ಮಂಗಳೂರು: ಬಾಲ್ಕನಿ ಕುಸಿದು ಬಿದ್ದು ಓರ್ವ ವಿದ್ಯಾರ್ಥಿ ಮೃತ್ಯು, ನಾಲ್ವರಿಗೆ ಗಾಯ

ಮಂಗಳೂರು: ಮಂಗಳೂರಿನ ಎಮ್ಮೆಕೆರೆಯ ರಾಮ ಲಕ್ಷ್ಮೀನಾರಾಯಣ ಕನ್ವೆನ್ಷನ್ ಹಾಲ್‌ನ ಬಾಲ್ಕನಿ ಕುಸಿದು ಬಿದ್ದು ವಿದ್ಯಾರ್ಥಿಯೊಬ್ಬ ಮೃತಪಟ್ಟಿದ್ದು, ನಾಲ್ವರು ಗಾಯಗೊಂಡ ಘಟನೆ ಶನಿವಾರ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲಾ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭಕ್ಕಾಗಿ ವಿದ್ಯಾರ್ಥಿಗಳು ಸಭಾಭವನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು.
ಈ ವೇಳೆ ಕಾರಿಡಾರ್‌ನಲ್ಲಿ ಅತಿಯಾದ ಜನದಟ್ಟಣೆ ಉಂಟಾಗಿತ್ತು. ಹೊರಗೆ ನಿಂತಿದ್ದ ವಿದ್ಯಾರ್ಥಿಗಳು ದುರ್ಬಲವಾಗಿದ್ದ ಆಧಾರ ಗೋಡೆಯ ಮೇಲೆ ಒರಗಿ ನಿಂತಾಗ ಗೋಡೆ ಏಕಾಏಕಿ ಕುಸಿದು ಬಿದ್ದಿದೆ.
ಪರಿಣಾಮವಾಗಿ ವಿದ್ಯಾರ್ಥಿಗಳು ಮೇಲಿನಿಂದ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದಾರೆ.
ತಕ್ಷಣವೇ ಗಾಯಾಳುಗಳನ್ನು ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ತೀವ್ರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿಯೋರ್ವ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಉಳಿದ ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.






