ಮಂಗಳೂರು | ಕದ್ರಿ ಹುತಾತ್ಮ ಯೋಧರ ಸ್ಮಾರಕದಲ್ಲಿ ಗೌರವಾರ್ಪಣೆ : ಸಂವಿಧಾನದ ಪೀಠಿಕೆ ವಾಚನ

ಮಂಗಳೂರು,ನ.26 : ಕದ್ರಿಯ ಹುತಾತ್ಮ ಯೋಧರ ಸ್ಮಾರಕದ ಬಳಿ ಹಾಗೂ ಕದ್ರಿ ಉದ್ಯಾನವನದಲ್ಲಿ ನಿರ್ಮಿಸಲಾದ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ವೇದಿಕೆಯಲ್ಲಿ ಬುಧವಾರ ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆ ಮಂಗಳೂರು ಇದರ ವತಿಯಿಂದ ಹಮ್ಮಿಕೊಂಡ ಅಸುವು ರಾಷ್ಟ್ರ ಸಮರ್ಪಿತ ಕಾರ್ಯಕ್ರಮ ಮತ್ತು ಸಂವಿಧಾನ ದಿನದ ಅಂಗವಾಗಿ ಯೋಧರ ಸ್ಮಾರಕದ ಬಳಿ ಹುತಾತ್ಮ ಯೋಧರನ್ನು ಸ್ಮರಿಸಿ ಪುಷ್ಪಗುಚ್ಛ ಇರಿಸಿ ಗೌರವ ಸಲ್ಲಿಸಲಾಯಿತು.
ಸಮಾರಂಭದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಜೈಬುನ್ನೀಸಾ ಸಂವಿಧಾನದ ಪೀಠಿಕೆಯನ್ನು ಬೋಧಿಸಿದರು.
ಬಳಿಕ ನಡೆದ ಸಮಾರಂಭದಲ್ಲಿ ಶಾಸಕ ವೇದವ್ಯಾಸ ಕಾಮತ್, ಸ್ಕೇಟಿಂಗ್ ರ‍್ಯಾಲಿಗೆ ಚಾಲನೆ ನೀಡಿ ಮಾತನಾಡಿ, ಮುಂಬಯಿಯಲ್ಲಿ 2008ರಲ್ಲಿ ನಡೆದ ಭಯೋತ್ಪಾದಕರ ದಾಳಿಯಲ್ಲಿ ಮಡಿದ ಯೋಧರಿಗೆ ಗೌರವ ಸಲ್ಲಿಸಿ ದೇಶದ ಸಂವಿಧಾನವನ್ನು ಸಮರ್ಪಿಸಿದ ನ.26 ದಿನದ ಮಹತ್ವದ ಬಗ್ಗೆ ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಸೈಂಟ್ ಅಲೋಶಿಯಸ್ ಕಾಲೇಜಿನ ರೆಕ್ಟರ್ ವಂ.ಮೆಲ್ವಿನ್ ಜೊಸೆಫ್ ಪಿಂಟೊ ವಹಿಸಿ ಮಾತನಾಡಿದರು.
ಸಮಾರಂಭದಲ್ಲಿ ಲೆಫ್ಟಿನೆಂಟ್ ಕರ್ನಲ್ ಆರ್.ಪಿ.ರೈ, ಕಮಾಂಡ ರ್ ಲಿಬನ್ ಎ ಜೋನ್ಸನ್, ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್., ನಿವೃತ್ತ ಶಿಕ್ಷಕ ಕೊಜಂಪಾಡಿ ಸುಬ್ರಹ್ಮಣ್ಯ ಭಟ್, ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆ ಮಂಗಳೂರು ಫ್ರಾಂಕ್ಲಿನ್ ಮೊಂತೆರೋ, ನಿವೃತ್ತ ಯೋಧರು ಹಾಗೂ ಯೋಧರ ಕುಟುಂಬದ ಸದಸ್ಯರು ಸೇರಿದಂತೆ ಎನ್ ಸಿಸಿ, ಎನ್ ಎಸ್ಎಸ್ ಸೇರಿದಂತೆ ವಿವಿಧ ಕಾಲೇಜುಗಳ ವಿದ್ಯಾರ್ಥಿ ಘಟಕದ ಪ್ರತಿನಿಧಿಗಳು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಭರತ ನಾಟ್ಯದ ಮೂಲಕ ವಿಶ್ವ ದಾಖಲೆ ನಿರ್ಮಿಸಿದ ವಿದುಷಿ ರೆಮೋನಾ ಇವೆಟ್ ಪಿರೇರಾ ಅವರ ನೃತ್ಯ ಕಾರ್ಯಕ್ರಮ ನಡೆಯಿತು.







