ಮಂಗಳೂರಿನ ಮಹಿಳೆಗೆ ಆನ್‌ಲೈನ್ ವಂಚನೆ: ಪ್ರಕರಣ ದಾಖಲು

ಮಂಗಳೂರು, ಅ.13: ವಿದೇಶಿ ಪೌಂಡ್ಸ್‌ಗಳನ್ನು ನೀಡುವುದಾಗಿ ಹೇಳಿ ಆನ್‌ಲೈನ್ ಮೂಲಕ 79,19,850 ರೂ. ಗಳನ್ನು ವರ್ಗಾಯಿಸಿಕೊಂಡು ಮಹಿಳೆಗೆ ವಂಚಿಸಿರುವ ಬಗ್ಗೆ ನಗರದ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾದ ವ್ಯಕ್ತಿಯೊಬ್ಬ ತನಗೆ ಹಾಗೂ ಇನ್ನಿಬ್ಬರು ಮಹಿಳೆಯರಿಗೆ ಆನ್‌ಲೈನ್ ಮೂಲಕ ವಂಚಿಸಿರುವುದಾಗಿ ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.
ಘಟನೆ ವಿವರ: ತಾನು ಓರ್ವ ಅಪರಿಚಿತ ವ್ಯಕ್ತಿಯೊಂದಿಗೆ ವಾಟ್ಸ್‌ಆ್ಯಪ್ ಮೂಲಕ ಸಂಪರ್ಕದಲ್ಲಿದ್ದೆ. ಆತ ವಿದೇಶಿ ಪೌಂಡ್ಸ್‌ಗಳನ್ನು ನೀಡುವುದಾಗಿ ತಿಳಿಸಿದ್ದ. ಬಳಿಕ ಮನೆಯ ವಿಳಾಸ ಪಡೆದುಕೊಂಡು ಆ.21ರಂದು ಮನೆಗೆ ಬಂದು ತನ್ನ ಹೆಸರು ಸ್ಟೀವ್ ಎಂದು ಪರಿಚಯಿಸಿ ಬಾಕ್ಸ್‌ವೊಂದನ್ನು ಕೊಟ್ಟು ಅದರಲ್ಲಿ ವಿದೇಶಿ ಡಾಲರ್‌ಗಳು ಇದೆ ಎಂದು ನಂಬಿಸಿದ್ದ. ಇದೆಲ್ಲ ಸತ್ಯವೆಂದು ನಂಬಿದ ತಾನು ಈ ವಿಷಯವನ್ನು ತನ್ನ ಪರಿಚಯದ ನೀರುಮಾರ್ಗ ಮೂಲದ ಮಹಿಳೆಗೆ ತಿಳಿಸಿದ್ದು ಆಕೆ ಕೂಡ ತನಗೆ ವಿದೇಶಿ ಪೌಂಡ್ಸ್ ಸಿಗಬಹುದು ಎನ್ನುವ ಆಸೆಯಿಂದ 25 ಲಕ್ಷ ರೂ. ಗಳನ್ನು ತನಗೆ ವರ್ಗಾಯಿಸಿದ್ದರು. ಮತ್ತೊಬ್ಬ ಮಹಿಳೆಯೂ 2 ಲಕ್ಷ ರೂ. ನೀಡಿದ್ದರು. ಹೀಗೆ ತನ್ನಲ್ಲಿರುವ ಹಣವನ್ನೂ ಸೇರಿಸಿ ಅಪರಿಚಿತ ವ್ಯಕ್ತಿಗೆ 79,19,850 ರೂ. ಗಳನ್ನು ವಿವಿಧ ಬ್ಯಾಂಕ್ ಖಾತೆಗಳಿಂದ ವರ್ಗಾಯಿಸಿದೆ. ಆದರೆ ಅಪರಿಚಿತ ವ್ಯಕ್ತಿ ಇನ್ನೂ
ಹೆಚ್ಚಿನ ಹಣವನ್ನು ವರ್ಗಾಯಿಸುವಂತೆ ಒತ್ತಾಯಿಸಿದಾಗ ಅನುಮಾನಗೊಂಡು ಮಕ್ಕಳ ಗಮನಕ್ಕೆ ತಂದಾಗ ತಾನು ಮೋಸ ಹೋಗಿರುವುದು ತಿಳಿದು
ಬಂದಿದೆ ಎಂದು ಹಣ ಕಳೆದುಕೊಂಡ ಮಹಿಳೆಯು ದೂರಿನಲ್ಲಿ ತಿಳಿಸಿದ್ದಾರೆ.





