ಮಂಗಳೂರು ನೂತನ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ, ದ.ಕ. ಜಿಲ್ಲಾ ಎಸ್ಪಿಯಾಗಿ ಡಾ.ಅರುಣ್ ಕೆ. ನೇಮಕ

ಮಂಗಳೂರು: ಮಂಗಳೂರು ನೂತನ ಪೊಲೀಸ್ ಆಯುಕ್ತರಾಗಿ ಸುಧೀರ್ ಕುಮಾರ್ ರೆಡ್ಡಿ, ದ.ಕ. ಜಿಲ್ಲಾ ಎಸ್ಪಿಯಾಗಿ ಡಾ.ಅರುಣ್ ಕೆ. ಅವರನ್ನು ನೇಮಕ ಮಾಡಿ ರಾಜ್ಯ ಸರಕಾರ ಗುರುವಾರ ಆದೇಶ ಹೊರಡಿಸಿದೆ.
ಸುಧೀರ್ ಕುಮಾರ್ ರೆಡ್ಡಿ ಇದುವರೆಗೂ ಬೇಹುಗಾರಿಕಾ ಇಲಾಖೆಯ ಡಿ ಐ ಜಿ ಆಗಿದ್ದರು. ಅವರು ವರ್ಗಾವಣೆಯಾಗಿರುವ ಅನುಪಮ್ ಅಗ್ರವಾಲ್ ಅವರ ಸ್ಥಾನಕ್ಕೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಆಗಿ ನೇಮಕಗೊಂಡಿದ್ದಾರೆ. ಉಡುಪಿ ಎಸ್ಪಿಯಾದ್ದ ಡಾ.ಅರುಣ್ ಕೆ. ಅವರು ವರ್ಗಾವಣೆಯಾಗಿರುವ ಯತೀಶ್ ಎನ್. ಅವರ ಸ್ಥಾನಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿಯಾಗಿ ನೇಮಕಗೊಂಡಿದ್ದಾರೆ.
ಸುಧೀರ್ ಕುಮಾರ್ ರೆಡ್ಡಿ:
ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ನರಸಾರಾವ್ ಪೇಟೆಯವರಾದ ಸುಧೀರ್ ಕುಮಾರ್ ರೆಡ್ಡಿ 2010 ರ ಬ್ಯಾಚ್ ಐಪಿಎಸ್ ಅಧಿಕಾರಿ. ಅವರು ಪುದುಚೇರಿ ಇಂಜಿನಿಯರಿಂಗ್ ಕಾಲೇಜಿನಿಂದ ಬಿಟೆಕ್ ಪದವಿ ಪಡೆದಿದ್ದಾರೆ. ಅವರು ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಮತ್ತು ಹಿಂದೆ ಬೀದರ್ ಮತ್ತು ಚಿಕ್ಕಬಳ್ಳಾಪುರ, ಬೆಳಗಾವಿ ಜಿಲ್ಲೆಗಳ ಎಸ್ಪಿಯಾಗಿ ಸೇವೆ ಸಲ್ಲಿಸಿದ್ದಾರೆ. ಆ ಬಳಿಕ ಕರ್ನಾಟಕ ಕೇಡರ್ ನಿಂದ ಆಂಧ್ರಪ್ರದೇಶ ಕೇಡರ್ ಗೆ ಡೆಪ್ಟೇಷನ್ ಮೇಲೆ ತೆರಳಿದ್ದ ಅವರು ಮೊದಲು ವಿಜಯವಾಡ, ನಂತರ ಕರ್ನೂಲ್ ಎಸ್‌ಪಿಯಾಗಿ ಸೇವೆ ಸಲ್ಲಿಸಿದರು. ಆ ಬಳಿಕ ಡಾ. ಬಿ.ಆರ್. ಅಂಬೇಡ್ಕರ್ ಕೊನಸೀಮಾ ಜಿಲ್ಲೆಯ ಎಸ್‌ಪಿಯಾಗಿ, ನಂತರ ಪೂರ್ವ ಗೋದಾವರಿ ಜಿಲ್ಲೆ ಉಸ್ತುವಾರಿ, ಬಳಿಕ ಪೂರ್ಣಾವಧಿ ಎಸ್‌ಪಿಯಾಗಿ ಕೆಲಸ ಮಾಡಿದ್ದರು.
ಡಾ.ಅರುಣ್ ಕೆ.:
ತಮಿಳುನಾಡಿನ 2014 ರ ಐಪಿಎಸ್ ಬ್ಯಾಚ್ ನ ಅಧಿಕಾರಿಯಾದ ಡಾ. ಅರುಣ್, ಪುದುಚೇರಿ ಮೆಡಿಕಲ್ ಸೈನ್ಸ್ ಕಾಲೇಜಿನಿಂದ ಎಂಬಿಬಿಎಸ್ ಪದವಿ ಪಡೆದಿದ್ದಾರೆ. ಚಿತ್ರದುರ್ಗ, ದಾವಣಗೆರೆ ಮತ್ತು ವಿಜಯನಗರ, ಉಡುಪಿ ಜಿಲ್ಲೆಗಳಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.
ಸಿಐಡಿ ಸೈಬರ್ ಅಪರಾಧ ವಿಭಾಗದ ಡಿಐಜಿ ಬೋರಸೆ ಭೂಷಣ್ ಗುಲಾಬ್ ರಾವ್ ಅವರನ್ನು ಬೆಳಗಾವಿ ನಗರ ಪೊಲೀಸ್ ಆಯುಕ್ತರಾಗಿ ವರ್ಗಾವಣೆ ಮಾಡಲಾಗಿದೆ. ಗುಪ್ತಚರ ವಿಭಾಗದ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರನ್ನು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ.