ಮೀಫ್ ಪ್ರಯತ್ನ ಫಲಶ್ರುತಿ: ಬೆಂಗಳೂರಿನ ಪ್ರೆಸಿಡೆನ್ಸಿ ಯೂನಿವರ್ಸಿಟಿಯಲ್ಲಿ 12 ಅರ್ಹ ಬಡ ವಿದ್ಯಾರ್ಥಿಗಳಿಗೆ ಉಚಿತ ಇಂಜಿನಿಯರಿಂಗ್ ಸೀಟ್

ಮಂಗಳೂರು : ದ.ಕ. ಮತ್ತು ಉಡುಪಿ ಜಿಲ್ಲೆಗಳ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ಮೀಫ್) ನಿಯೋಗ ಗೌರವಾಧ್ಯಕ್ಷ ಉಮ್ಮರ್ ಟೀಕೆ ಅವರ ನೇತೃತ್ವದಲ್ಲಿ ಇತ್ತೀಚೆಗೆ ಬೆಂಗಳೂರಿನ ಪ್ರೆಸಿಡೆನ್ಸಿ ಯುನಿವರ್ಸಿಟಿ ಚಾನ್ಸಲರ್ ದ.ಕ. ಮೂಲದ ಡಾ. ನಿಸಾರ್ ರನ್ನು ಭೇಟಿಯಾಗಿ ಅರ್ಹ, ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉಚಿತ ಇಂಜಿನಿಯರಿಂಗ್ ಸೀಟು ಮತ್ತು ಹಾಸ್ಟೆಲ್ ವೆಚ್ಚವನ್ನು ಭರಿಸಿ ವಿದ್ಯಾರ್ಥಿಗಳಿಗೆ ನೆರವಾಗಬೇಕೆಂದು ಕೋರಲಾಗಿತ್ತು.
ಮನವಿಗೆ ಸ್ಪಂದಿಸಿದ ಡಾ. ನಿಸಾರ್ ಅವರು ಉಚಿತ ಸೀಟ್ ಗಳನ್ನು ಘೋಷಿಸಿದ್ದರು, ದೇಶದ ಪ್ರತಿಷ್ಠಿತ ಯುನಿವರ್ಸಿಟಿ ಮತ್ತು 100% ಉದ್ಯೋಗದ ಭರವಸೆಯನ್ನು ದೇಶ ವಿದೇಶದ 150ಕ್ಕೂ ಮಿಕ್ಕಿದ ಕಂಪನಿಗಳೊಂದಿಗೆ ನೇರ ನೇಮಕಾತಿಯ ಅವಕಾಶ ಹೊಂದಿದ ಸಂಸ್ಥೆ ಪ್ರೆಸಿಡೆನ್ಸಿಯಲ್ಲಿ ಪ್ರಸಕ್ತ ಪುತ್ತೂರು, ಬಂಟ್ವಾಳ, ಉಡುಪಿ ವ್ಯಾಪ್ತಿಯ ವರ್ಷದಲ್ಲಿ 12 ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ಅವಕಾಶ ದೊರೆತಿದ್ದು, ಪ್ರೆಸಿಡೆನ್ಸಿ ಯುನಿವರ್ಸಿಟಿ ಸಂಪೂರ್ಣ ವೆಚ್ಚವನ್ನು ಉಚಿತವಾಗಿ ಭರಿಸಲಿದೆ.
ಇದರಿಂದ ದೇಶದ ಪ್ರತಿಷ್ಠಿತ ಪ್ರೆಸಿಡೆನ್ಸಿಯಲ್ಲಿ ವಿದ್ಯಾಭ್ಯಾಸ ಕನಸಾಗಿದ್ದ ಬಡ ವಿದ್ಯಾರ್ಥಿಗಳ ಕನಸನ್ನು ನನಸು ಮಾಡಿದ ಡಾ. ನಿಸಾರ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದು ಮೀಫ್ ಅಧ್ಯಕ್ಷ ಮೂಸಬ್ಬ ಪಿ ಬ್ಯಾರಿ, ಪ್ರಧಾನ ಕಾರ್ಯದರ್ಶಿ ರಿಯಾಝ್ ಟ್ಯಾಲೆಂಟ್, ಸಂಯೋಜಕ ಶಾರಿಕ್ ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.