Mangaluru| ನಾಗುರಿ ದುರಂತ : ಮೃತರ ಕುಟುಂಬಕ್ಕೆ ತಕ್ಷಣದ ಪರಿಹಾರಕ್ಕೆ ಟಿ.ಎಂ. ಶಾಹಿದ್ ಆಗ್ರಹ

ಮಂಗಳೂರು: ನಗರದಲ್ಲಿ ಸುರಿಯುತ್ತಿರುವ ಮುಂಗಾರು ಮಳೆಯ ಆರ್ಭಟಕ್ಕೆ ನಾಗುರಿಯಲ್ಲಿ ಸಂಭವಿಸಿದ ತಡೆಗೋಡೆ ಕುಸಿತದ ದುರಂತಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ. ಶಾಹೀದ್ ತೆಕ್ಕಿಲ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಸಂತ್ರಸ್ತ ಕುಟುಂಬಕ್ಕೆ ತಕ್ಷಣದ ಪರಿಹಾರ ಹಾಗೂ ಅಗತ್ಯ ರಕ್ಷಣಾ ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ನಾಗುರಿಯ ಗರೋಡಿಯ ಮಾರಿಯಲ್ ಹೌಸ್ ಬಳಿ ಮುಂಜಾನೆ ಸಂಭವಿಸಿದ ಈ ಘೋರ ದುರಂತದಲ್ಲಿ ಬಿಹಾರ ಮೂಲದ ಕಾರ್ಮಿಕ ಕುಟುಂಬದ ಇಬ್ಬರು ಮುಗ್ಧ ಮಕ್ಕಳು ಸೇರಿದಂತೆ ಮೂವರು ಮೃತಪಟ್ಟಿರುವುದು ಅತ್ಯಂತ ಹೃದಯವಿದ್ರಾವಕ ಘಟನೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
"ಕೂಲಿ ಅರಸಿ ಬಂದ ಬಡ ಕಾರ್ಮಿಕ ಕುಟುಂಬದ ಆಧಾರಸ್ತಂಭವಾಗಿದ್ದ ಜೀವಗಳು ಮಳೆಯ ಅಬ್ಬರಕ್ಕೆ ಬಲಿಯಾಗಿರುವುದು ಭರಿಸಲಾಗದ ನಷ್ಟ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಸರ್ಕಾರ ಮತ್ತು ಜಿಲ್ಲಾಡಳಿತವು ಯಾವುದೇ ವಿಳಂಬವಿಲ್ಲದೆ ಸಂತ್ರಸ್ತ ಕುಟುಂಬಕ್ಕೆ ಗರಿಷ್ಠ ಮಟ್ಟದ ತುರ್ತು ಪರಿಹಾರ ಧನವನ್ನು ಘೋಷಿಸಬೇಕು" ಎಂದು ಅವರು ಆಗ್ರಹಿಸಿದ್ದಾರೆ.
ಕರಾವಳಿಯಲ್ಲಿ ಮಳೆ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳ ಅಗತ್ಯವನ್ನು ಒತ್ತಿ ಹೇಳಿದ ಅವರು, ಸಾರ್ವಜನಿಕ ಹಾಗೂ ಕಾರ್ಮಿಕರ ರಕ್ಷಣೆ ನಮ್ಮೆಲ್ಲರ ಹೊಣೆ ಎಂದು ನೆನಪಿಸಿದರು.
ನಗರದಾದ್ಯಂತ ಇಂತಹ ಅಪಾಯಕಾರಿ ತಡೆಗೋಡೆಗಳು, ಗುಡ್ಡದ ಅಂಚಿನಲ್ಲಿರುವ ಮನೆಗಳು ಹಾಗೂ ತಾತ್ಕಾಲಿಕ ಶೆಡ್‌ಗಳಲ್ಲಿ ವಾಸಿಸುತ್ತಿರುವ ಶ್ರಮಿಕ ವರ್ಗದ ಸುರಕ್ಷತೆಗಾಗಿ ಮಹಾನಗರ ಪಾಲಿಕೆ ಮತ್ತು ಕಾರ್ಮಿಕ ಇಲಾಖೆ ತಕ್ಷಣವೇ ಜಂಟಿ ಸಮೀಕ್ಷೆ ನಡೆಸಿ, ಅವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.






