ʼಎಡಲ್ ಗಿವ್ ಹುರುನ್ʼ ಟಾಪ್ 10 ಭಾರತದ ಮಹಿಳಾ ದಾನಿಗಳ ಪಟ್ಟಿಯಲ್ಲಿ ಮಂಗಳೂರಿನ ಶಬಾನಾ ಫೈಝಲ್

ಶಬಾನಾ ಫೈಝಲ್
ಮಂಗಳೂರು, ನ.8: ಮಂಗಳೂರಿನ ಮೂಲದ ಅನಿವಾಸಿ ಭಾರತೀಯ ಉದ್ಯಮಿ ಶಬಾನಾ ಫೈಝಲ್ ಅವರು ಎಡಲ್ ಗಿವ್ ಹುರುನ್ ಇಂಡಿಯಾ ಫಿಲಾಂಥ್ರಪಿ ಲಿಸ್ಟ್ 2025ರಲ್ಲಿ ಭಾರತದ ಟಾಪ್ 10 ಮಹಿಳಾ ದಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. 53ನೇ ವಯಸ್ಸಿನಲ್ಲೇ ಅತೀ ಕಿರಿಯ ಮಹಿಳಾ ದಾನಿಯಾಗಿ ಗುರುತಿಸಲ್ಪಟ್ಟಿರುವ ಅವರು, ತಮ್ಮ ಫೈಝಲ್ ಅಂಡ್ ಶಬಾನಾ ಫೌಂಡೇಶನ್ ಮುಖಾಂತರ 40 ಕೋಟಿ ರೂ. ದೇಣಿಗೆ ನೀಡಿದ್ದಾರೆ.
ಈ ಸಾಧನೆಯೊಂದಿಗೆ ಶಬಾನಾ ಫೈಝಲ್ ಅವರು ರೋಹಿಣಿ ನಿಲೇಕಣಿ, ಕಿರಣ್ ಮಜುಂದಾರ್ ಶಾ ಹಾಗೂ ಬಿನಾ ಶಾ ಮೊದಲಾದ, ದೇಶದ ಪ್ರಮುಖ ಮಹಿಳಾ ದಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಸಮಾಜಮುಖಿ ಕ್ಷೇತ್ರದಲ್ಲಿ ಮಹಿಳೆಯರ ಪ್ರಭಾವ ದಿನೇ ದಿನೇ ಹೆಚ್ಚುತ್ತಿರುವುದಕ್ಕೆ ಇದು ಮತ್ತೊಂದು ಸಾಕ್ಷಿಯಾಗಿದೆ.
ಮಂಗಳೂರು ಸಮೀಪದ ತುಂಬೆಯಲ್ಲಿ ಹುಟ್ಟಿ ಬೆಳೆದ ಶಬಾನಾ ಅವರು, ಬಿಎ ಗ್ರೂಪ್ ಸ್ಥಾಪಕ, ಸಾಮಾಜಿಕ ಧಾರ್ಮಿಕ ಧುರೀಣ ದಿವಂಗತ ಬಿ. ಅಹ್ಮದ್ ಹಾಜಿ ಮೊಹಿಯುದ್ದೀನ್ ಅವರ ಏಕೈಕ ಪುತ್ರಿ. ಸೇಂಟ್ ಆಗ್ನೆಸ್ ಕಾಲೇಜಿನಲ್ಲಿ ಮನೋವಿಜ್ಞಾನದಲ್ಲಿ ಪದವಿ ಪಡೆದ ಅವರು, ದುಬೈನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಷನ್ ಡಿಸೈನ್ ನಿಂದ ಫ್ಯಾಷನ್ ಡಿಸೈನ್ ಮತ್ತು ಮರ್ಚಂಡೈಸಿಂಗ್ನಲ್ಲಿ ಡಿಪ್ಲೊಮಾ ಪದವಿ ಪಡೆದಿದ್ದಾರೆ.
ಉಕ್ಕಿನ ಗಿರಣಿಗಳು ಹಾಗೂ ಡೇಟಾ ಎಂಟ್ರಿ ಮುಂತಾದ ಪುರುಷರೇ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ವೃತ್ತಿ ಆರಂಭಿಸಿದ ಶಬಾನಾ ಅವರು ಶ್ರಮ, ದೃಢಸಂಕಲ್ಪ ಹಾಗೂ ದೂರದೃಷ್ಟಿಯಿಂದ ಮುನ್ನಡೆದವರು. 1995ರಲ್ಲಿ ಐಷಾರಾಮಿ ಉತ್ಪನ್ನಗಳ ಚಿಲ್ಲರೆ ವ್ಯಾಪಾರ ಆರಂಭಿಸಿ ಉದ್ಯಮಿಯಾಗಿ ಮೊದಲ ಹೆಜ್ಜೆ ಇಟ್ಟ ಅವರು, ಬಳಿಕ ಪತಿ ಫೈಝಲ್ ಇ. ಕೊಟ್ಟಿಕೊಲ್ಲನ್ ಅವರೊಂದಿಗೆ ಯುಎಇಯ ಎಮಿರೇಟ್ಸ್ ಟೆಕ್ನೋ ಕಾಸ್ಟಿಂಗ್ (ETC) ಸಂಸ್ಥೆಯ ನಿರ್ವಹಣೆಯಲ್ಲಿ ತೊಡಗಿಕೊಂಡರು.
ಪತಿ ಫೈಝಲ್ ಇ. ಕೊಟ್ಟಿಕೊಲ್ಲನ್ ಜೊತೆ ಶಬಾನಾ ಫೈಝಲ್
ಪ್ರಸ್ತುತ ಅವರು ಸಿಂಗಾಪುರ ಮೂಲದ ಕೆಇಎಫ್ ಹೋಲ್ಡಿಂಗ್ಸ್ ಕಂಪೆನಿಯ ಉಪಾಧ್ಯಕ್ಷೆಯಾಗಿದ್ದು, ಮೂಲಸೌಕರ್ಯ, ಶಿಕ್ಷಣ, ಕೃಷಿ, ಲೋಹ ಮತ್ತು ಹಣಕಾಸು ಕ್ಷೇತ್ರಗಳಲ್ಲಿ ಕಂಪೆನಿಯ ಹೂಡಿಕೆಗಳನ್ನು ಸುಸ್ಥಿರ ನಿರ್ಮಾಣ ತಂತ್ರಜ್ಞಾನ ಮತ್ತು ನಾವೀನ್ಯತೆಯತ್ತ ಮುನ್ನಡೆಸುತ್ತಿದ್ದಾರೆ.
2007ರಲ್ಲಿ ಶಬಾನಾ ಮತ್ತು ಫೈಝಲ್ ದಂಪತಿ “Giving to Create Impact (ಉತ್ತಮ ಪರಿಣಾಮಕ್ಕಾಗಿ ದಾನ)” ಎಂಬ ಧ್ಯೇಯವಾಕ್ಯದಡಿ ಫೈಝಲ್ ಅಂಡ್ ಶಬಾನಾ ಫೌಂಡೇಶನ್ ಸ್ಥಾಪಿಸಿದರು. ಶಿಕ್ಷಣ, ಯುವಜನರ ಕಲ್ಯಾಣ, ಆರೋಗ್ಯ, ಸಮುದಾಯ ಸಂಪರ್ಕ, ಮಾನವೀಯ ನೆರವು ಹಾಗೂ ಕಲೆ ಮುಂತಾದ ಕ್ಷೇತ್ರಗಳಲ್ಲಿ ಅನೇಕ ಉದ್ದೇಶಿತ ಯೋಜನೆಗಳನ್ನು ಈ ಪ್ರತಿಷ್ಠಾನವು ಯಶಸ್ವಿಯಾಗಿ ಕೈಗೊಂಡಿದೆ.
ಎಡಲ್ ಗಿವ್ ಫೌಂಡೇಶನ್ ಮತ್ತು ಹುರುನ್ ರಿಸರ್ಚ್ ಇನ್ಸ್ಟಿಟ್ಯೂಟ್ ಬಿಡುಗಡೆ ಮಾಡಿದ 12ನೇ ಆವೃತ್ತಿಯ ವರದಿ ಪ್ರಕಾರ, ಕಳೆದ ಮೂರು ವರ್ಷಗಳಲ್ಲಿ ದೇಶದ 191 ದಾನಿಗಳು ಒಟ್ಟಾಗಿ 10,380 ಕೋಟಿ ರೂ. ದೇಣಿಗೆ ನೀಡಿದ್ದಾರೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ 85% ಏರಿಕೆಯಾಗಿದೆ. ಶಿಕ್ಷಣ ಕ್ಷೇತ್ರಕ್ಕೇ ಅತೀ ಹೆಚ್ಚು ಅಂದರೆ 4,166 ಕೋಟಿ ರೂ. ದೇಣಿಗೆ ನೀಡಲಾಗಿದೆ. ದೇಣಿಗೆ ನೀಡುವುದಲ್ಲಿ ಮೊದಲ ಶೇ.28 ಪಾಲು ಹೊಂದಿರುವ ಮುಂಬೈ ಮೊದಲ ಸ್ಥಾನದಲ್ಲಿದೆ. ಹೊಸದಿಲ್ಲಿ ಮತ್ತು ಬೆಂಗಳೂರು ದೇಣಿಗೆ ನೀಡುವುದರಲ್ಲಿ ನಂತರದ ಸ್ಥಾನದಲ್ಲಿವೆ.
ಸಣ್ಣ ಪಟ್ಟಣದ ಹಿನ್ನೆಲೆಯಿಂದ ಬಂದು ಇಂದು ಜಾಗತಿಕ ವೇದಿಕೆಯವರೆಗೆ ಶಬಾನಾ ತಲುಪಿದ್ದಾರೆ. ನಾಲ್ಕು ಮಕ್ಕಳಾದ ಸೋಫಿಯಾ, ಸಾರಾ, ಝಕರಿಯಾ ಮತ್ತು ಝರಿನಾ ಅವರ ತಾಯಿಯಾದ ಶಬಾನಾ ಫೈಝಲ್ ಅವರು, ಕುಟುಂಬ, ಉದ್ಯಮ ಮತ್ತು ಸಾಮಾಜಿಕ ಸೇವೆಗಳ ಮೂಲಕ ಮಾದರಿಯಾಗಿದ್ದಾರೆ.







