ಮಂಗಳೂರು| ಕಂಬಳಕ್ಕೆ ಮೆರುಗು ತಂದ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಮೇರಿ ಕೋಮ್: ಯಶಸ್ವಿಯಾಗಿ ಸಂಪನ್ನಗೊಂಡ ನವ ವರ್ಷದ ಕಂಬಳ

ಮಂಗಳೂರು: ವಿಶ್ವ ಬಾಕ್ಸಿಂಗ್ ಚಾಂಪಿಯನ್ ಮೇರಿ ಕೋಮ್ ಅವರು ಶನಿವಾರ ರಾತ್ರಿ ಮಂಗಳೂರು ಕಂಬಳದಲ್ಲಿ ಪಾಲ್ಗೊಂಡು ಕರಾವಳಿಯ ಈ ಜಾನಪದ ಕ್ರೀಡೆಯಾಗಿರುವ ಕಂಬಳವನ್ನು ಪ್ರೋತ್ಸಾಹಿಸಿದ್ದಾರೆ.
ಮಂಗಳೂರು ಕಂಬಳ ಸಮಿತಿ ವತಿಯಿಂದ ಬಂಗ್ರಕೂಳೂರಿನ ಗೋಲ್ಡ್ ಫಿಂಚ್ ಸಿಟಿಯ ರಾಮ-ಲಕ್ಷ್ಮಣ ಜೋಡುಕರೆಯಲ್ಲಿ ರವಿವಾರ ಬೆಳಗ್ಗೆ ಮುಕ್ತಾಯಗೊಂಡ ಮಂಗಳೂರು ಕಂಬಳದಲ್ಲಿ ಮೇರಿ ಕೋಮ್ ಅವರಿಗೆ ದಕ್ಷಿಣ ಕನ್ನಡ ಸಂಸದ ಹಾಗೂ ಕಂಬಳ ಸಮಿತಿ ಅಧ್ಯಕ್ಷ ಕ್ಯಾ. ಬ್ರಿಜೇಶ್ ಚೌಟ ಅವರು ಕಂಬಳದ ಬೆತ್ತ ಹಾಗೂ ಕಂಬಳ ಕೋಣಗಳ ಸ್ಮರಣಿಕೆ ನೀಡಿ ಗೌರವಿಸಿದರು.
ನಾನು ಇದೇ ಮೊದಲ ಬಾರಿಗೆ ನೇರವಾಗಿ ಕಂಬಳವನ್ನು ನೋಡುತ್ತಿದ್ದು, ಬಹಳ ಖುಷಿ ನೀಡಿದೆ. ನಿಜಕ್ಕೂ ಇದೊಂದು ಅಪರೂಪವಾದ ಕ್ರೀಡಾ ಸಂಭ್ರಮ ಎಂದು ಮಂಗಳೂರು ಕಂಬಳವನ್ನು ಬಣ್ಣಿಸಿದ್ದಾರೆ.
ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ಅಧ್ಯಕ್ಷತೆಯಲ್ಲಿ ನವ ವರ್ಷದ-ನವ ವಿಧದ ಮಂಗಳೂರು ಕಂಬಳವು ನವರೂಪದಲ್ಲಿ ಅರ್ಥಪೂರ್ಣ ಕಾರ್ಯಕ್ರಮಗಳೊಂದಿಗೆ ಬಹಳ ಯಶಸ್ವಿಯಾಗಿ ಸಂಪನ್ನಗೊಂಡಿದೆ.
ತುಳುನಾಡು ಅಸ್ಮಿತೆಯ 9ನೇ ವರ್ಷದ ಮಂಗಳೂರು ಕಂಬಳದಲ್ಲಿ ಸಂಸದ ಕ್ಯಾ. ಚೌಟ ಅವರ ‘ಬ್ಯಾಕ್ ಟು ಊರು. ಪರಿಕಲ್ಪನೆಗೆ ಪೂರಕವಾಗಿ ತಾಯ್ನಾಡಿಗೆ ವಾಪಾಸ್ಸಾಗಿ ಸ್ವಂತ ಉದ್ಯಮ ಕಟ್ಟಿ ಬೆಳೆಸಿ ಸ್ಥಳೀಯರಿಗೆ ಉದ್ಯೋಗಾವಕಾಶ ನೀಡಿರುವ 9 ಮಂದಿ ಉದ್ಯಮಿಗಳನ್ನು ಕಂಬಳ ವೇದಿಕೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹಾಗೂ ಇತರೆ ನಾಯಕರ ಸಮ್ಮುಖದಲ್ಲಿ ಸನ್ಮಾನಿಸಲಾಗಿತ್ತು.
ವಿನೂತನ ‘ವಂದೇ ಮಾತರಂ ಬೂತ್’: 1000ಕ್ಕೂ ಹೆಚ್ಚು ಮಂದಿಯಿಂದ ರಾಷ್ಟ್ರೀಯ ಗೀತೆ ರೆಕಾರ್ಡ್!
ಈ ಬಾರಿಯ ಮಂಗಳೂರು ಕಂಬಳದಲ್ಲಿ ಸಂಸದ ಕ್ಯಾ. ಚೌಟ ಅವರ ಆಶಯದಂತೆ ನಮ್ಮ ತುಳುನಾಡಿನ ಜನರಲ್ಲಿ ದೇಶ ಭಕ್ತಿಯ ಚೈತನ್ಯವನ್ನು ಉದ್ದೀಪನಗೊಳಿಸಲು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕರೆಯಂತೆ ‘ವಂದೇ ಮಾತರಂ’ ಗೀತೆಯನ್ನು ಕೆರೋಕೆಯೊಂದಿಗೆ ಹಾಡಿ, ಅದರ ವಿಡಿಯೋವನ್ನು ವಂದೇ ಮಾತರಂ ವೆಬ್ ಸೈಟ್‌ನಲ್ಲಿ ಅಪ್ಲೋಡ್ ಮಾಡಲು ವಿಶೇಷ ಬೂತ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಅದರಂತೆ, ಒಂದೆಡೆ ಕಂಬಳದ ಕೋಣಗಳ ಓಟ ಸ್ಪರ್ಧೆ ನಡೆಯುತ್ತಿದ್ದರೆ, ಮತ್ತೊಂದಡೆ ಮಕ್ಕಳು, ಯುವಕರು, ಮಹಿಳೆಯರು, ಹಿರಿಯರು,ಕಂಬಳ ಓಟಗಾರರು ಹೀಗೆ ಕಂಬಳಕ್ಕೆ ಬಂದಿದ್ದವರ ಪೈಕಿ ಸುಮಾರು 1000ಕ್ಕೂ ಹೆಚ್ಚು ಮಂದಿ ಬಂದು ವಂದೇ ಮಾತರಂ ಗೀತೆ ಹಾಡಿ ಹಾಡಿ ಡಿಜಿಟಲ್ ಸರ್ಟಿಫಿಕೇಟ್ ಪಡೆದುಕೊಂಡರು. ಈ ಮೂಲಕ ಇಡೀ ಮಂಗಳೂರು ಕಂಬಳದಲ್ಲಿ ದೇಶಪ್ರೇಮದ ಕಿಡಿ ಪಸರಿಸುವ ಬಹಳ ವಿನೂತನ ಪ್ರಯತ್ನವನ್ನು ಕ್ಯಾ.ಚೌಟ ಅವರು ಮಾಡಿದ್ದಾರೆ.
ಕಂಬಳದಲ್ಲಿ ಹಿರಿಯ ಜೀವಗಳ ಸಮ್ಮಿಲನ
ಹಾಗೆಯೇ ಈ ಬಾರಿಯ ಮಂಗಳೂರು ಕಂಬಳದಲ್ಲಿ ದಕ್ಷಿಣ ಕನ್ನಡದ ವೃದ್ಧಾಶ್ರಮದಲ್ಲಿರುವ ಹಿರಿಯ ಜೀವಗಳಿಗೂ ಭಾಗವಹಿಸುವ ಅವಕಾಶವನ್ನು ಕೂಡ ಕ್ಯಾ. ಚೌಟ ಅವರು ಕಲ್ಪಿಸಿದ್ದರು. ಅದರಂತೆ ಜಿಲ್ಲೆಯ ಹಲವಾರು ವೃದ್ಧಾಶ್ರಮಗಳಿಂದ ಹಿರಿಯ ಚೇತನಗಳು ಮಂಗಳೂರು ಕಂಬಳ ನೋಡುವುದಕ್ಕೆ ಆಗಮಿಸಿದ್ದು, ಅವರೆಲ್ಲರನ್ನು ಖುದ್ದು ಕ್ಯಾ. ಚೌಟ ಅವರೇ ಬಹಳ ಪ್ರೀತಿ-ಅಕ್ಕರೆಯಿಂದ ಕಂಬಳ ಕರೆಯತ್ತ ಕರೆದುಕೊಂಡು ಹೋಗಿ ಕಂಬಳದ ವೈಭವವನ್ನು ಕಣ್ಣುತುಂಬಿಕೊಳ್ಳುವುದಕ್ಕೆ ಜತೆಯಾಗಿದ್ದು ನಿಜಕ್ಕೂ ಭಾವಪರವಶಗೊಳಿಸುವಂತಿತ್ತು. ಕಂಬಳದ ಈ ಸಂಭ್ರಮದಲ್ಲಿ ಭಾಗಹಿಸುವುದಕ್ಕೆ ಹೀಗೊಂದು ಅಪರೂಪದ ಅವಕಾಶ ಲಭಿಸಿರುವುದರ ಧನ್ಯತೆ ಆ ಹಿರಿಜೀವಗಳ ಮುಖದಲ್ಲಿ ಕಾಣಿಸಿದ್ದು, ಇಂಥಹ ಅಪರೂಪದ ಕ್ಷಣ ಕ್ಯಾ. ಚೌಟ ಅವರಲ್ಲಿಯೂ ಸಾರ್ಥಕತೆಯ ಭಾವ ಮೂಡಿಸಿದೆ.
200ಕ್ಕೂ ಅಧಿಕ ಸಸಿಗಳ ವಿತರಣೆ:
ಏಕ್ ಪೇಡ್ ಮಾ ಕೇ ನಾಮ್ ಅಭಿಯಾನದಂತೆ ಮಂಗಳೂರು ಕಂಬಳದಲ್ಲಿಯೂ 200ಕ್ಕೂ ಹೆಚ್ಚು ಸಸಿ ವಿತರಿಸುವ ಬಹಳ ವಿಭಿನ್ನ ವ್ಯವಸ್ಥೆ ಕಲ್ಪಿಸಲಾಗಿತ್ತು. ಜತೆಗೆ ಎಐ ಕ್ರಿಯೇಟಿವ್ ಯೋಧ, ಫೋಟೊಗ್ರಾಫಿ, ಸೋಷಿಯಲ್ ಮೀಡಿಯಾ ಆಸಕ್ತರ ರೀಲ್ಸ್ ಮೇಕಿಂಗ್ ಸ್ಪರ್ಧೆಯೂ ನವ ವರ್ಷದ ಕಂಬಳಕ್ಕೆ ವಿಶೇಷ ಕಳೆ ನೀಡಿತ್ತು. ಈ ನಡುವೆ ಡ್ರಾಯಿಂಗ್ ಸ್ಪರ್ಧೆಯಲ್ಲಿಯೂ ಸುಮಾರು 100 ಮಂದಿ ಭಾಗವಹಿಸಿ ಕಂಬಳವನ್ನು ಮತ್ತಷ್ಟು ಕಲರ್‌ಪುಲ್ ಮಾಡಿತ್ತು.
ನವ ವಿಧದ-ನವ ವರ್ಷದ ಮಂಗಳೂರು ಕಂಬಳದ ಬಗ್ಗೆ ಪ್ರತಿಕ್ರಿಯಿಸಿರುವ ಸಂಸದ ಕ್ಯಾ. ಚೌಟ ಅವರು, ‘‘ಮಂಗಳೂರು ಕಂಬಳ ಸಮಿತಿಯ ಅವಿರತ ಪರಿಶ್ರಮ ಹಾಗೂ ಉತ್ಸಾಹದ ಫಲವಾಗಿ 9ನೇ ವರ್ಷದ ಮಂಗಳೂರು ಕಂಬಳವು ತುಳುನಾಡಿನ ಅಸ್ಮಿತೆಯನ್ನು ಮತ್ತಷ್ಟು ಗಟ್ಟಿಗೊಳಿಸಿ ಕಂಬಳದ ಸೊಬಗು ನೋಡಲು ಬಂದ ಜನರಲ್ಲಿ ದೇಶಭಕ್ತಿಯ ಭಾವ ಉದ್ದೀಪನಗೊಳಿಸುವುದಕ್ಕೆ ಸಾಕ್ಷಿಯಾಗಿದ್ದು ವೈಯಕ್ತಿಕವಾಗಿ ಬಹಳ ಖುಷಿ ಹಾಗೂ ಸಂತೃಪ್ತಿ ತಂದಿದೆ. ಇದು ಮುಂದಿನ 10ನೇ ವರ್ಷದ ಮಂಗಳೂರು ಕಂಬಳವನ್ನು ಮತ್ತಷ್ಟು ವೈಭವೋಪೇತವಾಗಿ ಆಯೋಜಿಸುವುದಕ್ಕೆ ಉತ್ತೇಜನವನ್ನು ನೀಡಿದೆ ಎಂದು ಹೇಳಿದರು.







