Mangaluru | ಸುರತ್ಕಲ್‌ನಲ್ಲಿ ಸಿಎನ್‌ಜಿ ಗ್ಯಾಸ್ ಸಿಲಿಂಡರ್ ಸೋರಿಕೆ

ಸುರತ್ಕಲ್: ಸಿಎನ್‌ಜಿ ಗ್ಯಾಸ್ ಸಿಲಿಂಡರ್ ಸೋರಿಕೆಯಾಗಿ ಸಾರ್ವಜನಿಕರನ್ನು ಆತಂಕಕ್ಕೆ ತಳ್ಳಿದ ಘಟನೆ ರಾ.ಹೆ. 66ರ ಸುರತ್ಕಲ್ ಅಥರ್ವಾ ಆಸ್ಪತ್ರೆ ಬಳಿ ಶುಕ್ರವಾರ ರಾತ್ರಿ ವರದಿಯಾಗಿದೆ.
ಗೇಲ್ ಇಂಡಿಯಾ ಕಂಪೆನಿಗೆ ಸೇರಿದ ತೆರೆದ ಲಾರಿಯಲ್ಲಿ ಸಿಎನ್ ಜಿ ಆಟೋ ಅನಿಲವನ್ನು ಪಣಂಬೂರು ಶೇಖರಣಾ ಘಟಕದಿಂದ ಉಡುಪಿ ಕಡೆ ಬೃಹತ್ ಸಿಲಿಂಡರ್ ಗಳ ಮೂಲಕ ಸಾಗಾಟ ಮಾಡಲಾಗುತ್ತಿತ್ತು. ಈ ವೇಳೆ ಆಕಸ್ಮಿಕವಾಗಿ ಅನಿಲ ಸೋರಿಕೆಯಾಗಿದೆ ಎನ್ನಲಾಗಿದ್ದು, ಕೆಲಹೊತ್ತು ಸಾರ್ವಜನಿಕರು ಆತಂಕಕ್ಕೀಡಾದರು.
ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಸುರತ್ಕಲ್ ಪೊಲೀಸರು ಮತ್ತು ಮಂಗಳೂರು ಉತ್ತರ ಸಂಚಾರ ವಿಭಾಗದ ಪೊಲೀಸರು ಹೆದ್ದಾರಿಯ ಎರಡೂ ಭಾಗದಲ್ಲಿ ಸಂಚರಿಸುತ್ತಿದ್ದ ವಾಹನಗಳನ್ನು ದೂರದಲ್ಲೆ ತಡೆದು ನಿಲ್ಲಿಸಿದರು ಎನ್ನಲಾಗಿದೆ. ಈ ಸಂದರ್ಭ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ತಕ್ಷಣ ಪೊಲೀಸರು ಗೇಲ್ ಇಂಡಿಯಾ ಕಂಪೆನಿಗೆ ಮಾಹಿತಿ ನೀಡಿ ಟೆಕ್ನೀಶಿಯನ್ ಗಳನ್ನು ಕರೆಸಿಕೊಂಡು ಸೋರಿಕೆಯನ್ನು ತಡೆಗಟ್ಟಿ ಲಾರಿಯನ್ನು ಪಣಂಬೂರು ಶೇಖರಣಾ ಘಟಕಕ್ಕೆ ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ.
ಸಿಲಿಂಡ್ ಸುಮಾರು 75ಲೀ ಸಾಮರ್ಥ್ಯದ್ದು, ಇದರಲ್ಲಿ ಕನಿಷ್ಠ ಪ್ರಮಾಣದ ಗ್ಯಾಸ್ ಸೋರಿಕೆಯಾಗಿದೆಯಷ್ಟೇ. ತಕ್ಷಣ ನಮ್ಮ ಇಂಜಿಯರ್ ಗಳು ಮತ್ತು ಅಗ್ನಿಶಾಮಕ ದಳ ಸ್ಥಳಕ್ಕೆ ತೆರಳಿ ಸೋರಿಕೆಯನ್ನು ಸರಿಪಡಿಸಿದೆ. ಯಾವುದೇ ಅಪಾಯ ಸಂಭವಿಸಿಲ್ಲ.
- ನೋವೆಲ್, ಗ್ಯಾಸ್ ಸಾಗಾಟ ವಿಭಾಗದ ಸಿಬ್ಬಂದಿ







