ಮಂಗಳೂರು | ಅಂಚೆ ಚೀಟಿ- ನಾಣ್ಯಗಳ ಪ್ರದರ್ಶನಕ್ಕೆ ಚಾಲನೆ

ಮಂಗಳೂರು, ನ. 22 : ನಗರದ ಎಂ.ಪ್ರಶಾಂತ್ ಶೇಟ್ ಅವರಿಂದ ಎರಡು ದಿನಗಳ ಕಾಲ ಡಾ.ಟಿ.ಎಂ.ಎ.ಪೈ ಕನ್‌ವೆನ್ಶನ್ ಸೆಂಟರ್‌ನಲ್ಲಿ ಆಯೋಜಿಸಿದ ಫಿಲಾನಮಿಸ್ಟ್ ಅಂಚೆಚೀಟಿಗಳು ಮತ್ತು ನಾಣ್ಯಗಳ ಪ್ರದರ್ಶನಕ್ಕೆ ಶನಿವಾರ ಚಾಲನೆ ದೊರೆಯಿತು.
ಎರಡು ದಿನಗಳ ಪ್ರದರ್ಶನದಲ್ಲಿ ಪ್ರಶಾಂತ್ ಶೇಟ್ ಅವರು ಸಂಗ್ರಹಿಸಿರುವ 800 ನಾಣ್ಯಗಳು ಹಾಗೂ 2,000 ಅಂಚೆಚೀಟಿಗಳ ಪ್ರದರ್ಶನ ನಡೆಯುತ್ತಿದೆ.
ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಿದ ನಿಟ್ಟೆ ವಿ.ವಿ. ಉಪಕುಲಪತಿ ಪ್ರೊ.ಡಾ.ಎಂ. ಎಸ್.ಮೂಡಿತ್ತಾಯ ಮಾತನಾಡಿ, ಪ್ರಶಾಂತ್ ಶೇಟ್ ಅವರು ಅಪಾರ ಪ್ರಮಾಣದ ಅಂಚೆಚೀಟಿಗಳು ಮತ್ತು ನಾಣ್ಯಗಳ ಸಂಗ್ರಹ ಪ್ರದರ್ಶನದ ಮೂಲಕ ಆಸಕ್ತರ ಜ್ಞಾನಾರ್ಜನೆಗೆ ವೇದಿಕೆ ಕಲ್ಪಿಸಿದ್ದಾರೆ ಎಂದರು.
ಅತಿಥಿ ದ.ಕ. ಜಿಲ್ಲಾ ಚೆಸ್ ಎಸೋಸಿಯೇಶನ್ ಅಧ್ಯಕ್ಷೆ ಡಾ.ಅಮರಶ್ರೀ ಅಮರನಾಥ ಶೆಟ್ಟಿ ಮಾತನಾಡಿ, ತಂದೆಯಿಂದ ಬಂದ ಹವ್ಯಾಸವನ್ನು ಮುಂದಿನ ತಲೆಮಾರಿಗೆ ಉಳಿಸಿಕೊಳ್ಳುವ ಕೆಲಸವನ್ನು ಪ್ರಶಾಂತ್ ಶೇಟ್ ಮತ್ತು ಕುಟುಂಬಿಕರು ಮಾಡಿದ್ದಾರೆ. ಈ ಕಾರ್ಯದಿಂದ ಇನ್ನೊಬ್ಬರಿಗೆ ಪ್ರೇರಣೆ ದೊರಕಲಿ ಎಂದರು.
ಪ್ರಶಾಂತ್ ಶೇಟ್ ಅವರ ತಾಯಿ ಪದ್ಮಾ ಆರ್.ಶೇಟ್ ಅವರು ಫಿಲಾನಮಿಸ್ಟ್ ಬುಕ್ ಲೆಟ್ ಬಿಡುಗಡೆಗೊಳಿಸಿದರು. ರಾಜ್ಯ ನಾಣ್ಯಶಾಸ್ತ್ರ ಸಂಘದ ಅಧ್ಯಕ್ಷ ರಾಜೇಂದ್ರ ಮಾರು, ಮರ್ಕಡ್ ಪ್ರಭಾಕರ ಕಾಮತ್, ಮೀನುಗಾರಿಕ ಕಾಲೇಜಿನ ಮಾಜಿ ಡೀನ್ ಎಚ್.ಎಂ.ಶಿವಪ್ರಕಾಶ್, ಪ್ರಶಾಂತ್ ಶೇಟ್ ಅವರ ಮನೆಯವರಾದ ರಾಧಿಕಾ ಶೇಟ್, ಆರ್ಯನ್ ಶೇಟ್, ಹೇಮಂತ್ ಶೇಟ್, ನಿಶಾಂತ್ ಶೇಟ್ ಭಾಗವಹಿಸಿದ್ದರು.
ಪ್ರಶಾಂತ್ ಶೇಟ್ ಸ್ವಾಗತಿಸಿ, ಪಾಸ್ತಾವಿಕವಾಗಿ ಮಾತನಾಡಿದರು. ಸೌಜನ್ಯ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.
ಪ್ರದರ್ಶನದಲ್ಲಿ 800 ನಾಣ್ಯಗಳು, 2,000 ಅಂಚೆ ಚೀಟಿಗಳ ಪ್ರದರ್ಶನಕ್ಕೆ ಇಡಲಾಗಿದೆ. ಜಗತ್ತಿನಲ್ಲೇ ಮೊದಲ ಬಾರಿಗೆ ಬಳಕೆಗೆ ಬಂದ 17ನೇ ಶತಮಾನದ ಆಫ್ರಿಕನ್ ನಾಣ್ಯ, ಚೀನಾ, ಜಪಾನ್, ದಕ್ಷಿಣ ಏಷ್ಯಾ ನಾಣ್ಯಗಳು ಸೇರಿದಂತೆ 40ಕ್ಕೂ ಅಧಿಕ ದೇಶಗಳ ಅಪರೂಪದ 800ಕ್ಕೂ ಅಧಿಕ ನಾಣ್ಯಗಳು, ಇತಿಹಾಸದ ಮಹತ್ವ ಸಾರುವ 2,000ಕ್ಕೂ ಅಧಿಕ ಅಂಚೆ ಚೀಟಿಗಳು, 1,500 ಪೋಸ್ಟ್ ಕಾರ್ಡ್‌ಗಳು ಪ್ರದರ್ಶನದಲ್ಲಿವೆ. ಗಾಜು, ಚಿಪ್ಪು, ಚಿನ್ನ, ಸಿರಾಮಿಕ್, ವಜ್ರ, ಮೈಕ್ರೋಚಿಪ್ ಮೊದಲಾದವುಗಳ ಮೇಲೆ ಮುದ್ರಿತವಾದ ಅಂಚೆಚೀಟಿಗಳು, 1840ರ ಇಂಡೋ-ಪೋರ್ಚುಗೀಸ್ ಮೊದಲ ಅಂಚೆಚೀಟಿಗಳ ಅಪೂರ್ವ ಸಂಗ್ರಹ ಕೂಡ ಪ್ರದರ್ಶನ ಕಾಣುತ್ತಿದೆ. ನ.23 ಬೆಳಗ್ಗೆ 10ರಿಂದ ರಾತ್ರಿ 8 ಗಂಟೆಯವರೆಗೆ ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದೆ.
-ಪ್ರಶಾಂತ್ ಶೇಟ್







