ಮಂಗಳೂರು | ರೌಡಿ ಶೀಟರ್ ಸುಹಾಸ್ ಹತ್ಯೆ ಹಿನ್ನೆಲೆ: ಬಸ್ ಸಂಚಾರ ಸ್ಥಗಿತ; ಅಂಗಡಿ ಮುಂಗಟ್ಟು ಬಂದ್
► ಅಲ್ಲಲ್ಲಿ ಬಸ್‌ಗಳಿಗೆ ಕಲ್ಲೆಸೆತ ► ಮಂಗಳೂರಿಗೆ ಆಗಮಿಸಿದ ಎಡಿಜಿಪಿ ಆರ್. ಹಿತೇಂದ್ರ

ಮಂಗಳೂರು: ಬಜ್ಪೆಯಲ್ಲಿ ಕಳೆದ ರಾತ್ರಿ ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆಗೆ ಸಂಬಂಧಿಸಿದಂತೆ ದ.ಕ.ಜಿಲ್ಲಾ ಬಂದ್‌ಗೆ ವಿಶ್ವ ಹಿಂದೂ ಪರಿಷತ್ ನೀಡಿದ ಕರೆಯಂತೆ ನಗರದಲ್ಲಿ ಖಾಸಗಿ ಬಸ್‌ಗಳು ಸಂಚಾರ ಸ್ಥಗಿತಗೊಳಿಸಿವೆ.
ಅಂಗಡಿ ಮುಂಗಟ್ಟುಗಳು ಬಹುತೇಕ ಮುಚ್ಚಿವೆ. ಮುಂಜಾನೆ ಕೆಲವು ಅಂಗಡಿ, ಹೊಟೇಲುಗಳು ತೆರೆದಿದ್ದರೂ ಅದನ್ನು ಬಲವಂತವಾಗಿ ಮುಚ್ಚಿಸಲಾಗಿದೆ ಎಂದು ತಿಳಿದು ಬಂದಿದೆ.
ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಕೆಲವು ಖಾಸಗಿ ವಾಹನಗಳು ಓಡಾಡುತ್ತಿವೆಯಾದರೂ ಬಸ್‌ಗಳ ಸಂಚಾರ ಸ್ಥಗಿತಗೊಂಡ ಕಾರಣ ಬಹುತೇಕ ಬಂದ್‌ನ ವಾತಾವರಣ ನಿರ್ಮಾಣಗೊಂಡಿವೆ.
ನಗರ ಮತ್ತು ಹೊರವಲಯದ ಪ್ರಮುಖ ಕಡೆಗಳಲ್ಲಿ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಆರ್. ಹಿತೇಂದ್ರ ಮಂಗಳೂರಿಗೆ ಆಗಮಿಸಿದ್ದು, ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ.
ಅಲ್ಲಲ್ಲಿ ಬಸ್‌ಗಳಿಗೆ ಕಲ್ಲೆಸೆತ, ಅಮಾಯಕ ಯುವಕರಿಗೆ ಹಲ್ಲೆ ನಡೆದಿರುವ ಪ್ರಕರಣಗಳೂ ವರದಿಯಾಗಿವೆ.
ಕೆಎಸ್ಸಾರ್ಟಿಸಿ ನಿಲ್ದಾಣದಲ್ಲಿ ಪ್ರಯಾಣಿಕರ ಪರದಾಟ...
ಬಸ್ ಸಂಚಾರ ಸ್ಥಗಿತಗೊಂಡಿರುವ ಕಾರಣ ನಗರದ ಕೆಎಸ್ಸಾರ್ಟಿಸಿ ನಿಲ್ದಾಣದಲ್ಲಿ ಪ್ರಯಾಣಿಕರು ಪರದಾಡುಂತಾಗಿದೆ. ಮುಲ್ಕಿ, ಉಡುಪಿ, ಕುಂದಾಪುರ ಕಡೆಗಳಿಂದ ಕಾಲೇಜಿಗಾಗಿ ಬಂದ ವಿದ್ಯಾರ್ಥಿಗಳು ಬಂದ್ ಹಿನ್ನೆಲೆಯಲ್ಲಿ ಕಾಲೇಜುಗಳು ಮುಚ್ಚಿರುವ ಕಾರಣ ಮನೆಗೆ ಮರಳಲೂ ಆಗದ ಪರಿಸ್ಥಿತಿ ಉಂಟಾಗಿದೆ.







