ಮಂಗಳೂರು| ಆರ್.ಜಿ.ಯು.ಎಚ್.ಎಸ್ ಆಶ್ರಯದಲ್ಲಿ ಬೃಹತ್ ವಾಕಥಾನ್

ಮಂಗಳೂರು, ನ. 29: ಯುವಜನತೆಯ ಭವಿಷ್ಯ ಹಾಳು ಮಾಡುತ್ತಿರುವ ಮಾದಕ ವ್ಯವಸನದ ನಶಾದಿಂದ ಕ್ಯಾಂಪಸ್ ಮತ್ತು ಮನಸುಗಳನ್ನು ಕೆಡಿಸುತ್ತಿರುವ ದ್ವೇಷದಿಂದ ಸಮಾಜ ಮುಕ್ತವಾದರೆ, ದೇಶ ನಂಬರ್ ಒನ್ ಆಗುವುದರಲ್ಲಿ ಸಂಶಯವಿಲ್ಲ ಎಂದು ಸ್ಪೀಕರ್ ಯು.ಟಿ.ಖಾದರ್ ಹೇಳಿದರು.
ನಗರದ ಮಂಗಳಾ ಕ್ರೀಡಾಂಗದಲ್ಲಿ ಶನಿವಾರ ರಾಜಿವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಮತ್ತು ದಕ ಜಿಲ್ಲಾ ರಾಜೀವ ಗಾಂಧಿ ವಿವಿ ಕಾಲೇಜುಗಳ ಆಡಳಿತ ಮಂಡಳಿ ಆಶ್ರಯದಲ್ಲಿ ಡ್ರಗ್ಸ್ ವಿರುದ್ಧ ಜಾಗೃತಿ ಮತ್ತು ಅಂಗದಾನ ಜಾಗೃತಿ ವಾಕಥಾನ್ ಉದ್ಘಾಟಿಸಿ ಅವರು ಮಾತನಾಡಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಯೌವ್ವನ ಎಂಬ ಪ್ರಮುಖ ಘಟ್ಟದಲ್ಲಿ ಮದ್ಯ, ಮಾದಕ ದ್ರವ್ಯಗಳಿಗೆ ಬಲಿಯಾಗದಿದ್ದರೆ ಜೀವನದಲ್ಲಿ ಯಶಸ್ಸು ಸಾಧ್ಯ. ಯಾರೂ ಈ ಸುಶ್ಚಟಗಳಿಗೆ ಬಲಿಯಾಗದೆ ಆರೋಗ್ಯವಂತ ಸಮಾಜ ನಿರ್ಮಿಸಲು ಕೈಜೋಡಿಸಬೇಕು. ಅಂಗಾಂಗ ದಾನದಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದ್ದು, ಪ್ರಥಮ ಸ್ಥಾನಕ್ಕೆ ಬರಲು ಸಂಕಲ್ಪ ಮಾಡಬೇಕು ಎಂದರು.
ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮಾತನಾಡಿ, ಡ್ರಗ್ಸ್ ವಿರುದ್ಧ ಜಾಗೃತಿ ಮತ್ತು ಅಂಗಾಂಗ ದಾನದ ಜಾಗೃತಿ ಮೂಡಿಸುವುದು ಅರ್ಥಪೂರ್ಣ ಕಾರ್ಯಕ್ರಮ. ಪ್ರಧಾನಿಯವರ ವಿಕಸಿತ ಭಾರತ ನಿರ್ಮಾಣಕ್ಕಾಗಿ ನಶೆ ಮುಕ್ತ ಭಾರತವೂ ಆಗಬೇಕು ಎಂದರು.
ಶಾಸಕ ಡಾ.ಭರತ್ ಶೆಟ್ಟಿ ವೈ., ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಡಾ.ಶಾಂತಾರಾಮ ಶೆಟ್ಟಿ, ಡಾ.ಭಾಸ್ಕರ ಶೆಟ್ಟಿ, ಡಾ.ರವಿಶಂಕರ್ ಶೆಟ್ಟಿ, ಡಾ.ಯು.ಕೆ.ಮೋನು, ಗುರುಕಿರಣ್, ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ, ಡಿಸಿಪಿ ಮಿಥುನ್ ಎಚ್.ಎನ್., ಎಸಿಪಿ ಕೆ.ರವಿಶಂಕರ್ ಮತ್ತಿತರರು ಉಪಸ್ಥಿತರಿದ್ದರು.
ಕಣಚೂರು ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯು.ಕೆ. ಮೋನು, ತೇಜಸ್ವಿನಿ ಕಾಲೇಜು ಅಧ್ಯಕ್ಷ ಡಾ. ಶಾಂತಾರಾಮ್ ಶೆಟ್ಟಿ, ಸಿಟಿ ಗ್ರೂಪ್ ಆಫ್ ಕಾಲೇಜುಗಳ ಅಧ್ಯಕ್ಷ ಡಾ. ಭಾಸ್ಕರ್ ಶೆಟ್ಟಿ, ಕಣಚೂರು ಇನ್‌ಸ್ಟಿಸ್ಟೂಟ್ ಆಫ್ ಮೆಡಿಕಲ್ ಸಾಯನ್ಸ್‌ನ ನಿರ್ದೇಶಕ ಅಬ್ದುಲ್ ರಹಿಮಾನ್ ಭಾಗವಹಿಸಿದ್ದರು.
ಮಂಗಳಾ ಸ್ಟೇಡಿಯಂನಿಂದ ಕೆನರಾ ಹೈಸ್ಕೂಲ್, ಮಹಾನಗರ ಪಾಲಿಕೆ ಮೂಲಕ ಕರಾವಳಿ ಉತ್ಸವ ತನಕ ನಡೆದ ವಾಕಥಾನ್‌ನಲ್ಲಿ 12 ಸಾವಿರಷ್ಟು ಅರೆ ವೈದ್ಯಕೀಯ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ರಾಜ್ಯ ಅಲೈಡ್ ಆ್ಯಂಡ್ ಹೆಲ್ತ್ ಕೇರ್ ಕೌನ್ಸಿಲ್ ಅಧ್ಯಕ್ಷ ಡಾ.ಯು.ಟಿ.ಇಫ್ತಿಕರ್, ವಿವಿ ಸಿಂಡಿಕೇಟ್ ಸದಸ್ಯ ಡಾ.ಶಿವಶರಣ್ ಶೆಟ್ಟಿ, ಸೆನೆಟ್ ಸದಸ್ಯೆ ಪ್ರೊ.ವೈಶಾಲಿ ಶ್ರೀಜಿತ್, ಮಾಜಿ ಸೆನೆಟ್ ಸದಸ್ಯ ಡಾ.ಶರಣ್ ಶೆಟ್ಟಿ ಮತ್ತಿತರರು ಪಾಲ್ಗೊಂಡಿದ್ದರು.
ರಾಜೀವ ಗಾಂಧಿ ವಿವಿ ಉಪಕುಲಪತಿ ಡಾ.ಭಗವಾಸ್ ಬಿ.ಸಿ. ಸ್ವಾಗತಿಸಿದರು. ಚೇತನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.







