ಮಂಗಳೂರು| ಎಂಎಫ್‌ಸಿ ಕೆಫೆಗೆ ಆಹಾರ ಸುರಕ್ಷತಾ ಅಧಿಕಾರಿಗಳಿಂದ ದಾಳಿ
► ಕ್ಯೂಆರ್ ಕೋಡ್ ಮೂಲಕ ಬಂದ ದೂರಿಗೆ ಸ್ಪಂದನೆ

ಮಂಗಳೂರು: ನಗರದ ಫಳ್ನೀರ್‌ನಲ್ಲಿರುವ ಎಂಎಫ್‌ಸಿ ಕೆಫೆಗೆ ಆಹಾರ ಸುರಕ್ಷತಾ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಕ್ಯೂಆರ್‌ಕೋಡ್ ಮೂಲಕ ದೂರಿಗೆ ತಕ್ಷಣ ಸ್ಪಂದಿಸಿದ ಅಧಿಕಾರಿಗಳು ಕೆಫೆಗೆ ಭೇಟಿ ನೀಡಿ ಆಹಾರದ ಗುಣಮಟ್ಟ, ನೈರ್ಮಲ್ಯ ಹಾಗೂ ಆಹಾರ ಸಂಗ್ರಹಣೆಯ ಕುರಿತು ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಕಳೆದ ವಾರ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರ ಸೂಚನೆಯ ಮೇರೆಗೆ ನಗರದ ಕೆಎಫ್‌ಸಿ ಕೆಫೆಗೆ ಅಧಿಕಾರಿಗಳು ದಾಳಿ ನಡೆಸಿ ಗಮನ ಸೆಳೆದಿದ್ದರು.
ರಾಜ್ಯಾದ್ಯಂದ ಇದು ಭಾರೀ ಸಂಚಲನ ಮೂಡಿಸಿತ್ತು. ಆ ಬಳಿಕವೂ ಅಲ್ಲಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದರು. ಅಲ್ಲದೆ ಸಚಿವರು ಇಂತಹ ಪ್ರಕರಣಗಳ ಬಗ್ಗೆ ದೂರು ನೀಡಲು ಕ್ಯೂಆರ್ ಕೋಡ್ ಬಿಡುಗಡೆಗೊಳಿಸಿದ್ದರು. ಅಲ್ಲದೆ ಕ್ಯೂಆರ್‌ಕೋಡ್ ಮೂಲಕ ದೂರು ನೀಡಲು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಅದರಂತೆ ಶುಕ್ರವಾರ ಕ್ಯೂಆರ್ ಕೋಡ್ ಮೂಲಕ ಬಂದ ದೂರಿನ ಅನ್ವಯ ನಗರದ ಪಳ್ನೀರ್ ರಸ್ತೆಯಲ್ಲಿರುವ ಎಂಎಫ್‌ಸಿ ಕೆಫೆಗೆ ದಾಳಿ ನಡೆಸಿದ ಅಧಿಕಾರಿಗಳು ಅಡುಗೆಮನೆ ಸಹಿತ ವಿವಿಧೆಡೆ ತಪಾಸಣೆ ನಡೆಸಿದ್ದಾರೆ. ಆಹಾರ ಸುರಕ್ಷತಾ ನಿಯಮಗಳನ್ನು ಪಾಲಿಸಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಿದ್ದಾರೆ.
ದಾಳಿಯಲ್ಲ, ಪರಿಶೀಲನೆಯಷ್ಟೇ: ಮಾಲಕ ಸಿದ್ದೀಕ್
ನಗರದ ಪಳ್ನೀರ್ ರಸ್ತೆಯಲ್ಲಿರುವ ಎಂಎಫ್‌ಸಿಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿಲ್ಲ. ಕೇವಲ ಪರಿಶೀಲನೆಯಷ್ಟೇ ಮಾಡಿದ್ದಾರೆ. ಆದರೆ ಕೆಲವು ಮಾಧ್ಯಮಗಳಲ್ಲಿ ದಾಳಿ ಮಾಡಲಾಗಿದೆ ಎಂದು ತಪ್ಪು ಸುದ್ದಿ ಬಿತ್ತರಿಸುತ್ತಿದ್ದಾರೆ ಎಂದು ಎಂಎಫ್‌ಸಿ ಮಾಲಕ ಸಿದ್ದೀಕ್ ತಿಳಿಸಿದ್ದಾರೆ.
ನಮ್ಮ ಏಳಿಗೆಯನ್ನು ಸಹಿಸದ ಯಾರೋ ಕ್ಯೂಆರ್‌ಕೋಡ್ ಬಳಸಿ ದೂರು ನೀಡಿರಬಹುದು. ಆರೋಗ್ಯ ಸಚಿವರ ಸೂಚನೆಯಂತೆ ಅಧಿಕಾರಿಗಳು ಕೆಫೆಗೆ ಆಗಮಿಸಿ ಪರಿಶೀಲಿಸಿದ್ದಾರೆ. ನಮ್ಮಲ್ಲಿ ಯಾವುದೇ ರಾಸಾಯನಿಕ ಅಂಶ ಬಳಸಿ ಆಹಾರ ತಯಾರಿಸುತ್ತಿಲ್ಲ. ಗ್ರಾಹಕರಿಗೆ ಕಾಣುವಂತೆ ಆಹಾರ ತಯಾರಿಸುತ್ತಿದ್ದೇವೆ. ನಮ್ಮ ವಿರುದ್ಧ ಅಪಪ್ರಚಾರ ಮಾಡಿದವರ ವಿರುದ್ಧ ಕಾನೂನು ಹೋರಾಟ ಮಾಡಲಾಗುವುದು ಎಂದು ಸಿದ್ದೀಕ್ ತಿಳಿಸಿದ್ದಾರೆ.






