Mangaluru | ಆ.18ರಂದು ನಮ್ಮ ಕಂಬಳ ಪ್ರಶಸ್ತಿ ಪ್ರದಾನ

ಮಂಗಳೂರು : ನಮ್ಮ ಕುಡ್ಲ ವಾಹಿನಿ ಹಾಗೂ ದುಬೈನ ನಮ್ಮ ಕಂಬಳ ಟೀಂ ವತಿಯಿಂದ 2026ನೆ ಸಾಲಿನ ನಮ್ಮ ಕಂಬಳ ಪ್ರಶಸ್ತಿ ಪ್ರದಾನ ಸಮಾರಂಭ ಆ. 18ರಂದು ನಡೆಯಲಿದೆ.
ಮೇರಿಹಿಲ್‌ನ ಪಾಲೆಮಾರ್ ಕನ್ವೆನ್ಶನ್ ಸೆಂಟರ್‌ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಕಳೆದ ಕಂಬಳ ಋತುವಿನಲ್ಲಿ ವಿವಿಧ ವ ವಿಭಾಗಗಳಲ್ಲಿ ಅತ್ಯಧಿಕ ಪದಕ ಗೆದ್ದ ಕೋಣಗಳ ಮಾಲಕರು, ಓಟಗಾರರು, ವಿಜೇತ ಕೋಣಗಳ ಮಾಹಿತಿ ಆಧಾರದಲ್ಲಿ ಸರಣಿ ಶ್ರೇಷ್ಠ, ಪ್ರಥಮ, ದ್ವಿತೀಯ ಹಾಗೂ ತೃತೀಯ ಪ್ರಶಸ್ತಿ ನೀಡಲಾಗುತ್ತದೆ ಎಂದು ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ನಮ್ಮ ಕುಡ್ಲ ವಾಹಿನಿಯ ಸಿಒಒ ಕದ್ರಿ ನವನೀತ ಶೆಟ್ಟಿ ತಿಳಿಸಿದರು.
ಸಮಾರಂಭದಲ್ಲಿ ಹಿರಿಯ ಓಟಗಾರ, ಕ್ರೀಡಾ ರತ್ನ ನಕ್ರೆ ಜಯಕರ ಮಡಿವಾಳರಿಗೆ ‘ಕಂಬಳ ಬೊಳ್ಳಿ 2026’ ಪ್ರಶಸ್ತಿ ನೀಡಲಾಗುವುದು. ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಇರುವೈಲ ಪಾಣಿಲ ‘ತಾಟೆ’ ಹಾಗೂ ಬೋಳದ ಗುತ್ತು ‘ದೋಣಿ’ ಕೋಣಗಳಿಗೆ ನಮ್ಮ ಕುಡ್ಲ ಶ್ರೇಷ್ಟ ಕೋಣ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಬಳ್ಕುಂಜೆ ಗುತ್ತು ಮಲ್ಲಿಕಾ ಯಶವಂತ ಶೆಟ್ಟಿ ಅವರಿಗೆ ವಿಶೇಷ ಪ್ರಶಸ್ತಿ ನೀಡಲಾಗುವುದು ಎಂದು ಅವರು ತಿಳಿಸಿದರು.
ಮುಲ್ಕಿ ಸೀಮೆ ಅರಸು ಕಂಬಳದ ದುಗ್ಗಣ್ಣ ಸಾವಂತರಸರು ಕಾರ್ಯಕ್ರಮವನ್ನು ಉದ್ಘಾಟಿಸುವರು. ಎಂ.ಆರ್.ಜಿ. ಸಂಸ್ಥಾಪಕ ಡಾ. ಕೆ. ಪ್ರಕಾಶ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಇದೇ ವೇಳೆ 2025ರ ಸಾಲಿನ ಕಂಬಳಗಳ ಸಮಗ್ರ ಮಾಹಿತಿಯನ್ನು ಒಳಗೊಂಡ ನಮ್ಮ ಕಂಬಳ 2025-26 ಮಾಹಿತಿ ಕೈಪಿಡಿಯನ್ನು ಶಶಿ ಕ್ಯಾಟರಿಂಗ್ ಸರ್ವಿಸಸ್ ಬರೋಡದ ಸ್ಥಾಪಕ ಶಶಿಧರ ಬಿ. ಶೆಟ್ಟಿ ಬಿಡುಗಡೆಗೊಳಿಸುವರು. ಸಮಾರಂಭದಲ್ಲಿ ಸಚಿವ ಯು.ಟಿ.ಖಾದರ್, ಸಂಸದ ಬ್ರಿಜೇಶ್ ಚೌಟ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ಅವರು ವಿವರ ನೀಡಿದರು.
ಗೋಷ್ಟಿಯಲ್ಲಿ ನಮ್ಮ ಕುಡ್ಲ ವಾಹಿನಿಯ ನಿರ್ದೇಶಕರಾದ ಹರೀಶ್ ಬಿ. ಕರ್ಕೇರ, ಸುರೇಶ್ ಬಿ. ಕರ್ಕೇರ, ಲೀಲಾಕ್ಷ ಬಿ. ಕರ್ಕೇರ, ಮ್ಯನೇಜರ್ ಸುದರ್ಶನ್ ಕೋಟ್ಯಾನ್, ಶಾರದಾ ವಿದ್ಯಾಲಯದ ಪ್ರಾಂಶುಪಾಲ ದಯಾನಂದ ಕಟೀಲು ಉಪಸ್ಥಿತರಿದ್ದರು.






