ಮಂಗಳೂರು| ಯುನಿಟಿ ಆಸ್ಪತ್ರೆಯಲ್ಲಿ ಮುಹಮ್ಮದ್ ಅಲಿ ಶುಕ್ರಿ ಅವರ ‘ಯು ಆರ್ ದಿ ಒನ್ ಆ್ಯಂಡ್ ಓನ್ಲಿ’ ಪುಸ್ತಕ ಬಿಡುಗಡೆ

ಮಂಗಳೂರು: ಬಹ್ರೈನ್ ನ ಖ್ಯಾತ ಭಾಷಣಕಾರ ಮುಹಮ್ಮದ್ ಅಲಿ ಶುಕ್ರಿ ಅವರ ‘ಯು ಆರ್ ದಿ ಒನ್ ಆ್ಯಂಡ್ ಓನ್ಲಿ’ (You Are The One And Only) ಪುಸ್ತಕ ಬಿಡುಗಡೆ ಮಂಗಳೂರಿನ ಯುನಿಟಿ ಆಸ್ಪತ್ರೆಯಲ್ಲಿ ನಡೆಯಿತು.
ಮುಹಮ್ಮದ್ ಅಲಿ ಶುಕ್ರಿ ಅವರ ʼಯು ಆರ್ ದಿ ಒನ್ ಆ್ಯಂಡ್ ಓನ್ಲಿ’ ಪುಸ್ತಕವನ್ನು ಯುನಿಟಿ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಹಬೀಬ್ ರಹಮಾನ್ ಬಿಡುಗಡೆ ಮಾಡಿದರು. ಆಸ್ಪತ್ರೆಯ ನಿರ್ದೇಶಕರಾದ ಅಶ್ಫಾಕ್ ಎಂ.ಹಬೀಬ್, ನರಶಸ್ತ್ರ ಚಿಕಿತ್ಸಕ ಡಾ.ಸಾಹಿಲ್ ಬಂಟ್ವಾಳ, ಡಾ.ಸಾಗರ್ ಬಂಟ್ವಾಳ ಸೇರಿದಂತೆ ವೈದ್ಯರು ಮತ್ತು ಲೇಖಕರ ಆತ್ಮೀಯ ಗೆಳೆಯರ ಸಮ್ಮುಖದಲ್ಲಿ ಪುಸ್ತಕವನ್ನು ಬಿಡುಗಡೆಗೊಳಿಸಲಾಗಿದೆ.
ಮುಹಮ್ಮದ್ ಅಲಿ ಶುಕ್ರಿ ಬಹ್ರೈನ್‌ನ ಖ್ಯಾತ ಭಾಷಣಕಾರರು, ಅವರು ಯೂನಿಟಿ ಆಸ್ಪತ್ರೆಯೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. 2013ರಲ್ಲಿ ಅವರ ತಂದೆ ಅಲಿ ಹಸನ್ ಶುಕ್ರಿ ಅವರು ಯುನಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಆ ಬಳಿಕ ಅವರು ಯುನಿಟಿ ಆಸ್ಪತ್ರೆಯ ಜೊತೆ ಉತ್ತಮ ಸಂಬಂಧವನ್ನು ಹೊಂದಿದ್ದಾರೆ.
ಡಾ.ಸಾಹಿಲ್ ಬಂಟ್ವಾಳ ಅವರು ಅಲಿ ಹಸನ್ ಶುಕ್ರಿ ಅವರಿಗೆ ಪರಿಣಾಮಕಾರಿ ಚಿಕಿತ್ಸೆಯನ್ನು ನೀಡಿದ್ದರು. ಆಸ್ಪತ್ರೆಯ ಸಿಬ್ಬಂದಿಗಳ ಸಹಾನುಭೂತಿ ಮತ್ತು ಸಮರ್ಪಣಾ ಮನೋಭಾವದಿಂದ ಪ್ರೇರಿತರಾದ ಶುಕ್ರಿ ಅವರು ತಮ್ಮ ಪುಸ್ತಕದ ಒಂಭತ್ತನೇ ಅಧ್ಯಾಯದಲ್ಲಿ ʼMiracles in Mangaloreʼ ಎಂಬ ಶೀರ್ಷಿಕೆಯಲ್ಲಿ ಈ ಅನುಭವವನ್ನು ವಿವರಿಸಿದ್ದಾರೆ.
ಮುಹಮ್ಮದ್ ಅಲಿ ಶುಕ್ರಿ ʼಟೋಸ್ಟ್ ಮಾಸ್ಟರ್ಸ್ ಇಂಟರ್ನ್ಯಾಶನಲ್ ವರ್ಲ್ಡ್ ಚಾಂಪಿಯನ್ ಶಿಪ್ ಆಫ್ ಪಬ್ಲಿಕ್ ಸ್ಪೀಕಿಂಗ್ʼ ಸ್ಪರ್ಧೆಯಲ್ಲಿ ಫೈನಲ್ ಗೆ ತಲುಪಿದ ಮಧ್ಯಪ್ರಾಚ್ಯದ ಮೊದಲ ವ್ಯಕ್ತಿಯಾಗಿದ್ದಾರೆ. ದಿಲ್ಲಿಯಲ್ಲಿ ನಡೆದ ಅಂತಾರಾಷ್ಟ್ರೀಯ ಪುಸ್ತಕ ಮೇಳದಲ್ಲಿ ಅವರ ಪುಸ್ತಕ ಮೊದಲು ಬಿಡುಗಡೆಯಾಗಿತ್ತು. ಮಂಗಳೂರಿಗೆ ಭೇಟಿಯ ವೇಳೆ ಶುಕ್ರಿ ಅವರು ಯುನಿಟಿ ಆಸ್ಪತ್ರೆಯ ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳಿಗೆ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.







