ಮಂಗಳೂರು: ಕಾಲಮಿತಿಯೊಳಗೆ ಜನರ ಸಮಸ್ಯೆಗಳ ಇತ್ಯರ್ಥಕ್ಕೆ ಕಂದಾಯ ಸಚಿವ ಕೃಷ್ಣಬೈರೇಗೌಡ ಸೂಚನೆ

ಮಂಗಳೂರು: ಜಿಲ್ಲೆಯ ಜನರ ಸಮಸ್ಯೆಗಳನ್ನು ಕಾಲಮಿತಿಯೊಳಗೆ ಇತ್ಯರ್ಥಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.
ಅವರು ಮಂಗಳವಾರ ಪಡೀಲಿನಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಕಟ್ಟಡದ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಅನಿರೀಕ್ಷಿತವಾಗಿ ಸರಕಾರಿ ಕಚೇರಿಗಳಿಗೆ ಭೇಟಿ ನೀಡಿ ಆಡಳಿತ ವ್ಯವಸ್ಥೆ ಗೆ ಚುರುಕು ಮುಟ್ಟಿಸುವ ಪ್ರಯತ್ನ ಮಾಡಲಾಗಿದೆ ಎಂದರು.
ಮಂಗಳೂರಿನ ಕಂದಾಯ ಇಲಾಖೆಯ ತಳಮಟ್ಟದ ಕಚೇರಿಗಳಾದ ವಿಎ,ನಾಡಕಚೇರಿ,ತಹಶೀಲ್ದಾರ್,ಸಬ್ ರಿಜಿಸ್ಟ್ರಾರ್ ಕಚೇರಿಗಳಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ಅಧಿಕಾರಿಗಳು ಯಾವ ರೀತಿ ಜನರ ಸಮಸ್ಯೆ ಗಳಿಗೆ ಸ್ಪಂದಿಸುತ್ತಿದ್ದಾರೆ ಎನ್ನುವುದನ್ನು ಪರಿಶೀಲನೆ ನಡೆಸಲಾಗಿದೆ. ಅಧಿಕಾರಿಗಳು ಕಾಲಮಿತಿಯೊಳಗೆ ಕೆಲಸ ಮಾಡಿಕೊಡಲು ಸೂಚನೆ ಸೂಚನೆ ನೀಡಲಾಗಿದೆ ಎಂದರು.
2017-18ರಲ್ಲಿ ಪಡೀಲ್ ನಲ್ಲಿ ಜಿಲ್ಲಾಧಿಕಾರಿ ಕಚೇರಿ ಕಟ್ಟಡದ ಕೆಲಸ ಆರಂಭಗೊಂಡಿತ್ತು. ಸುಮಾರು 50-55 ಕೋಟಿ ರೂ ವೆಚ್ಚದ ಕಾಮಗಾರಿ ಈಗಾಗಲೇ ನಡೆದಿದೆ.ಕೆಲಸ ಪೂರ್ಣ ಗೊಂಡಿಲ್ಲ. ಕಚೇರಿ ಸ್ಥಳಾಂತರ ಆಗಿಲ್ಲ. ಮೊದಲು ಯಾವ ರೀತಿ ಅನುಮೋದನೆ ಮಾಡಲಾಗಿತ್ತೋ ಅದೇ ರೀತಿ ಕಾಮಗಾರಿ ನಡೆದಿದೆ. ಹಿಂದಿನ ಸರಕಾರದ ಕಾಲದಲ್ಲಿ ಕಾಮಗಾರಿ ಮುಗಿಸುವ ಕೆಲಸ ಆಗಿಲ್ಲ.ನಮ್ಮ ಸರಕಾರದ ಅವಧಿಯಲ್ಲಿ ಇದನ್ನು ಪೂರೈಸಲು ಬದ್ಧರಾಗಿದ್ದೇವೆ ಎಂದರು.
ಜಿಲ್ಲಾಧಿಕಾರಿ ಕಚೇರಿಯನ್ನು ವರ್ಷದೊಳಗೆ ಸ್ಥಳಾಂತರ ಮಾಡಲು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.







