ಮಂಗಳೂರು : 222 ಮಂದಿಯ ಡಿಎಲ್ ರದ್ದತಿಗೆ ಶಿಫಾರಸು
ಸಂಚಾರ ನಿಯಮ ಉಲ್ಲಂಘನೆ

ಸಾಂದರ್ಭಿಕ ಚಿತ್ರ
ಮಂಗಳೂರು, ಜು.28: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಪೊಲೀಸರ ಕಾರ್ಯಾಚರಣೆ ವೇಳೆ ಸಂಚಾರ ನಿಯಮ ಉಲ್ಲಂಘಿಸಿದ 222 ಮಂದಿ ಚಾಲಕರು ಮತ್ತು ಸವಾರರ ವಾಹನ ಚಾಲನಾ ಪರವಾನಗಿ (ಡಿಎಲ್) ರದ್ದುಗೊಳಿಸಲು ಸಾರಿಗೆ ಇಲಾಖೆಗೆ ಶಿಫಾರಸ್ಸು ಮಾಡಲಾಗಿದೆ ಎಂದು ಕಮಿಷನರ್ ಕುಲದೀಪ್ ಕುಮಾರ್ ಜೈನ್ ತಿಳಿಸಿದ್ದಾರೆ.
ಜುಲೈ 13 ರಿಂದ 26ರವರೆಗೂ ಅತಿ ವೇಗದ, ನಿರ್ಲಕ್ಷ್ಯದ ಚಾಲನೆಗಾಗಿ 113 ಸಹಿತ 222 ಚಾಲಕರ ಚಾಲನಾ ಪರವಾನಗಿ ಅಮಾನತುಗೊಳಿಸು ವಂತೆ ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಅತಿ ವೇಗ ಮತ್ತು ನಿರ್ಲಕ್ಷ್ಯದ ಚಾಲನೆ ಕುರಿತಂತೆ 113 ಪ್ರಕರಣ ದಾಖಲಾಗಿದ್ದು, ಪಾನಮತ್ತಾಗಿ ವಾಹನ ಚಾಲನೆ 1, ಸರಕು ಸಾಗಾಟ ವಾಹನಗಳಲ್ಲಿ ಪ್ರಯಾಣಿಕರ ಸಾಗಾಟ ಪ್ರಕರಣಗಳು -16, ವಾಹನ ಚಲಾಯಿಸುವಾಗ ಮೊಬೈಲ್ ಫೋನ್ ಬಳಕೆ - 4, ರೆಡ್ ಸಿಗ್ನಲ್ ಜಂಪಿಂಗ್ -5, ವಾಣಿಜ್ಯ ವಾಹನದಲ್ಲಿ ಪ್ರಯಾಣಿಕರ ಸಾಗಾಟ - 4, ಟ್ರಿಪಲ್ ರೈಡಿಂಗ್ ಪ್ರಕರಣ -3, ಹೆಲ್ಮೆಟ್ ಧರಿಸದೆ ಸಂಚಾರ -59, ಸೀಟ್ ಬೆಲ್ಟ್ ಹಾಕದೆ ಚಾಲನೆ -17 ಸೇರಿದಂತೆ ಒಟ್ಟು 222 ಮಂದಿಯ ಡಿಎಲ್ ರದ್ದತಿಗೆ ಸಾರಿಗೆ ಇಲಾಖೆಗೆ ಶಿಫಾರಸ್ಸು ಮಾಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.