ಗಂಜಿಮಠ | ತಂದೆ-ಮಗಳಿಗೆ ಸಂಘಪರಿವಾರ ಕಾರ್ಯಕರ್ತರಿಂದ ಹಲ್ಲೆ ಆರೋಪ: ಮಂಗಳೂರು ಪೊಲೀಸ್ ಆಯುಕ್ತರು ಹೇಳಿದ್ದೇನು?

ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ
ಗಂಜಿಮಠ: ಮಳಲಿ - ನಾರ್ಲಪದವು ಎಂಬಲ್ಲಿ ತಂದೆ-ಮಗಳಿಗೆ ಸಂಘಪರಿವಾರ ಕಾರ್ಯಕರ್ತರು ಹಲ್ಲೆ ನಡೆಸಿದ ಆರೋಪ ಸಂಬಂಧ ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರು ಸ್ಪಷ್ಟನೆ ನೀಡಿದ್ದಾರೆ.
ಬೆಳಗ್ಗೆ ಸುಮಾರು 10 ಗಂಟೆ ವೇಳೆಗೆ ಮುಲ್ಲರಪಟ್ಣ ನಿವಾಸಿ ಅಬ್ದುಲ್ ಸತ್ತಾರ್ ಎಂಬವರು ತಮ್ಮ 11ವರ್ಷದ ಮಗಳೊಂದಿಗೆ ಸುಮಾರು 19 ಕೆ.ಜಿ. ತೂಕದ ಗೋಮಾಂಸವನ್ನು ಯಾವುದೇ ದಾಖಲೆಗಳಿಲ್ಲದೆ ದ್ವಿಚಕ್ರ ವಾಹನದಲ್ಲಿ ಸಾಗಿಸುತ್ತಿದ್ದರು. ಈ ವೇಳೆ ಮಳಲಿ-ನಾರ್ಲಪದವು ರಸ್ತೆಯಲ್ಲಿ ತಂಡವೊಂದು ತಡೆದು ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ.
ಎಡಪದವು ನಿವಾಸಿಗಳಾದ ಸುಮಿತ್ ಭಂಡಾರಿ (21) ಮತ್ತು ರಜತ್ ನಾಯಕ್ (30) ಅವರು ಟಾಟಾ ಸುಮೋ ವಾಹನದಲ್ಲಿ ಬಂದು ಸತ್ತಾರ್ ಅವರ ಬೈಕಿಗೆ ಅಡ್ಡಗಟ್ಟಿದ್ದಾರೆ. ಈ ವೇಳೆ ಬೈಕ್ ನಿಯಂತ್ರಣ ತಪ್ಪಿ ಕೆಳಗೆ ಬಿದ್ದ ಪರಿಣಾಮ, ಸೈಲೆನ್ಸರ್ ತಾಗಿ ಬಾಲಕಿಯ ಕಾಲಿಗೆ ಸುಟ್ಟ ಗಾಯವಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಘಟನೆಯ ನಂತರ ಸತ್ತಾರ್ ಅವರು ಬೈಕ್ ಅನ್ನು ಅಲ್ಲೇ ಬಿಟ್ಟು ಓಡಿಹೋದರೆಂದು ಹೇಳಲಾಗಿದ್ದು, ಸ್ಥಳೀಯರು ಗಾಯಗೊಂಡ ಬಾಲಕಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಕಮಿಷನರ್ ಹೇಳಿದ್ದಾರೆ.
ಘಟನೆಗೆ ಸಂಬಂಧಿಸಿ ಪೊಲೀಸರು ಸುಮಿತ್ ಭಂಡಾರಿ ಹಾಗೂ ರಜತ್ ನಾಯಕ್ ಅವರನ್ನು ವಿಚಾರಣೆಗಾಗಿ ಠಾಣೆಗೆ ಕರೆಸಿಕೊಂಡು, ಪ್ರತ್ಯೇಕವಾಗಿ ವಿಚಾರಣೆ ನಡೆಸಿದ್ದಾರೆ. ವಿಚಾರಣೆಯಲ್ಲಿ ರಜತ್ ನಾಯಕ್ ತಾನು ವೈದ್ಯಕೀಯ ಪ್ರತಿನಿಧಿಯಾಗಿದ್ದು, ಮಹರ್ಷಿ ಚಿಕಿತ್ಸಾಲಯಕ್ಕೆ ಔಷಧಿ ನೀಡಲು ಹೋಗುತ್ತಿದ್ದೆ ಎಂದು ಹೇಳಿಕೆ ನೀಡಿದ್ದಾನೆ. ಆದರೆ ಪೊಲೀಸರು ಪರಿಶೀಲನೆ ನಡೆಸಿದಾಗ, ಸಂಬಂಧಿತ ಆಸ್ಪತ್ರೆಯಲ್ಲಿ ಯಾವುದೇ ಔಷಧಿ ತಲುಪಿಲ್ಲ ಎಂದು ಅಲ್ಲಿನ ವೈದ್ಯರಿಂದ ಸ್ಪಷ್ಟಪಡಿಸಿದ್ದಾರೆ ಎಂದು ಕಮಿಷನರ್ ಹೇಳಿದ್ದಾರೆ.
ಬಳಿಕ ಇನ್ನಷ್ಟು ವಿಚಾರಣೆ ನಡೆಸಿದಾಗ ಇಬ್ಬರೂ ತಾವು ದೇವಸ್ಥಾನಕ್ಕೆ ಹೋಗುತ್ತಿದ್ದೆವು ಎಂದು ಹೇಳಿಕೊಂಡಿದ್ದು, ಪ್ರತ್ಯೇಕವಾಗಿ ಪ್ರಶ್ನಿಸಿದಾಗ ಯಾವ ದೇವಸ್ಥಾನಕ್ಕೆ ಹೋಗುತ್ತಿದ್ದರು ಎಂದು ಸ್ಪಷ್ಟಪಡಿಸಲು ಅವರಿಗೆ ಸಾಧ್ಯವಾಗಿಲ್ಲ ಎಂದು ತಿಳಿಸಿದ್ದಾರೆ.
ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಬಾಲಕಿ, ನನ್ನ ತಂದೆಯನ್ನು ತಡೆದು ಕೈಗಳಿಂದ ಹೊಡೆದಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾಳೆ.
ಯಾವುದೇ ಬಿಲ್ ಇಲ್ಲದೆ ಗೋಮಾಂಸ ಸಾಗಣೆ ಮಾಡಿದ್ದ ಹಿನ್ನೆಲೆಯಲ್ಲಿ ಸತ್ತಾರ್ ವಿರುದ್ಧ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಳ್ಳುತ್ತಿದ್ದಾರೆ. ನೈತಿಕ ಪೊಲೀಸ್ ಗಿರಿ ನಡೆಸಿದ ಆರೋಪದಡಿ ಸುಮಿತ್ ಭಂಡಾರಿ ಮತ್ತು ರಜತ್ ನಾಯಕ್ ವಿರುದ್ಧ ಎಫ್ಐಆರ್ ದಾಖಲಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಘಟನೆಯ ಕುರಿತು ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.







