ವಿದ್ಯಾರ್ಥಿಗಳು ಶಿಕ್ಷಣದ ಜೊತೆ ಕೌಶಲ್ಯಾಭಿವೃದ್ಧಿಗೆ ಒತ್ತು ನೀಡಲಿ: ಯು.ಟಿ. ಖಾದರ್
ಮೀಫ್ ವಾರ್ಷಿಕ ಸಮಾವೇಶ ಮತ್ತು ಎಕ್ಸಲೆನ್ಸ್ ಅವಾರ್ಡ್ ಸಮಾರಂಭ

ಮಂಗಳೂರು: ಗುರುಹಿರಿಯರನ್ನು ಗೌರವಿಸುವ ಗುಣವನ್ನು ವಿದ್ಯಾರ್ಥಿಗಳು ಬದುಕಿನಲ್ಲಿ ಅಳವಡಿಸಿಕೊಳ್ಳುವುದರೊಂದಿಗೆ ಕೌಶಲ್ಯ ಅಭಿವೃದ್ಧಿಗೆ ಕಡೆಗೆ ವಿದ್ಯಾರ್ಥಿ ದೆಸೆಯಲ್ಲೇ ಗಮನ ಹರಿಸಿದಾಗ ಜೀವನದಲ್ಲಿ ಯಾವುದೇ ಕ್ಷೇತ್ರದಲ್ಲೂ ಯಶಸ್ವಿಯಾಗಲು ಸಾಧ್ಯ ಎಂದು ಎಂದು ಸ್ಪೀಕರ್ ಯು.ಟಿ. ಖಾದರ್ ಹೇಳಿದ್ದಾರೆ.
ಜೆಪ್ಪಿನಮೊಗರು ಪ್ರೆಸ್ಟೇಜ್ ಇಂಟರ್ ನ್ಯಾಶನಲ್ ಸ್ಕೂಲ್ ಆಡಿಟೋರಿಯಂನಲ್ಲಿ ಶನಿವಾರ ನಡೆದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಮುಸ್ಲಿಮ್ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ಮೀಫ್) ಇದರ ವಾರ್ಷಿಕ ಸಮಾವೇಶ ಮತ್ತು ಎಕ್ಸಲೆನ್ಸ್ ಅವಾರ್ಡ್ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಶಿಕ್ಷಣದಿಂದ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಸಮುದಾಯ ಉನ್ನತ ಸ್ಥಾನಕ್ಕೇರಲು ಅವರಿಗೆ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯಬೇಕಾಗಿದೆ. ಮೀಫ್ ಶಿಕ್ಷಣ ಸಂಸ್ಥೆಗಳ ಒಕ್ಕೂಟವು ಒಳ್ಳೆಯ ಶಿಕ್ಷಣ ನೀಡುವುದರೊಂದಿಗೆ ಜಿಲ್ಲೆಯಲ್ಲಿ ಸೌಹಾರ್ದ ವಾತಾವರಣವನ್ನು ಒದಗಿಸುತ್ತಿದೆ ಎಂದು ಶ್ಲಾಘಿಸಿದರು.
'ಶೈಕ್ಷಣಿಕ ಬೆಳವಣಿಗೆಗೆ ದಕ್ಷಿಣ ಕನ್ನಡ ಮಾದರಿಯಾಗಿದೆ': ಮುಖ್ಯ ಅತಿಥಿಯಾಗಿ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಅಲ್ಪಸಂಖ್ಯಾತರ ಶೈಕ್ಷಣಿಕ ಬೆಳವಣಿಗೆಗೆ ದಕ್ಷಿಣ ಕನ್ನಡ ಮಾದರಿಯಾಗಿದೆ. ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾದ ದ.ಕ.ಜಿಲ್ಲೆಯಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿರುವುದಕ್ಕೆ ಹೆಮ್ಮೆಯಿದೆ ಎಂದು ಅಭಿಪ್ರಾಯಪಟ್ಟರು.
ದ.ಕ.ಜಿಲ್ಲೆ ಶಿಕ್ಷಣಕ್ಕೆ ಕೇಂದ್ರ ಆಗಿದೆ. ಇಲ್ಲಿ ಅನೇಕ ಉತ್ತಮ ವಿದ್ಯಾ ಸಂಸ್ಥೆಗಳು ಇವೆ. ಹೀಗಾಗಿ ಜನರು ಶಿಕ್ಷಣಕ್ಕಾಗಿ ಈ ಜಿಲ್ಲೆಗೆ ಎಲ್ಲಾ ಕಡೆಯಿಂದ ಬರುತ್ತಿದ್ದಾರೆ ಎಂದರು. ಶಿಕ್ಷಣದೊಂದಿಗೆ ಕಾನೂನು ಸುವ್ಯಸ್ಥೆಗೂ ಹೆಚ್ಚು ಒತ್ತು ನೀಡಬೇಕಾಗಿದೆ. ವಿದ್ಯಾರ್ಥಿಗಳಿಗೆ ಜಿಲ್ಲೆಯಲ್ಲಿ ಭಯರಹಿತವಾದ ವಾತಾವರಣ ಅಗತ್ಯ. ಈ ನಿಟ್ಟಿನಲ್ಲಿ ನಾವು ಗಮನ ಹರಿಸಿದ್ದೇವೆ. ವಿದ್ಯಾರ್ಥಿಗಳ ಮೇಲೆ ದಾಳಿಯಾಗುವುದನ್ನು ಸರಕಾರ ಸಹಿಸುವುದಿಲ್ಲ. ಅವರಿಗೆ ಜಿಲ್ಲಾಡಳಿತ ರಕ್ಷಣೆ ನೀಡುತ್ತದೆ ಎಂದು ಹೇಳಿದ್ದಾರೆ.
ಡ್ರಗ್ಸ್ ಸರಬರಾಜು ಮಾಡುವವರ ವಿರುದ್ಧ ಪೊಲೀಸ್ ಇಲಾಖೆ ನಿಗಾವಹಿಸಿದೆ. ವಿದ್ಯಾರ್ಥಿಗಳಿಗೆ ಮಾದಕ ಪದಾರ್ಥಗಳ ಸೇವೆನೆಯ ದುಷ್ಪರಿಣಾಮದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಾಗಿದೆ. ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಇನ್ನಷ್ಟು ಬಲಿಷ್ಠವಾಗಬೇಕಾಗಿದೆ. ಈ ಒಕ್ಕೂಟದ ವತಿಯಿಂದ ಎಲ್ಲ ಜಿಲ್ಲೆಗಳಲ್ಲೂ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಲು ಸರಕಾರ ಸಾಧ್ಯವಿರುವ ನೆರವು ನೀಡಲಿದೆ . ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧೀನದಲ್ಲಿರುವ ಶಾಲಾ ಕಾಲೇಜುಗಳ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸುವುದಾಗಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
'ನಾನು ಮೇಷ್ಟ್ರ ಮೊಮ್ಮಗ': ನನ್ನ ತಂದೆ ಮುಖ್ಯಮಂತ್ರಿಯಾಗಿದ್ದರು. ಅಜ್ಜ ಮೇಷ್ಟ್ರು ಆಗಿದ್ದರು. ಹೀಗಾಗಿ ನಾನು ಮೇಷ್ಟ್ರ ಮೊಮ್ಮಗ ಆಗಿದ್ದೇನೆ. ತಂದೆ ಗುಂಡೂರಾವ್ ಮುಖ್ಯಮಂತ್ರಿಯಾಗಿದ್ದಾಗ ಶಿಕ್ಷಕರ ಕಲ್ಯಾಣಕ್ಕಾಗಿ ಹೆಚ್ಚು ಒತ್ತು ನೀಡಿದ್ದರು. ವಯಸ್ಸಾಗಿದ್ದರೂ ಅರ್ಹತೆ ಇದ್ದವರಿಗೆ ಶಿಕ್ಷಕ ಹುದ್ದೆ ಕೊಡಿಸಿದ್ದರು. ಇವತ್ತು ಆನೇಕ ಊರುಗಳಿಗೆ ಹೋದಾಗ ಮೇಷ್ಟ್ರುಗಳು ಅವರ ಉಪಕಾರವನ್ನು ಸ್ಮರಿಸುತ್ತಿದ್ದಾರೆ. ಅವರು ಮಾಡಿದ ಪ್ರತಿಫಲವನ್ನು ತಾನು ಅನುಭವಿಸುತ್ತಿದ್ದೇನೆ ಎಂದು ದಿನೇಶ್ ಗುಂಡೂರಾವ್ ಸ್ಮರಿಸಿದರು.
ಇದು ಜಿಲ್ಲೆಯಲ್ಲಿ ನನ್ನ ಮೊದಲ ಅಧಿಕೃತ ಸಮಾರಂಭ: ಮಧು ಬಂಗಾರಪ್ಪ
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಮಾತನಾಡಿ ಮೀಫ್ ಸ್ಥಾಪನೆಗೊಂಡು 33 ವರ್ಷಗಳು ಆಯಿತು. ಆದರೆ ನಾನು ಈ ಸ್ಥಾನಕ್ಕೆ ಬಂದು ಕೇವಲ 40 ದಿನಗಳು ಆಗಿದೆ. ಈ ಅವಧಿಯಲ್ಲಿ ಬಹಳಷ್ಟು ತೀರ್ಮಾನ ಆಗಿದೆ. ನಾನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದೇ ಮೊದಲ ಅಧಿಕೃತ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದರು.
ಮೀಫ್ ನ ಗೌರವಾಧ್ಯಕ್ಷ ಉಮರ್ ಟೀಕೆ ದಿಕ್ಚೂಚಿ ಭಾಷಣ ಮಾಡಿದರು. ಮೀಫ್ ಗೌರವ ಸಲಹೆಗಾರ ಸೈಯದ್ ಮೊಹಮ್ಮದ್ ಬ್ಯಾರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಬೆಂಗಳೂರು ಪ್ರೆಸಿಡೆನ್ಸಿ ವಿವಿ ಕುಲಪತಿ ಡಾ.ನಿಸ್ಸಾರ್ ಅಹ್ಮದ್, ಕಣಚೂರು ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಸಂಸ್ಥೆಯ ಸ್ಥಾಪಕರು ಮತ್ತು ಆಡಳಿತ ನಿರ್ದೇಶಕ ಡಾ.ಯು.ಕೆ.ಮೋನು, ಪ್ರೆಸ್ಟೀಜ್ ಇಂಟರ್ ನ್ಯಾಶನಲ್ ಸ್ಕೂಲ್ ಆ್ಯಂಡ್ ಪಿಯು ಕಾಲೇಜಿನ ಚೇರ್ಮನ್ ಹೈದರ್ ಅಲಿ ಕೆ, ನ್ಯಾಷನಲ್ ಟ್ರೈನರ್ ಪ್ರೊ. ರಾಜೇಂದ್ರ ಭಟ್ ಕಾರ್ಕಳ ಮುಖ್ಯ ಅತಿಥಿಯಾಗಿದ್ದರು.
ಮೀಫ್ ನ ಪ್ರಧಾನ ಕಾರ್ಯದರ್ಶಿ ಬಿ.ಎ.ನಝೀರ್, ಕೋಶಾಧಿಕಾರಿ ಅಬ್ದುಲ್ ರಹಿಮಾನ್, ಶಬೀ ಅಹ್ಮದ್ ಖಾಝಿ , ಮುಸ್ತಫಾ ಸುಳ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಶೇ 100 ಫಲಿತಾಂಶ ದಾಖಲಿಸಿರುವ ಶಿಕ್ಷಣ ಸಂಸ್ಥೆಗಳಿಗೆ ಪ್ರಶಸ್ತಿ ವಿತರಿಸಲಾಯಿತು. ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಗರಿಷ್ಠ ಅಂಕ ಪಡೆದಿರುವ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ರಿಯಾಝ್ ಅಹ್ಮದ್ ಮೀಫ್ ವಾರ್ಷಿಕ ಪ್ರಶಸ್ತಿ ವಿಜೇತರ ವಿವರ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಮೀಫ್ ಅಧ್ಯಕ್ಷ ಮೂಸಬ್ಬ ಪಿ ಬ್ಯಾರಿ ಸ್ವಾಗತಿಸಿದರು, ಉಪಾಧ್ಯಕ್ಷ ಬಿ.ಎ. ಮುಮ್ತಾಝ್ ಅಲಿ ವಂದಿಸಿದರು. ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ ಕಾರ್ಯಕ್ರಮ ನಿರೂಪಿಸಿದರು.