಮೃತಪಟ್ಟ ಮಾಹಿತಿ ಅರಿತ ಕರ್ನಾಟಕ ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಆಸ್ಪತ್ರೆಗೆ ಭೇಟಿ ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಮೃತರಲ್ಲಿ ಇಬ್ಬರು ಬೀಡಿ ಕಾರ್ಮಿಕರಾಗಿರುವುದರಿಂದ ಸ್ಪೀಕರ್ ಅವರು ಬೀಡಿ ಕಾರ್ಮಿಕರ ಕಲ್ಯಾಣ ಇಲಾಖೆಯ ಅಧಿಕಾರಿಗಳ ಬಳಿ ಮಾತುಕತೆ ನಡೆಸಿದರು. ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ದೊರಕಿಸಿ ಕೊಡಲು ಶ್ರಮಿಸುವುದಾಗಿ ತಿಳಿಸಿದ್ದಾರೆ.







