Mangaluru | ತಲ್ವಾರ್ ಹಿಡಿದು ನೃತ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಆರೋಪ : ಇಬ್ಬರ ಬಂಧನ

ಮಂಗಳೂರು: ತಲ್ವಾರ್ ಹಿಡಿದು ರೀಲ್ಸ್ ಮಾಡಿದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು ಬಂದರ್‌ನ ನಿವಾಸಿ ಅಮೀರ್ ಸುಹೇಲ್ ( 28 ), ಕಾವೂರು ಉರುಂದಾಡಿಗುಡ್ಡೆಯ ಸುರೇಶ (29 ) ಬಂಧಿತ ಆರೋಪಿಗಳು. ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್ ಖಾತೆಯಲ್ಲಿ ‘‘ Suresh psy ’’ ಎಂಬ ಹೆಸರಿನ ಫೇಸ್‌ಬುಕ್ ಖಾತೆ ಹೊಂದಿರುವ ಸುರೇಶ ಎಂಬಾತನು ಡಿ.13ರಂದು ತನ್ನ ಫೇಸ್‌ಬುಕ್ ಖಾತೆಯಲ್ಲಿ ಅಮೀರ್ ಸುಹೇಲನು ತಲ್ವಾರ್ ಹಿಡಿದು ಹಾಡಿನೊಂದಿಗೆ ಡ್ಯಾನ್ಸ್ ಮಾಡಿದ ವಿಡಿಯೋ ಮೇಲೆ VIBES ಮತು ಬಿಳಿ ಬಣ್ಣದ ಹಾರ್ಟ್ ಗುರುತಿನ ಚಿಹ್ನೆಯೊಂದಿಗೆ ಸ್ಟೋರಿಗೆ ಹಾಕಿ, ಸಾಮಾಜಿಕ ಜಾಲತಾಣದ ಮೂಲಕ ಸಾರ್ವಜನಿಕರಿಗೆ ಭಯ ಹುಟ್ಟಿಸುವ ರೀತಿಯಲ್ಲಿ ವರ್ತಿಸಿರುವುದಾಗಿ ಆರೋಪಿಸಲಾಗಿತ್ತು. ಈ ಸಂಬಂಧ ಅಮೀರ್ ಸುಹೇಲ್ ಹಾಗೂ ಸುರೇಶ ಎಂಬಾತನ ವಿರುದ್ದ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಡಿ.13 ರಂದು ಇಬ್ಬರು ಆರೋಪಿಗಳನ್ನು ಅವರು ರೀಲ್ಸ್ ಮಾಡಲು ಬಳಸಿದ ತಲ್ವಾರ್ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲು ಬಳಸಿದ ಮೊಬೈಲ್ ಫೋನ್‌ಗಳ ವಶಕ್ಕೆ ಪಡೆಯಲಾಗಿದೆ. ಮಂಗಳೂರು ಉತ್ತರ ಉಪವಿಭಾಗದ ಎಸಿಪಿ ಶ್ರೀಕಾಂತ್ ಕೆ. ಮಾರ್ಗದರ್ಶನದಲ್ಲಿ ಕಾವೂರು ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ರಾಘವೇಂದ್ರ ಎಂ. ಬೈಂದೂರು ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪೊಲೀಸ್ ಉಪನಿರೀಕ್ಷಕ ಮಲ್ಲಿಕಾರ್ಜುನ ಬಿರಾದಾರ ಇವರೊಂದಿಗ ಕಾವೂರು ಠಾಣಾ ಸಿಬ್ಬಂದಿ ಸಂಭಾಜಿ ಕದಂ, ಕೆಂಚನ ಗೌಡ, ಶರಣಪ್ಪ, ರಾಘವೇಂದ್ರ, ರಿಯಾಝ್ ಪಾಲ್ಗೊಂಡಿದ್ದರು.







