ಮರ್ಸಿಡಿಸ್ ಬೆಂಝ್ ಕಾರು ಅಕ್ರಮ ನೊಂದಣಿ : ಆರ್‌ಟಿಒ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಪೊಲೀಸರಿಂದ ಪ್ರಕರಣ ದಾಖಲು

ಉಡುಪಿ, ನ.21: ವಿದೇಶದಿಂದ ಆಮದು ಮಾಡಿಕೊಂಡ ಐಷಾರಾಮಿ ಮರ್ಸಿಡಿಸ್ ಬೆಂಝ್ ಕಾರನ್ನು ಅಕ್ರಮವಾಗಿ ನೋಂದಣಿ ಮಾಡುವ ಮೂಲಕ ಸರಕಾರಕ್ಕೆ ಕೋಟ್ಯಾಂತರ ರೂ. ರಸ್ತೆ ತೆರಿಗೆ ನಷ್ಟ ಉಂಟು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ಲೋಕಾಯುಕ್ತ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.
ಈ ಕುರಿತು ಪತ್ರಿಕೆಯಲ್ಲಿ ಬಂದ ವರದಿಯ ಆಧಾರದಲ್ಲಿ ಲೋಕಾಯುಕ್ತ ಪೊಲೀಸರು ಮಾಹಿತಿಗಳನ್ನು ಕಲೆ ಹಾಕಿ, ಸಂಬಂಧಪಟ್ಟ ದಾಖಲಾತಿಗಳನ್ನು ಪಡೆದು ಉಡುಪಿ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ (ಆರ್.ಟಿ.ಓ) ದಾಖಲೆಗಳನ್ನು ಪರಿಶೀಲಿಸಿದರು.
ತನಿಖೆಯ ವೇಳೆ ಸುಮಾರು 2 ಕೋಟಿ ರೂ. ಮೌಲ್ಯದ ಮರ್ಸಿಡಿಸ್ ಬೆಂಝ್ ಕಾರಿನ ಮೂಲ ಮಾಡೆಲ್ ಮಾಹಿತಿಯನ್ನು ಬದಲಾಯಿಸಿ, ಅದೇ ಕಂಪನಿಯ ಕಡಿಮೆ ಬೆಲೆಯ ಕಾರಿನ ಮಾಡೆಲ್ ಎಂದು ದಾಖಲೆಗಳಲ್ಲಿ ತಿದ್ದುಪಡಿ ಮಾಡಿರುವುದು ಕಂಡುಬಂದಿದೆ. 2017ನೇ ಮಾಡೆಲ್ ನ ಸದ್ರಿ ಕಾರನ್ನು ಫೆಬ್ರವರಿ 2025ರಂದು ನೋಂದಣಿ ಮಾಡುವ ಮೂಲಕ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಸರಕಾರಕ್ಕೆ ಲಕ್ಷಾಂತರ ರೂಪಾಯಿ ತೆರಿಗೆ ಹಣ ನಷ್ಟವನ್ನುಂಟು ಮಾಡಿರುವುದು ಪ್ರಾಥಮಿಕ ವಿಚಾರಣೆಯ ವೇಳೆ ಬೆಳಕಿಗೆ ಬಂದಿದೆ.
ಈ ಹಿನ್ನೆಲೆಯಲ್ಲಿ ಆರ್ ಟಿ ಓ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಲು ಸಕ್ಷಮ ಪ್ರಾಧಿಕಾರಕ್ಕೆ ವರದಿ ಸಲ್ಲಿಸಿ ಅನುಮತಿ ಪಡೆದುಕೊಂಡು ಪ್ರಾಥಮಿಕ ವಿಚಾರಣೆ ನಡೆಸಿ, ಉಡುಪಿ ಹಾಗೂ ಮಂಗಳೂರು ಆರ್ ಟಿ ಓ ಕಚೇರಿ ಅಧಿಕಾರಿ ಹಾಗೂ ಸಿಬ್ಬಂದಿಗಳ ಮೇಲಿನ ಆರೋಪಗಳು ದೃಢಪಟ್ಟಿರುವುದರಿಂದ ಮೇಲಾಧಿಕಾರಿಗಳ ಅನುಮತಿ ಪಡೆದು ನವೆಂಬರ್ 17 ರಂದು ಪ್ರಕರಣ ದಾಖಲಿಸಲಾಗಿದೆ.
ಸಾರಿಗೆ ಇಲಾಖೆಯ ಅಧಿಕಾರಿಗಳ ವಿರುದ್ಧ ಅಧಿಕಾರ ದುರ್ಬಳಕೆ ಹಾಗೂ ದಾಖಲಾತಿಗಳ ತಿದ್ದುಪಡಿ ಕಾಯ್ದೆ ಅಡಿಯಲ್ಲಿ ಉಡುಪಿ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವುದಾಗಿ ಉಡುಪಿ ಲೋಕಾಯುಕ್ತ ಪೊಲೀಸರ ಪ್ರಕಟಣೆ ತಿಳಿಸಿದೆ.







