ಮೇ 30 : ‘ಸುಹಾನಾ ಸಫರ್ , ಬಿನಾಕಾ ಗೀತ್‌ಮಾಲಾ ಸಂಗೀತ ಕಾರ್ಯಕ್ರಮ

ಮಂಗಳೂರು, ಮೇ 27: ಲಯನ್ಸ್ 317ಡಿ ಮತ್ತು ಲಯನ್ಸ್ ಕ್ಲಬ್ ಮಂಗಳೂರು ಇವುಗಳ ಸಹಯೋಗದೊಂದಿಗೆ ಮೇ 30ರಂದು ಸಂಜೆ ಸಂಜೆ 5:45ಕ್ಕೆ ಕದ್ರಿ ರಸ್ತೆಯ ಸುಜೀರ್ ಸಿ.ವಿ. ನಾಯಕ್ ಸಭಾಂಗಣದಲ್ಲಿ ಅತ್ಯಂತ ಪ್ರತಿಷ್ಠಿತ ‘ಸುಹಾನಾ ಸಫರ್ ಮತ್ತು ಬಿನಾಕಾ ಗೀತ್‌ಮಾಲಾ’ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಲಯನ್ಸ್ ಪ್ರಕೋಷ್ಟದ ಜಿಲ್ಲಾ ಅಧ್ಯಕ್ಷ ಕುಂಬ್ಳೆ ನರಸಿಂಹ ಪ್ರಭು ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.
ಈ ಕಾರ್ಯಕ್ರಮವನ್ನು ಡೈಜಿವರ್ಲ್ಡ್ ಸಂಸ್ಥೆಯ ಸಂಸ್ಥಾಪಕ ಹಾಗೂ ಪ್ರಧಾನ ಸಂಪಾದಕರಾದ ವಾಲ್ಟರ್ ನಂದಳಿಕೆ ಅವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಲಯನ್ಸ್ ಜಿಲ್ಲೆ 317ಡಿ ಪ್ರಥಮ ಉಪ ಜಿಲ್ಲಾ ಗವರ್ನರ್ (ನಿಯೋಜಿತ) ಎಂ. ಗೋವರ್ಧನ್ ಶೆಟ್ಟಿ ಭಾಗವಹಿಸಲಿದ್ದಾರೆ.
ಗೌರವಾನ್ವಿತ ಅತಿಥಿಗಳಾಗಿ ಅಚಲ್ ಗ್ರೂಪ್‌ನ ಅಧ್ಯಕ್ಷ ಗಿರಿಧರ್ ಪ್ರಭು, ಯೆನೆಪೋಯ ವೈದ್ಯಕೀಯ ಕಾಲೇಜಿನ ಸರ್ಜರಿ ವಿಭಾಗದ ಪ್ರಾಧ್ಯಾಪಕ ಡಾ. ಕುಂಬ್ಳೆ ಅನಂತ್ ಪ್ರಭು, ಪ್ರಸಾದ್ ನೇತ್ರಾಲಯ ಸಮೂಹ ಸಂಸ್ಥೆಗಳ ವೈದ್ಯಕೀಯ ನಿರ್ದೇಶಕ ಡಾ. ಕೃಷ್ಣಪ್ರಸಾದ್ ಕೂಡ್ಲು, ಮಂಗಳೂರು ಜಿ.ಎಸ್.ಬಿ ಸೇವಾ ಸಂಘದ ಅಧ್ಯಕ್ಷ ಡಾ. ಕೆ. ಮೋಹನ್ ಪೈ, ಆರ್‌ವಿಕೆ ಸ್ಟೀಲ್ ಆ್ಯಂಡ್ ಅಲಾಯ್ಸ್ ನಿರ್ದೇಶಕ ರಾಘವೇಂದ್ರ ಕುಡ್ವ ಹಾಗೂ ಕುಂಬ್ಳೆ ಗ್ರೂಪ್‌ನ ಸಿಇಒ ಕುಂಬ್ಳೆ ವಿಘ್ನೇಶ್ ಪ್ರಭು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಲಯನ್ಸ್ ಪ್ರಕೋಷ್ಟದ ಸಾಧನೆ : ಲಯನ್ಸ್ ಜಿಲ್ಲೆ 317ಡಿ ಅಡಿಯಲ್ಲಿ ಉದ್ಯಮಶೀಲತೆ, ಸ್ಟಾರ್ಟ್-ಅಪ್ ಇಂಡಿಯಾ ಮತ್ತು ಎಂಎಸ್‌ಎಂಇ ಯೋಜನೆಗಳನ್ನು ಪ್ರೋತ್ಸಾಹಿಸಲು ‘ಲಯನ್ಸ್ ಪ್ರಕೋಷ್ಟ’ ಎಂಬ ಯೋಜನೆ ರೂಪಿಸಲಾಗಿದೆ. ಇದು ಈ ವರ್ಷದ ಇದರ 4ನೇ ಪ್ರಮುಖ ಕಾರ್ಯಕ್ರಮವಾಗಿದೆ. ಈ ಹಿಂದೆ ದೇಶಭಕ್ತಿ ಗೀತೆಗಳ ’ಆಜಾದಿ ಕಾ ಮಹೋತ್ಸವ’, ಎಸ್‌ಡಿಎಂ ಕಾಲೇಜಿನಲ್ಲಿ ‘ಭಾರತ್ 2050 ರೋಡ್‌ಮ್ಯಾಪ್’ ಮತ್ತು ಜನವರಿ 9 ರಂದು ಮತ್ತೊಂದು ಸಂಗೀತ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು.
ವಿಶೇಷ ಸಂಗೀತ ಗೌರವ ಮತ್ತು ಕಲಾವಿದರು: ಹಳೆಯ ಹಿಂದಿ ಚಲನಚಿತ್ರ ಗೀತೆಗಳನ್ನು ಜನಪ್ರಿಯಗೊಳಿಸುವ ಉದ್ದೇಶದಿಂದ ‘ಸುಹಾನಾ ಸಫರ್’ ಕಾರ್ಯಕ್ರಮವನ್ನು ನಡೆಸಿಕೊಂಡು ಬರಲಾಗುತ್ತಿದೆ. ಇದು 9ನೇ ಕಾರ್ಯಕ್ರಮವಾಗಿದ್ದು, ರೇಡಿಯೋ ಸಿಲೋನ್‌ನ ಖ್ಯಾತ ನಿರೂಪಕ ದಿ. ಅಮೀನ್ ಸಯಾನಿ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ 1954 ರಿಂದ 1979ರ ವರೆಗಿನ ಬಿನಾಕಾ ಗೀತ್‌ಮಾಲಾದ ಸೂಪರ್ ಹಿಟ್ ಹಾಡುಗಳನ್ನು ಪ್ರಸ್ತುತಪಡಿಸಲಾಗುತ್ತಿದೆ ಎಂದು ನರಸಿಂಹ ಪ್ರಭು ತಿಳಿಸಿದರು.
ವಿಶ್ವ ವೈದ್ಯರ ಸಂಗೀತ ಸ್ಪರ್ಧೆಯ ಸೀಸನ್ 2ರ ವಿಜೇತರಾದ ಡಾ. ಕುಂಬ್ಳೆ ಅನಂತ್ ಪ್ರಭು ಮತ್ತು ಜೀ ಕನ್ನಡ ಸರಿಗಮಪ ತೀರ್ಪುಗಾರರಾದ ಮಾಲಿನಿ ಕೇಶವ್ ಪ್ರಸಾದ್ ಹಾಗೂ ಇತರ ಪ್ರತಿಭಾವಂತ ಗಾಯಕರು ಮುಖ್ಯ ಧ್ವನಿಯಾಗಲಿದ್ದಾರೆ. ಮುರಳೀಧರ್ ಕಾಮತ್ ಮತ್ತು ತಂಡದವರಿಂದ ಲೈವ್ ಮ್ಯೂಸಿಕ್ ಇರಲಿದ್ದು, ‘ಟೀಮ್ ಉಪಾಸನಾ’ ಮಂಗಳೂರು ತಂಡದಿಂದ ಆಕರ್ಷಕ ಚಲನಚಿತ್ರ ನೃತ್ಯ ಪ್ರದರ್ಶನ ಆಯೋಜಿಸಲಾಗಿದೆ.
ನೂರು ವರ್ಷದ ಉದ್ಯಮಕ್ಕೆ ಗೌರವ:ಲಯನ್ಸ್ ಪ್ರಕೋಷ್ಟದ ಸಾಮಾಜಿಕ ಉಪಕ್ರಮದ ಭಾಗವಾಗಿ, ಕರಾವಳಿ ಕರ್ನಾಟಕದಲ್ಲಿ 100 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಉದ್ಯಮ ಸಂಸ್ಥೆಯನ್ನು ಇದೇ ಮೊದಲ ಬಾರಿಗೆ ಗೌರವಿಸಲಾಗುತ್ತಿದೆ. ಈ ಬಾರಿ 100 ವರ್ಷಗಳ ಪರಂಪರೆ ಹೊಂದಿರುವ ‘ಮೆಸ್ಸರ್ಸ್ ಸಿಟಿ ಬೇಕರಿ’ ಸಂಸ್ಥೆಯನ್ನು ಸನ್ಮಾನಿಸಲಾಗುವುದು. ಸಂಸ್ಥೆಯ 2ನೇ ತಲೆಮಾರಿನ ಉದ್ಯಮಿ ರವಳ್‌ನಾಥ್ ಪ್ರಭು ಹಾಗೂ 3ನೇ ತಲೆಮಾರಿನ ಉದ್ಯಮಿ ಪ್ರಕಾಶ್ ಪ್ರಭು ಈ ಗೌರವವನ್ನು ಸ್ವೀಕರಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಸುಮಾರು 450ಕ್ಕೂ ಹೆಚ್ಚು ಲಯನ್ಸ್ ಸದಸ್ಯರು, ಸಂಗೀತ ಪ್ರೇಮಿಗಳು ಮತ್ತು ಹಿರಿಯ ನಾಗರಿಕರು ಭಾಗವಹಿಸಲಿದ್ದಾರೆ. ಕಾರ್ಯಕ್ರಮಕ್ಕೆ ಪ್ರವೇಶವು ಕೇವಲ ‘ಪಾಸ್’ ಮೂಲಕ ಮಾತ್ರ ಇರಲಿದ್ದು, ಆಸಕ್ತರು ಪಾಸ್‌ಗಳಿಗಾಗಿ 9845081897 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಎಂದು ಲಯನ್ಸ್ ಪ್ರಕೋಷ್ಟದ ಜಿಲ್ಲಾ ಅಧ್ಯಕ್ಷ ಕುಂಬ್ಳೆ ನರಸಿಂಹ ಪ್ರಭು ತಿಳಿಸಿದರು.
ಲಯನ್ಸ್ ಕ್ಲಬ್ ಮಂಗಳೂರು ಅಧ್ಯಕ್ಷ ಎಂ. ರಾಜೇಶ್ ಕಾಮತ್ ಮತ್ತು ಲಯನ್ಸ್ ಡೈರೆಕ್ಟರಿ ಸಹ-ಸಂಪಾದಕ ವೆಂಕಟೇಶ್ ಬಾಳಿಗಾ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.






