ಮಂಗಳೂರು: ಫೆ. 7ರಂದು ಮಿನಿ ಸಿನಿ ಅವಾರ್ಡ್

ಮಂಗಳೂರು, ಫೆ. 6: ಕೋಸ್ಟಲ್‌ವುಡ್ ಕಲಾವಿದರು ಮತ್ತು ತಂತ್ರಜ್ಞರ ಸಹಕಾರಿ ಒಕ್ಕೂಟ ಹಾಗೂ ವಿಠಲ್ ಶೆಟ್ಟಿಫೌಂಡೇಶನ್ ಅರ್ಪಿಸುವ ಅಸ್ತ್ರ ಗ್ರೂಪ್ ಪ್ರಾಯೋಜಕತ್ವದ ಮಿನಿ ಸಿನಿ ಅವಾರ್ಡ್ ಪ್ರದಾನ ಕಾರ್ಯಕ್ರಮ ಫೆ. 7ರಂದು ಪಾಂಡೇಶ್ವರದ ಫೋರಂ ಫಿಝಾ ಮಾಲ್‌ನಲ್ಲಿ ಆಯೋಜಿಸಲಾಗಿದೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಒಕ್ಕೂಟದ ಕಾರ್ಯಕಾರಿ ಸಮಿತಿ ಸದಸ್ಯ ಲಕ್ಷ್ಮೀಶ್ ಸುವರ್ಣ, ಸಂಜೆ 4.30ಕ್ಕೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಮಾರಂಭ ಆರಂಭಗೊಳ್ಳಲಿದೆ. ಸಂಜೆ 6ಗಂಟೆಗೆ ಸಭಾ ಕಾರ್ಯಕ್ರಮ ಆರಂಭವಾಗಲಿದೆ ಎಂದರು.
ಸಮಾರಂಭದಲ್ಲಿ ಒಟ್ಟು 17 ವಿಭಾಗಗಳಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. 30ರಷ್ಟು ಶಾರ್ಟ್‌ಫಿಲಂಗಳು ಬಂದಿದ್ದು, ಅದರಲ್ಲಿ 6 ಟೆಲಿಫಿಲಂಗಳನ್ನು ಆಯ್ಕೆ ಮಾಡಲಾಗಿದೆ.
ಬೆಸ್ಟ್ ಫಿಲ್ಡ್, ಬೆಸ್ಟ್ ಆ್ಯಕ್ಟರ್, ಬೆಸ್ಟ್ ಸ್ಟೋರಿ, ಬೆಸ್ಟ್ ಜ್ಯೂರಿ ಹೀಗೆ 17 ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗುವುದು. ತುಳು ಚಿತ್ರರಂಗ ಹಾಗೂ ರಂಗಭೂಮಿಗೆ ಸಲ್ಲಿಸಿದ ಸೇವೆಗಾಗಿ ಹಿರಿಯ ಕಲಾವಿದ ಲಕ್ಷ್ಮಣ ಕುಮಾರ್ ಮಲ್ಲೂರು ಅವರಿಗೆ ವಿಠಲ್ ಶೆಟ್ಟಿ ಲೈಫ್ ಟೈಮ್ ಅಚೀವ್‌ಮೆಂಟ್ ಅವಾರ್ಡ್ ನೀಡಲಾಗುವುದು. ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ಮೂಲಕ ಸಮಾಜ ಸೇವೆ ಮಾಡುತ್ತಿರುವ ಅರ್ಜುನ್ ಭಂಡಾರ್‌ಕರ್ ಅವರಿಗೆ ಕಾಪು ಲೀಲಾಧರ ಶೆಟ್ಟಿ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಅವರು ತಿಳಿಸಿದರು.
ಒಕ್ಕೂಟದ ಸಾಂಸ್ಕೃತಿಕ ಕಾರ್ಯದರ್ಶಿ ಯತೀಶ್ ಪೂಜಾರಿ ಮಾತನಾಡಿ, ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ನಡೆಸಲು ಸಕಲ ಸಿದ್ಧತೆ ನಡೆದಿದೆ. ಕಾರ್ಯಕ್ರಮವನ್ನು ರಂಗಭೂಮಿಯ ಹಿರಿಯ ಕಲಾವಿದ ಡಾ.ಸಂಜೀವ ದಂಡಕೇರಿ ಉದ್ಘಾಟಿಸುವರು. ಮಾಜಿ ಸಚಿವ ಕೃಷ್ಣ ಜೆ ಪಾಲೆಮಾರ್ ಅಧ್ಯಕ್ಷತೆ ವಹಿಸುವರು ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಉಪಾಧ್ಯಕ್ಷರಾದ ಅನೂಪ್ ಸಾಗರ್, ಲಂಚು ಲಾಲ್, ಸಾಂಸ್ಕೃತಿಕ ಕಾರ್ಯದರ್ಶಿ ರಂಜನ್ ಬೋಳೂರು ಉಪಸ್ಥಿತರಿದ್ದರು.







